ಮಡಿಕೇರಿ, ಮಾ. ೬: ಕೊಡವ ಕುಟುಂಬಗಳ ನಡುವೆ ೨೦೧೮ ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ನಾಪೋಕ್ಲಿನಲ್ಲಿ ನಡೆದ ಕುಲ್ಲೇಟಿರ ಹಾಕಿ ಹಬ್ಬಕ್ಕೆ ಬಿಡುಗಡೆಯಾಗದೆ ಬಾಕಿಯಾಗಿದ್ದ ೪೦ ಲಕ್ಷ ರೂ.ಗಳಲ್ಲಿ ೨೫ ಲಕ್ಷಗಳನ್ನು ಬಿಡುಗಡೆ ಮಾಡಲು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಎಂ.ಉಮೇಶ್ ಶಾಸ್ತಿç ಆದೇಶಿಸಿದ್ದಾರೆ.

ಕ್ರೀಡಾ ಇಲಾಖೆಯ ಆಯುಕ್ತರಿಗೆ ಪತ್ರ ಬರೆದಿರುವ ಅವರು ೨೫ ಲಕ್ಷ ರೂ. ಬಿಡುಗಡೆಗೆ ಸರ್ಕಾರ ಅನುಮೋದನೆ ನೀಡಿರುವುದರಿಂದ ಹಣವನ್ನು ನಿಯಮಾನುಸಾರ ನೀಡುವಂತೆ ತಿಳಿಸಿದ್ದಾರೆ.

ಸರ್ಕಾರ ಮನವಿಗೆ ಪೂರಕ ರೀತಿಯಲ್ಲಿ ಸ್ಪಂದಿಸಿರುವ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ನಾಪೋಕ್ಲು ಕೊಡವ ಸಮಾಜದ ಕಾರ್ಯದರ್ಶಿ ಹಾಗೂ ಕುಲ್ಲೇಟಿರ ಹಾಕಿ ಹಬ್ಬದ ಪ್ರಮುಖ ಕುಲ್ಲೇಟಿರ ಅಜಿತ್ ನಾಣಯ್ಯ ಮುಖ್ಯಮಂತ್ರಿಗಳು ಹಾಗೂ ಕ್ರೀಡಾ ಸಚಿವರ ಬಳಿಗೆ ನಿಯೋಗ ಕರೆದೊಯ್ಯಲು ಕೊಡಗು ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸದಸ್ಯ ತೇಲಪಂಡ ಶಿವಕುಮಾರ್ ನಾಣಯ್ಯ ವಿಶೇಷ ಕಾಳಜಿ ತೋರಿ ಸಹಕರಿಸಿರುವುದಾಗಿ ತಿಳಿಸಿದ್ದಾರೆ.

ಅಲ್ಲದೆ ಸಂಪೂರ್ಣ ಸಹಕಾರ ನೀಡಿದ ಶಾಸಕರುಗಳಾದ ಕೆ.ಜಿ. ಬೋಪಯ್ಯ, ಎಂ.ಪಿ. ಅಪ್ಪಚ್ಚುರಂಜನ್, ಸಂಸದ ಪ್ರತಾಪ್ ಸಿಂಹ ಹಾಗೂ ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷ ಎಂ.ಟಿ. ನಾಣಯ್ಯ ಅವರುಗಳು ಕೂಡ ಅಭಿನಂದನಾರ್ಹರು ಎಂದು ತಿಳಿಸಿದರು.

ಒಟ್ಟು ರೂ. ೪೦ ಲಕ್ಷಗಳನ್ನು ನೀಡುವಂತೆ ಮನವಿ ಸಲ್ಲಿಸಲಾಗಿತ್ತು, ಆದರೆ ರೂ. ೨೫ ಲಕ್ಷ ಮಾತ್ರ ಬಿಡುಗಡೆಯಾಗಿದೆ. ಉಳಿದ ರೂ. ೧೫ ಲಕ್ಷಗಳನ್ನು ಸರ್ಕಾರ ಶೀಘ್ರ ಬಿಡುಗಡೆ ಮಾಡಬಹುದೆಂದು ಅಜಿತ್ ನಾಣಯ್ಯ ವಿಶ್ವಾಸ ವ್ಯಕ್ತಪಡಿಸಿದರು.

ಸರ್ಕಾರ ರೂ. ೨೫ ಲಕ್ಷ ಬಿಡುಗಡೆಗೆ ಅನುಮೋದನೆ ನೀಡಿರು ವುದು ಸ್ವಾಗತಾರ್ಹ ಕ್ರಮವಾಗಿದೆ. ಮನವಿಗೆ ಸಕಾಲದಲ್ಲಿ ಸ್ಪಂದಿಸಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಕ್ರೀಡಾ ಸಚಿವ ಡಾ. ಕೆ.ಸಿ. ನಾರಾಯಣಗೌಡ ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ತೇಲಪಂಡ ಶಿವಕುಮಾರ್ ನಾಣಯ್ಯ ತಿಳಿಸಿದರು.

ಕುಲ್ಲೇಟಿರ ಹಾಕಿ ಹಬ್ಬ ನಡೆದು ಮೂರು ವರ್ಷ ಕಳೆದ ನಂತರ ಹಣ ಬಿಡುಗಡೆಯಾಗಿದೆ. ಮುಂದಿನ ದಿನಗಳಲ್ಲಿ ಇದೇ ಪರಿಸ್ಥಿತಿ ಮುಂದುವರೆಯಬಾರದೆನ್ನುವ ಉದ್ದೇಶದಿಂದ ಕ್ರೀಡಾ ಪ್ರತಿಭೆಗಳ ಪ್ರೋತ್ಸಾಹಕ್ಕಾಗಿ ಕೊಡವ ಹಾಕಿ ಹಬ್ಬಕ್ಕೆ ಬಜೆಟ್‌ನಲ್ಲಿ ರೂ. ೫ ಕೋಟಿಗಳನ್ನು ಮೀಸಲಿಡಬೇಕೆಂದು ಈಗಾಗಲೇ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿದೆ ಎಂದರು.

ತಾ. ೮ ರಂದು ಮಂಡನೆಯಾಗುವ ಬಜೆಟ್‌ನಲ್ಲಿ ನಮ್ಮ ಬೇಡಿಕೆ ಈಡೇರಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.