ಕುಶಾಲನಗರ, ಮಾ. ೧ : ದುಬಾರೆ ಸಾಕಾನೆ ಶಿಬಿರದಲ್ಲಿ ಕಳೆದ ಕೆಲವು ವರ್ಷಗಳಿಂದ ಆನೆಗಳ ನಿರ್ವಹಣೆ ದುಬಾರಿಯಾಗುವುದರೊಂದಿಗೆ ಅರಣ್ಯ ಇಲಾಖೆಗೆ ನುಂಗಲಾರದ ತುತ್ತಾಗಿ ಪರಿಣಮಿಸುತ್ತಿದೆ. ಶತಮಾನದ ಇತಿಹಾಸ ಹೊಂದಿರುವ ಕುಶಾಲನಗರ ಸಮೀಪದ ದುಬಾರೆ ಸಾಕಾನೆ ಶಿಬಿರ ಇತ್ತೀಚಿನ ದಿನಗಳಲ್ಲಿ ಸ್ವಯಂಘೋಷಿತ ಪ್ರವಾಸಿ ಕೇಂದ್ರವಾಗಿ ಪರಿವರ್ತನೆಗೊಳ್ಳುವುದ ರೊಂದಿಗೆ ಪ್ರವಾಸಿಗರ ಮನ ಸೂರೆಗೊಳ್ಳುವುದರಲ್ಲಿ ಯಶಸ್ವಿಯಾಗುತ್ತಿದೆ. ದಿನನಿತ್ಯ ನೂರಾರು ಸಂಖ್ಯೆಯ ಪ್ರವಾಸಿಗರು ಶಿಬಿರಕ್ಕೆ ಲಗ್ಗೆಯಿಡುತ್ತಿದ್ದಾರೆ. ವೇಗದ ಪ್ರವಾಸೋದ್ಯಮದ ನಡುವೆ ಸಾಕಾನೆಗಳ ಮೌನ ರೋಧನೆಯನ್ನು ಆಲಿಸಲು ಮಾತ್ರ ಅರಣ್ಯ ಇಲಾಖೆ ಅಶಕ್ತವಾಗಿದೆ.
ಜಿಲ್ಲೆ ಹಾಗೂ ನೆರೆ ಜಿಲ್ಲೆಗಳಲ್ಲಿ ಆನೆ ಮಾನವ ಸಂಘರ್ಷದ ಹಿನ್ನಲೆಯಲ್ಲಿ `ಆಪರೇಷನ್ ಎಲಿಫೆಂಟ್' ಕಾರ್ಯಾಚರಣೆ ಮೂಲಕ ಕಾಡಿನಿಂದ ನಾಡಿಗೆ ಬಂದು ದಾಂಧಲೆ ನಡೆಸುತ್ತಿದ್ದ ಕಾಡಾನೆಗಳನ್ನು ಹಿಡಿದು ದುಬಾರೆ ಸಾಕಾನೆ ಶಿಬಿರದಲ್ಲಿ ಕಳೆದ ಹತ್ತಾರು ವರ್ಷಗಳಿಂದ ಪಳಗಿಸಿ ಸಲಹುತ್ತಾ ಬರಲಾಗುತ್ತಿದೆ. ಸಾಕಾನೆಗಳ ಸಂಖ್ಯೆ ೩೦ ಕ್ಕೂ ಅಧಿಕವಾಗುತ್ತಿದ್ದ ಬೆನ್ನಲ್ಲೇ ಉತ್ತರ ಭಾರತದ ರಾಜ್ಯಗಳಿಗೆ ಕೆಲವು ಆನೆಗಳನ್ನು ಸ್ಥಳಾಂತರಿಸುವ ಪ್ರಕ್ರಿಯೆಯೂ ನಡೆದಿದೆ.
