ಸೋಮವಾರಪೇಟೆ, ಮಾ. ೬: ರೂ. ೧೧ ಕೋಟಿ ವೆಚ್ಚದಲ್ಲಿ ಕೈಗೊಳ್ಳಲು ಉದ್ದೇಶಿಸಲಾಗಿರುವ ಕುಡಿಯುವ ನೀರಿನ ವಿವಿಧ ಕಾಮಗಾರಿಗಳಿಗೆ ಶಾಸಕ ಅಪ್ಪಚ್ಚು ರಂಜನ್ ಅವರು ಚಾಲನೆ ನೀಡಿದರು.
ಸೋಮವಾರಪೇಟೆ, ಶನಿವಾರ ಸಂತೆ, ಕೊಡ್ಲಿಪೇಟೆ, ಹೋಬಳಿಗಳಲ್ಲಿ ರಸ್ತೆ ಅಭಿವೃದ್ಧಿ ಸೇರಿದಂತೆ ಜೆ.ಜೆ. ಮಿಷನ್‌ನ ಕುಡಿ ಯುವ ನೀರು ಯೋಜನೆಗೆ ಚಾಲನೆ ನೀಡಿದ ಶಾಸಕರು, ಸರ್ಕಾರ ಈ ಬಾರಿ ಪ್ರತಿ ಗ್ರಾಮಗಳಿಗೂ ಕುಡಿಯುವ ನೀರು ಸರಬರಾಜಿನೊಂದಿಗೆ ರಸ್ತೆಗಳ ಅಭಿವೃದ್ಧಿಗೂ ಆದ್ಯತೆ ನೀಡಿದೆ. ಜನತೆ ಇವುಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದರು.
ಸಮೀಪದ ದೊಡ್ಡಮಳ್ತೆ ಗ್ರಾ.ಪಂ.ನ ಹೊನ್ನವಳ್ಳಿ ಗ್ರಾಮಕ್ಕೆ ೧೭ ಲಕ್ಷ ವೆಚ್ಚದಲ್ಲಿ ಕುಡಿಯುವ ನೀರಿನ ಯೋಜನೆ, ಗೌಡಳ್ಳಿ ಗ್ರಾ.ಪಂ.ನ ವಡ್ಡರಕೊಪ್ಪ ರಸ್ತೆ ಅಭಿವೃದ್ಧಿಗೆ ೧ ಕೋಟಿ ರೂ. ಹಾಗೂ ೧.೦೩ ಕೋಟಿ ರೂ. ವೆಚ್ಚದ ನೀರಿನ ಯೋಜನೆ, ನಿಡ್ತ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿಗೆ ೩೪.೬೮ ಲಕ್ಷ ರೂ., ಬ್ಯಾಡಗೊಟ್ಟ ಗ್ರಾಮದಲ್ಲಿ ರಸ್ತೆ ಕಾಮಗಾರಿಗೆ ೮೦ ಲಕ್ಷ, ಕೊಡ್ಲಿಪೇಟೆಯಲ್ಲಿ ರಸ್ತೆ ಅಭಿವೃದ್ಧಿಗೆ ೫೭ ಲಕ್ಷ ರೂ, ಬೆಸೂರು ಗ್ರಾಮದ ರಸ್ತೆ ಅಭಿವೃದ್ಧಿಗೆ ೯೮ ಲಕ್ಷ, ಹಂಡ್ಲಿ ರಸ್ತೆಗೆ ೯೫ ಲಕ್ಷ, ಆಲೂರು-ಅಂಕನಳ್ಳಿ ರಸ್ತೆಗೆ ೮೦ ಲಕ್ಷ, ಗಣಗೂರು, ಆಲೂರು ಸಿದ್ದಾಪುರ ರಸ್ತೆಗೆ ೧ ಕೋಟಿ, ಗಣಗೂರು ಗ್ರಾ.ಪಂ.ನಲ್ಲಿ ಕುಡಿಯುವ ನೀರು ಯೋಜನೆಗೆ ೧.೭೧ ಕೋಟಿ ರೂ, ಗೋಣಿಮರೂರು, ಗಣಗೂರು, ಮಾಲಂಬಿ ರಸ್ತೆಗೆ ೮೦ ಲಕ್ಷ ರೂ. ವೆಚ್ಚದ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು.
ಈ ಸಂದರ್ಭ ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಸದಸ್ಯೆ ಸರೋಜಮ್ಮ, ತಾ.ಪಂ. ಸದಸ್ಯೆ ಲೀಲಾವತಿ, ಸ್ಥಳೀಯ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರು, ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.