ಮಡಿಕೇರಿ, ಮಾ. ೩: ಗುತ್ತಿಗೆದಾರರ ಸಮಸ್ಯೆಗೆ ಸ್ಪಂದಿಸಿ ರಾಜ್ಯ ಸರ್ಕಾರ ಬಾಕಿ ಇರುವ ಅನುದಾನವನ್ನು ಬಿಡುಗಡೆಗೊಳಿಸಿದೆ ಎಂದು ಕೊಡಗು ಜಿಲ್ಲಾ ಗುತ್ತಿಗೆದಾರರ ಸಂಘದ ಅಧ್ಯಕ್ಷ ರವಿ ಚಂಗಪ್ಪ ಹರ್ಷ ವ್ಯಕ್ತಪಡಿಸಿದರು.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ೨೦೧೮ ಹಾಗೂ ೨೦೧೯ರಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಿಂದ ಹಾನಿಗೊಳಗಾಗಿದ್ದ ರಸ್ತೆ, ಸೇತುವೆ, ಕಟ್ಟಡವನ್ನು ದುರಸ್ತಿಗೊಳಿಸಲು ಜಿಲ್ಲೆಯ ಗುತ್ತಿಗೆದಾರರು ಜಿಲ್ಲಾಡಳಿತದೊಂದಿಗೆ ಕೈಜೋಡಿಸಿ ಕೊಡಗು ಮರು ನಿರ್ಮಾಣಕ್ಕೆ ಪೂರಕ ಬೆಂಬಲ ನೀಡಿದ್ದರು. ಆದರೆ, ಸರಕಾರ ಶೇ. ೨೫ ರಷ್ಟು ಅನುಪಾತದಲ್ಲಿ ಹಣವನ್ನು ಬಿಡುಗಡೆ ಮಾಡಲು ಆದೇಶಿಸಿತ್ತು. ಇದರಿಂದ ಗುತ್ತಿಗೆದಾರರು ಆರ್ಥಿಕ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇತ್ತು. ಜೊತೆಗೆ ಅಭಿವೃದ್ಧಿ ಕಾರ್ಯದ ಅನುದಾನ ಕೂಡ ಗುತ್ತಿಗೆದಾರರಿಗೆ ಸಮರ್ಪಕವಾಗಿ ಕೈ ಸೇರಿರಲಿಲ್ಲ. ಈ ನಿಟ್ಟಿನಲ್ಲಿ ಸಂಘಟನೆ ಫೆ.೧೯ ರಂದು ಪ್ರತಿಭಟನೆ ನಡೆಸಿತ್ತು. ಗುತ್ತಿಗೆದಾರರ ಸಮಸ್ಯೆ ಅರಿತು ಇದೀಗ ಶೇ. ೭೫ ರಷ್ಟು ಅನುದಾನವನ್ನು ಸರಕಾರ ಬಿಡುಗಡೆಗೊಳಿಸಿದೆ. ಇದರಿಂದ ಅಭಿವೃದ್ಧಿ ಕಾರ್ಯಕ್ಕೆ ಸಹಕಾರಿಯಾಗಲಿದೆ ಎಂದು ತಿಳಿಸಿದ ಅವರು ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತಕ್ಕೆ ಅಭಿನಂದನೆ ಸಲ್ಲಿಸಿದರು. ಗೋಷ್ಠಿಯಲ್ಲಿ ಜಿಲ್ಲಾ ಕಾರ್ಯದರ್ಶಿ ರವಿಕುಮಾರ್, ಮಡಿಕೇರಿ ತಾಲೂಕು ಅಧ್ಯಕ್ಷ ರಾಜೀವ್ ಲೋಚನ್, ಕಾರ್ಯದರ್ಶಿ ಕೆ.ಬಿ. ಪೂಣಚ್ಚ, ನಿರ್ದೇಶಕ ಬಿ.ಎಸ್. ಡಾಲಿ ಇದ್ದರು.