ಇದೀಗ ಪ್ರಸಕ್ತ ದುಬಾರೆ ಸಾಕಾನೆ ಶಿಬಿರದಲ್ಲಿ ೩೨ ಸಾಕಾನೆಗಳು ಇರಬೇಕಾಗಿದ್ದು ಒಂದು ಆನೆ ಶಿಬಿರದಿಂದ ರಾತ್ರೋರಾತ್ರಿ ಪರಾರಿಯಾಗುವಲ್ಲಿ ಯಶಸ್ವಿಯಾಗಿದೆ. ೨೦೧೯ ರ ನವೆಂಬರ್‌ನಲ್ಲಿ `ಕುಶ' ಎಂಬ ಆನೆ ತನ್ನ ಸರಪಳಿ ಕಿತ್ತು ಶಿಬಿರದಿಂದ ನಾಪತ್ತೆಯಾಗಿದೆ. ಇದುವರೆಗೂ ಪತ್ತೆಹಚ್ಚುವಲ್ಲಿ ಅರಣ್ಯ ಇಲಾಖೆ ವಿಫಲವಾಗಿದೆ. ಈ ಕುಶ ಆನೆಯನ್ನು ೨೦೧೬ ರಲ್ಲಿ ಚೆಟ್ಟಳ್ಳಿ ವ್ಯಾಪ್ತಿಯ ಅರಣ್ಯದಿಂದ `ಅಪರೇಷನ್ ಎಲಿಫೆಂಟ್' ಕಾರ್ಯಾಚರಣೆ ಮೂಲಕ ಹಿಡಿದು ದುಬಾರೆ ಸಾಕಾನೆ ಶಿಬಿರದಲ್ಲಿ ಪಳಗಿಸಲಾಗಿತ್ತು. ಆದರೆ ಅಸಮರ್ಪಕ ನಿರ್ವಹಣೆಯಿಂದ ಕುಶ ಒಂದು ದಿನ ರಾತ್ರಿ ಪರಾರಿಯಾಗಿದೆ. ಈ ಆನೆ ಚೆಟ್ಟಳ್ಳಿ ವ್ಯಾಪ್ತಿಯ ಇಬ್ಬರನ್ನು ಹತ್ಯೆ ಮಾಡಿತ್ತು. ಆ ಭಾಗದ ಬೆಳೆಗಾರರಿಗೆ ದುಸ್ವಪ್ನವಾಗಿ ಕಾಡಿದ್ದ ಕಾಡಾನೆಯನ್ನು ಸೇರಿದಂತೆ ಎರಡು (ಲವ-ಕುಶ) ಆನೆಗಳನ್ನು ಖೆಡ್ಡಾಗೆ ಬೀಳಿಸುವಲ್ಲಿ ಅಂದಿನ ಅರಣ್ಯ ಅಧಿಕಾರಿ, ಸಿಬ್ಬಂದಿಗಳು ಯಶಸ್ವಿಯಾಗಿದ್ದರು. ಸುಮಾರು ಮೂರು ಲಕ್ಷಕ್ಕೂ ಅಧಿಕ ಹಣ ವ್ಯಯ ಮಾಡಿ ಈ ಕಾರ್ಯಾಚರಣೆ ನಡೆದಿದ್ದು ನಂತರ ಮೂರು ವರ್ಷಗಳ ಕಾಲ ಶಿಬಿರದಲ್ಲಿ ಕುಶನಿಗೆ ಅಂದಾಜು ೫ ಲಕ್ಷಕ್ಕೂ ಅಧಿಕ ನಿರ್ವಹಣೆಯೊಂದಿಗೆ ಅಲ್ಲಿನ ಸಿಬ್ಬಂದಿಗಳಿಗೂ ವೇತನ ಸೇರಿದಂತೆ ಸುಮಾರು ೧೦ ಲಕ್ಷಕ್ಕೂ ಅಧಿಕ ಸರಕಾರದ ಹಣ ವ್ಯಯವಾಗಿತ್ತು. ಆದರೆ ಕುಶ ತನ್ನ ಸಹೋದರ `ಲವ'ನನ್ನು ಬಿಟ್ಟು ಏಕಾಂಗಿಯಾಗಿ ಕಾಡಿಗೆ ಹೋದವನು ತಿರುಗಿ ಬರಲಿಲ್ಲ. ಅರಣ್ಯ ಅಧಿಕಾರಿಗಳು ಕೂಡ ಅದನ್ನು ಹಿಡಿಯುವ ಗೋಜಿಗೆ ಹೋಗಿಲ್ಲ ಎನ್ನುವ ಆರೋಪಗಳು ಕೇಳಿಬರುತ್ತಿವೆ. ಆನೆ ಕಾಡಿನಲ್ಲಿದೆ ಎಂಬ ಉತ್ತರ ಮಾತ್ರ ಅರಣ್ಯ ಅಧಿಕಾರಿಗಳಿಂದ ಕೇಳಿಬರುತ್ತಿದೆ.
