ಸೋಮವಾರಪೇಟೆ, ಮಾ. ೩: ಸೇವೆಯ ಹೆಸರಿನಲ್ಲಿ ಲಯನ್ಸ್ ಸಂಸ್ಥೆ ಪ್ರಪಂಚದಲ್ಲಿ ಪ್ರಾರಂಭವಾಯಿತು. ಅದರ ಉದ್ದೇಶ ಈಡೇರಿಸುವ ಕೆಲಸ ಪ್ರತಿಯೊಬ್ಬ ಸದಸ್ಯರು ಮಾಡಬೇಕಿದೆ. ಇಂದು ಸಮಾಜದಲ್ಲಿ ಸಾಕಷ್ಟು ಜನರು ಅಸಹಾಯಕರಿದ್ದು, ಅವರ ನೆರವಿಗೆ ನಿಲ್ಲಬೇಕಾಗಿದೆ ಎಂದು ಲಯನ್ಸ್ ಸಂಸ್ಥೆಯ ಪ್ರಾಂತೀಯ ಅಧ್ಯಕ್ಷ ಕೆ.ಎಂ. ಜಗದೀಶ್ ಹೇಳಿದರು.
ಲಯನ್ಸ್ ಸಂಸ್ಥೆಯ ವತಿಯಿಂದ ಇಲ್ಲಿನ ಮಹಿಳಾ ಸಮಾಜದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಯುವಕರಲ್ಲಿ ನಾಯಕತ್ವ ಗುಣಗಳನ್ನು ಬೆಳೆಸುವ ಲಯನ್ಸ್ ಸಂಸ್ಥೆ, ಹೆಚ್ಚಿನ ಜನರನ್ನು ಸದಸ್ಯರನ್ನಾಗಿ ಮಾಡಿಕೊಳ್ಳುವ ಮೂಲಕ ಇನ್ನಷ್ಟು ಕಾರ್ಯೋನ್ಮುಖವಾಗಬೇಕು. ಪ್ರಸಕ್ತ ಸಾಲಿನಲ್ಲಿ ಹಮ್ಮಿಕೊಂಡಿರುವ ಯೋಜನೆಗಳನ್ನು ನಿಗದಿತ ಅವಧಿಯಲ್ಲಿಯೇ ಮುಗಿಸುವ ಕೆಲಸವನ್ನು ಮಾಡಬೇಕೆಂದರು. ಯಾರು ತಮ್ಮ ದೈನಂದಿನ ಜೀವನದಲ್ಲಿ ಹೆಚ್ಚು ಸಂತೋಷದಿAದ ಇರುತ್ತಾರೋ, ಅಂತಹವರು ಮಾತ್ರ ಅಂದಿನ ಕೆಲಸವನ್ನು ಉತ್ಸಾಹದಿಂದ ಮಾಡಲು ಸಾಧ್ಯ. ಈ ನಿಟ್ಟಿನಲ್ಲಿ ಬದುಕನ್ನು ಸಂತೋಷವಾಗಿ ಸಾಗಿಸಬೇಕು ಎಂದರು. ಸೋಮವಾರಪೇಟೆ ಘಟಕದಿಂದ ತಾ. ೨೦ ರಂದು ಸ್ಥಳೀಯ ಒಕ್ಕಲಿಗರ ಸಮುದಾಯ ಭವನದಲ್ಲಿ ಪ್ರಾಂತೀಯ ಸಮ್ಮೇಳನ ನಡೆಸಲು ನಿರ್ಧರಿಸಲಾಗಿದೆ. ಶಾಶ್ವತ ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿಯೇ ಸಂಸ್ಥೆಗೆ ನೂತನ ಕಟ್ಟಡ ನಿರ್ಮಾಣ ಮಾಡುವ ಉದ್ದೇಶದಿಂದ ಸ್ಥಳ ಖರೀದಿಸಲು ತೀರ್ಮಾನಿಸಲಾಗಿದೆ ಎಂದು ಲಯನ್ಸ್ ಸಂಸ್ಥೆಯ ಅಧ್ಯಕ್ಷ ಕೆ.ಎನ್. ತೇಜಸ್ವಿ ಹೇಳಿದರು. ವೇದಿಕೆಯಲ್ಲಿ ವಲಯ ಅಧ್ಯಕ್ಷ ಶಶಿಕುಮಾರ್, ಸಂಸ್ಥೆಯ ನಿಕಟಪೂರ್ವ ಅಧ್ಯಕ್ಷ ಹರೀಶ್, ಕಾರ್ಯದರ್ಶಿ ಸಿ.ಕೆ. ರೋಹಿತ್, ಖಜಾಂಚಿ ಎಸ್.ಎನ್. ಯೋಗೇಶ್, ಕಾನೂನು ಸಲಹೆಗಾರರಾದ ಮೋಹನ್ದಾಸ್ ಉಪಸ್ಥಿತರಿದ್ದರು.