ಗೋಣಿಕೊಪ್ಪಲು, ಮಾ. ೬: ಆದಿವಾಸಿ ಬುಡಕಟ್ಟು ಕಾರ್ಮಿಕರ ಸಂಘದ ವತಿಯಿಂದ ಪೊನ್ನಂಪೇಟೆ ತಾಲೂಕು ಪಂಚಾಯ್ತಿ ಆವರಣದಲ್ಲಿ ನಡೆಯುತ್ತಿರುವ ಅಹೋರಾತ್ರಿ ಧರಣಿ ೬ನೇ ದಿನಕ್ಕೆ ಕಾಲಿಟ್ಟದೆ. ಹಾತೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕುಂದ ಬಳಿ ಇರುವ ಬಸವೇಶ್ವರ ಬಡಾವಣೆಯ ಆದಿವಾಸಿಗಳು ಮೂಲಭೂತ ಸೌಕರ್ಯಕ್ಕೆ ಒತ್ತಾಯಿಸಿ ಕಳೆದ ೬ ದಿನಗಳಿಂದ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಸರ್ಕಾರ ಹಕ್ಕು ಪತ್ರ ನೀಡಿದ್ದರೂ ಇಲ್ಲಿಯ ತನಕ ಮೂಲಭೂತವಾಗಿ ಬೇಕಾದ ವಸತಿ ನಿರ್ಮಾಣ ಮಾಡಿಕೊಡುವಲ್ಲಿ ವಿಫಲರಾಗಿ ರುವುದನ್ನು ಖಂಡಿಸಿ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿರುವುದಾಗಿ ಹೋರಾಟದ ಮುಖಂಡ ಗಪ್ಪು ತಿಳಿಸಿದ್ದಾರೆ.

ಚಳುವಳಿಯ ಸ್ಥಳಕ್ಕೆ ಸಂಜೆ ೭ಗಂಟೆಗೆ ತೆರಳಿದ ಜಿಲ್ಲಾ ಪಂಚಾಯಿತಿ ಸದಸ್ಯೆ ಕೇಚಮಾಡ ಸರಿತಾ ಪೂಣಚ್ಚ ಹೋರಾಟಗಾರರ ಮನವೊಲಿಸುವ ಪ್ರಯತ್ನ ನಡೆಸಿ ಸ್ಥಳಕ್ಕೆ ತಹಶೀಲ್ದಾರ್ ಯೋಗಾನಂದ ಅವರನ್ನು ಕರೆಸಿದರು.

ಸುದೀರ್ಘ ಮಾತುಕತೆ ನಡೆಸಿದ ತಹಶೀಲ್ದಾರರು ಆದಿವಾಸಿಗಳಿಗೆ ಬೇಕಾದ ಅಗತ್ಯ ದಾಖಲಾತಿಗಳನ್ನು ಕಂದಾಯ ಇಲಾಖೆಯಿಂದ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ಇಲಾಖೆ ವತಿಯಿಂದ ಆಗುವ ಕೆಲಸಗಳನ್ನು ಖುದ್ದಾಗಿ ಮಾಡಿ ಕೊಡುವ ಭರವಸೆ ನೀಡಿದರಲ್ಲದೆ, ೧೨ ಮಂದಿಗೆ ಬುಧವಾರದಂದು ಕೇಳಿರುವ ದಾಖಲಾತಿಗಳನ್ನು ಒದಗಿಸಲಾಗುವುದು, ಪ್ರತಿಭಟನೆಯನ್ನು ಕೈಬಿಡುವಂತೆ ಮನವಿ ಮಾಡಿದರು.

ಆದರೆ ನಾವುಗಳು ಮನೆ ನಿರ್ಮಾಣಕ್ಕೆ ಬೇಕಾದ ಆದೇಶ ಪತ್ರ ಇಲ್ಲದೆ ಇಲ್ಲಿಂದ ತೆರಳಲು ಸಾಧ್ಯವಿಲ್ಲ. ಪ್ರತಿಭಟನೆಯ ಮೂಲಕ ಹಕ್ಕನ್ನು ಪಡೆಯುವುದಾಗಿ ಪ್ರತಿಭಟನಾಕಾರರು ತಿಳಿಸಿದರು. ಮನವೊಲಿಸಲು ಸತತ ಪ್ರಯತ್ನ ನಡೆಸಿದರೂ ಪ್ರಯೋಜನವಾಗದೆ ತಹಶೀಲ್ದಾರ್ ವಾಪಸ್ಸು ತೆರಳಿದರು.

ಈ ವೇಳೆ ಗಿರಿಜನ ಕಲ್ಯಾಣಾಭಿವೃದ್ಧಿ ತಾಲೂಕು ಅಧಿಕಾರಿಗಳಾದ ಗುರುಶಾಂತಪ್ಪ, ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀಜಾ ಸಾಜಿ ಅಚ್ಚುತ್ತನ್, ಪಿ.ಆರ್. ಪಂಕಜ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಕೋಳೇರ ಯಮುನಾ ಚಂಗಪ್ಪ, ಪ್ರಧಾನ ಕಾರ್ಯದರ್ಶಿ ಕರ್ತಮಾಡ ರಮ್ಯ, ಮುಂತಾದವರು ಹಾಜರಿದ್ದರು.