ಈ ನಡುವೆ ಆನೆ ಮಾವುತ ಕಾವಾಡಿಗರ ಸಂಘರ್ಷದ ನಡುವೆ ಮರಿಯಾನೆಯೊಂದು (ಕಾರ್ತಿಕ್) ಇಬ್ಬರು ನೌಕರರನ್ನು ಹತ್ಯೆ ಮಾಡಿತ್ತು. ಕೆಲವು ದಿನಗಳ ನಂತರ ನಿಗೂಢವಾಗಿ ಕಾರ್ತಿಕ್ ಸಾವನ್ನಪ್ಪಿದ್ದು, ಆತಂಕ ಸೃಷ್ಟಿಸಿತ್ತು. ಸಾಕಾನೆ ಶಿಬಿರದಲ್ಲಿ ಆಗಾಗ್ಯೆ ಮಾವುತ ಕಾವಾಡಿಗರ ವೇತನ ಪಾವತಿ ವಿಳಂಬದ ನಡುವೆ, ಅಲ್ಲದೆ ಖಾಯಂಗೊಳಿಸುವ ಬಗ್ಗೆಯೂ ಆನೆಗಳನ್ನು ಹೊರ ರಾಜ್ಯಕ್ಕೆ ಕಳುಹಿಸುವ ಬಗ್ಗೆಯೂ ಇಲಾಖಾಧಿಕಾರಿಗಳ ನಡುವೆ ಮೌನ ಸಂಘರ್ಷ ಕೂಡ ನಿರಂತರವಾಗಿ ನಡೆಯುತ್ತಿತ್ತು. ಈ ನಡುವೆ ಅಲ್ಲಿಯೂ ಸಲ್ಲದ ಇಲ್ಲಿಯೂ ಸಲ್ಲದ ಮೂಕ ಪ್ರಾಣಿಗಳ ರೋಧನೆ ಮಾತ್ರ ಯಾರಿಗೂ ಅರ್ಥವಾಗದೆ ಸಾಕಾನೆಗಳು ಮಾತ್ರ ದಿನದೂಡುತ್ತಿವೆ. ೨೦೧೫ ರಿಂದ ೨೦ ರ ತನಕ ಕೊಡಗು ಜಿಲ್ಲೆಯ ವಿವಿಧೆಡೆಗಳಿಂದ ಮತ್ತು ಹಾಸನ, ಬಂಡಿಪುರ ವ್ಯಾಪ್ತಿಯಿಂದ ಎರಡು ಆನೆಗಳು ಸೇರಿದಂತೆ ಒಟ್ಟು ೧೪ ಆನೆಗಳನ್ನು ಸೆರೆಹಿಡಿದು ಶಿಬಿರದಲ್ಲಿ ಪಳಗಿಸಲಾಗಿದೆ. ಅಲ್ಲದೆ ಅದಕ್ಕಿಂತಲೂ ಹಿಂದೆ ಶಿಬಿರದಲ್ಲಿದ್ದ ಆನೆಗಳು ಸೇರಿದಂತೆ ಒಟ್ಟು ೩೧ ಆನೆಗಳು ದುಬಾರೆಯಲ್ಲಿ ಕಾಣಬಹುದು. ಅದರಲ್ಲಿ ಮೈಸೂರು ದಸರಾದಲ್ಲಿ ಪಾಲ್ಗೊಳ್ಳುವ ಅತಿ ಹೆಚ್ಚಿನ ಸಂಖ್ಯೆಯ ೬ ಆನೆಗಳು ಕೂಡ ಸೇರಿಕೊಂಡಿವೆ. ದಸರಾದಲ್ಲಿ ಮಾತ್ರ ಈ ಆನೆಗಳಿಗೆ ಮತ್ತು ಮಾವುತ ಕವಾಡಿಗರಿಗೆ ಮೃಷ್ಟಾನ್ನ ಭೋಜನ ಹೊರತು ಪಡಿಸಿದರೆ ವರ್ಷದ ಉಳಿದ ಎಲ್ಲಾ ದಿನಗಳು ಸಾಮಾನ್ಯ ದಿನಗಳಾಗಿವೆ. ಇವುಗಳಲ್ಲಿ ಕೆಲವು ಸಂದರ್ಭ ಮೂರು ಆನೆಗಳನ್ನು ಮಡಿಕೇರಿ ರಸ್ತೆಯ ಆನೆಕಾಡು ಶಿಬಿರದಲ್ಲಿ ಬಿಡಲಾಗುತ್ತಿದೆ. ಆನೆಗಳ ಆಹಾರ ಮತ್ತು ಔಷಧೋಪಚಾರಕ್ಕೆ ಲಕ್ಷಾಂತರ ರೂಗಳ ವೆಚ್ಚವಾಗುತ್ತಿದ್ದು ಅರಣ್ಯ ಇಲಾಖೆ ಮಾಹಿತಿ ಪ್ರಕಾರ ೨೦೧೫ ರಿಂದ ೨೦೨೦ರ ತನಕ ಅಂದಾಜು ೫ ಕೋಟಿ ರೂಗಳ ವೆಚ್ಚ ತಗುಲಿದೆ. ೨೦೧೭-೧೮ ರಲ್ಲಿ ರೂ. ೯೬ ಲಕ್ಷ ಆಹಾರಕ್ಕೆ ವಾರ್ಷಿಕ ವೆಚ್ಚವಾದರೆ, ೨೦೧೬-೧೭ ರಲ್ಲಿ ಔಷಧೋಪಚಾರಕ್ಕೆ ರೂ. ೭೮ ಲಕ್ಷ ವೆಚ್ಚ ತಗುಲಿದ ದಾಖಲೆಗಳನ್ನು ಕಾಣಬಹುದು.
ದುಬಾರೆ ಸಾಕಾನೆ ಶಿಬಿರದಿಂದ ನಾಪತ್ತೆಯಾಗಿರುವ ಕುಶ ಆನೆ ಬಗ್ಗೆ ಮಾಹಿತಿ ಹಕ್ಕಿನಲ್ಲಿ ಟಿ. ಸುರೇಶ್ ಎಂಬವರು ಇಲಾಖೆಗೆ ಕುಶಾಲನಗರ ವಲಯಕ್ಕೆ ಸಂಬAಧಿಸಿದAತೆ ಕೇಳಿದ ಮಾಹಿತಿಗೆ ಉತ್ತರಿಸಿರುವ ಅರಣ್ಯ ಇಲಾಖೆ ಅಧಿಕಾರಿಗಳು, ದುಬಾರೆ ಸಾಕಾನೆ ಶಿಬಿರದಿಂದ ೨೦೧೯ ರ ನವೆಂಬರ್ ೧೭ ರಂದು ಕುಶ ಎಂಬ ಆನೆಯು ಮದದಿಂದ ಕಾಲಿನ ಚೈನು ಮತ್ತು ಬೇಡಿಯನ್ನು ತುಂಡರಿಸಿಕೊAಡು ತಪ್ಪಿಸಿಕೊಂಡಿದೆ ಎಂದಿದ್ದಾರೆ. ಓಡಿಹೋದ ಆನೆಯನ್ನು ಸಿಬ್ಬಂದಿಗಳ ಸಹಕಾರದೊಂದಿಗೆ ವಾಪಾಸ್ ಶಿಬಿರಕ್ಕೆ ಹುಡುಕಿ ಕರೆತರಲು ಪ್ರಯತ್ನಿಸಲಾಗುತ್ತಿದೆ. ಆದರೆ ಸದರಿ ಆನೆ ಕಾಡಾನೆಗಳ ಹಿಂಡಿನೊAದಿಗೆ ಸೇರಿಕೊಂಡಿದೆ. ಸಿಬ್ಬಂದಿಗಳನ್ನು ಕಂಡೊಡನೆ ಆನೆ ಓಡಿಹೋಗುತ್ತದೆ ಎಂದು ಲಿಖಿತ ಉತ್ತರ ನೀಡಿದ್ದಾರೆ.
ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಈ ಶಿಬಿರದ ಅತಿ ಹೆಚ್ಚಿನ ಆನೆಗಳು ಪಾಲ್ಗೊಳ್ಳುತ್ತಿರುವುದು ಸಂತಸದ ವಿಷಯವಾಗಿದ್ದರೂ ದುಬಾರೆ ಶಿಬಿರದ ಆನೆಗಳ ಬಗ್ಗೆ ಮಾತ್ರ ಇಲಾಖೆಯಾಗಲೀ ಸರಕಾರವಾಗಲಿ ಯಾವುದೇ ವಿಶೇಷ ಕಾಳಜಿ ವಹಿಸದಿರುವುದು ಇಲ್ಲಿ ಗಮನಿಸಬೇಕಾದ ಅಂಶ.
ಸರಕಾರದಿAದ ಅಸಮರ್ಪಕ ಅನುದಾನ ಬಿಡುಗಡೆ, ಮಾವುತ ಕಾವಾಡಿಗರ ಅಭದ್ರತೆ ಈ ನಡುವೆ ಆನೆ ಮಾವುತರು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳ ನಡುವೆ ಶೀಥಲ ಸಮರ. ಈ ನಡುವೆ ರೋಸಿಹೋದ ಆನೆಗಳಿಂದ ಸಿಬ್ಬಂದಿಗಳ ಮೇಲೆ ದಾಳಿ. ಇವು ಪ್ರಸ್ತುತ ಬೆಳವಣಿಗೆಗಳು.
ಹಲವು ಕಾರಣಗಳಿಂದ ಸಾಕಾನೆಗಳು ತನ್ನ ಮಾವುತ ಸಿಬ್ಬಂದಿಗಳ ಮೇಲೆಯೇ ದಾಳಿ ಮಾಡಲು ಪ್ರಾರಂಭಿಸಿದ್ದು ಇದರಿಂದ ಅಸಹನೆಗೊಂಡಿರುವ ಸಿಬ್ಬಂದಿಗಳು ಸಾಕಾನೆಗಳ ಆರೈಕೆ ಮಾಡುವಲ್ಲಿ ಬಹುತೇಕ ಹಿಂಜರಿಕೆ ಮಾಡುತ್ತಿರುವ ಬೆಳವಣಿಗೆಯೂ ಕಂಡುಬರುತ್ತಿವೆ. ಭಾರೀ ಗಾತ್ರದ ಪ್ರಾಣಿಗಳನ್ನು ಆರೈಕೆ ಮಾಡುವ ಸಂದರ್ಭ ಆಗಾಗ್ಯೆ ಅನಾಹುತಗಳು ಸಂಭವಿಸಿರುವುದು ಇತ್ತೀಚಿನ ಪ್ರಕರಣಗಳೇ ಸಾಕ್ಷಿಯಾಗಿದೆ.
ಮಾವುತ ಕಾವಾಡಿಗರು ದಿನದ ೨೪ ಗಂಟೆ ಆನೆಗಳನ್ನು ನೋಡಿಕೊಳ್ಳು ತ್ತಿದ್ದು ಈ ಹಿಂದೆ ಮರಿಯಾನೆಯೊಂದು ಇಬ್ಬರು ಮಾವುತರ ಹತ್ಯೆಗೆ ಕಾರಣವಾಗಿರುವ ನಡುವೆಯೇ ದಸರಾದಲ್ಲಿ ಪಾಲ್ಗೊಳ್ಳುತ್ತಿದ್ದ ಗೋಪಿ ಕೂಡ ಆಕಸ್ಮಿಕವಾಗಿ ತನ್ನ ಮಾವುತನನ್ನು ಘಾಸಿಗೊಳಿಸಿರುವುದು. ಈ ಎಲ್ಲಾ ಬೆಳವಣಿಗೆ ನಡುವೆ ಹಿರಿಯ ಮಾವುತರುಗಳು ತಮ್ಮ ಆನೆಗಳ ಆರೈಕೆಗೆ ಅನಧಿಕೃತವಾಗಿ ತಮ್ಮ ಕುಟುಂಬ ಸದಸ್ಯರನ್ನು ನೇಮಿಸಿಕೊಳ್ಳುವುದು, ಎಲ್ಲಾ ಬೆಳವಣಿಗೆಗಳು ನಡೆಯುತ್ತಿವೆ. ನೂರಾರು ಸಂಖ್ಯೆಯ ಪ್ರವಾಸಿಗರ ಲಗ್ಗೆಯಿಂದ ಆನೆಗಳು ಕೆಲವೊಮ್ಮೆ ರೋಸಿಹೋಗುತ್ತಿರುವ ಬೆಳವಣಿಗೆಯೂ ನಡೆಯುತ್ತಿವೆ.
ಶಿಬಿರದಲ್ಲಿ ಕಾಡಿನಿಂದ ನಾಡಿಗೆ ದಾಳಿ ಮಾಡುತ್ತಿರುವ ಆನೆಗಳನ್ನು ತಂದು ಪಳಗಿಸುತ್ತಿರುವ ಸಂದರ್ಭ ಕೂಡ ಸಾಕಾನೆಗಳನ್ನು ಬಳಸಲಾಗುತ್ತಿದೆ. ಸರಕಾರದ ಅಸಮರ್ಪಕ ಅನುದಾನ ಬಿಡುಗಡೆಯಿಂದ ಇಲಾಖೆಗೆ ಅವಶ್ಯವಿರುವ ಹಣದ ಕೊರತೆ ಕೂಡ ಈ ಶಿಬಿರದಲ್ಲಿ ನಡೆಯುತ್ತಿರುವ ಕೆಲವು ಘಟನೆಗಳಿಗೆ ಪರೋಕ್ಷ ಕಾರಣವಾಗುತ್ತಿದೆ ಎನ್ನುವುದು ಹಲವರ ಅನಿಸಿಕೆಯಾಗಿದೆ.
ದುಬಾರೆ ಸಾಕಾನೆ ಶಿಬಿರದ ಆನೆಗಳಿಗೆ ಬೇಕಾದ ಆಹಾರವನ್ನು ಇಲಾಖೆ ಖರೀದಿಸಿ ನೀಡುತ್ತಿದೆ. ಆದರೆ ನಿಧಾನಗತಿಯ ಹಣ ಬಿಡುಗಡೆ ಪ್ರಕ್ರಿಯೆ ಯಿಂದಾಗಿ ರೇಷನ್ ನೀಡಿದವರು ಕೂಡ ಹಣಕ್ಕಾಗಿ ಕಾಯುವ ಪರಿಸ್ಥಿತಿ ಕೆಲವೊಮ್ಮೆ ಉಂಟಾಗುತ್ತಿದೆ. ದುಬಾರೆ ಸಾಕಾನೆ ಶಿಬಿರಕ್ಕೆ ಭೇಟಿ ನೀಡುವ ಪ್ರವಾಸಿಗರಿಂದ ಆದಾಯ ಕೂಡ ನೇರವಾಗಿ ಇಲಾಖೆಗೆ ಬರದೆ ಸರಕಾರಕ್ಕೆ ಸಲ್ಲುತ್ತದೆ. ಆನೆಗಳಿಗೆ ದಿನನಿತ್ಯ ಬೇಕಾಗುವ ಹಸಿರು ಸೊಪ್ಪುಗಳನ್ನು ಶಿಬಿರದ ಕಾಡಿನಿಂದಲೇ ತರಬೇಕಾದ ಹಿನ್ನಲೆಯಲ್ಲಿ ಕಳೆದ ಹಲವು ವರ್ಷಗಳಿಂದ ಅರಣ್ಯದ ಮರಗಳು ಬರಿದಾಗುತ್ತಿರುವ ದೃಶ್ಯ ಕೂಡ ಸಾಮಾನ್ಯವಾಗಿದೆ. ಆನೆಗಳ ಆರೈಕೆಗೆ ನಿಯೋಜನೆಯಾಗಿರುವ ವನ್ಯಜೀವ ತಜ್ಞ ಕೂಡ ಹಲವೆಡೆ ಶಿಬಿರಗಳ ಉಸ್ತುವಾರಿ ನೀಡಿರುವುದು ಪ್ರತ್ಯೇಕವಾಗಿ ದುಬಾರೆ ಶಿಬಿರವನ್ನು ನೋಡಿಕೊಳ್ಳುವುದು ಹೆಚ್ಚುವರಿ ಹೊಣೆಯಾಗಿದೆ.
ಒಟ್ಟಾರೆ ಪುಂಡಾನೆಗಳ ಸೆರೆಯಿಂದ ಅತ್ತ ಬೆಳೆಗಾರರು ಸಂತಸದಲ್ಲಿದ್ದರೆ, ಇತ್ತ ಸಮಸ್ಯೆಗಳು ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಮತ್ತು ಮಾವುತ ಕಾವಾಡಿಗರ ಹೆಗಲೇರಿದ. -ಎಂ. ಎನ್. ಚಂದ್ರಮೋಹನ್