ಪೊನ್ನಂಪೇಟೆ. ಫೆ. ೨೪: ಪೊನ್ನಂಪೇಟೆ ಪ್ರೀಮಿಯರ್ ಲೀಗ್ ಸಂಘದ ವತಿಯಿಂದ, ಇಲ್ಲಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿದ್ದ ಮೊದಲನೇ ವರ್ಷದ ಪೊನ್ನಂಪೇಟೆ ಪ್ರೀಮಿಯರ್ ಲೀಗ್ ಕ್ರಿಕೆಟ್ ಕಪ್‌ನ ಫೈನಲ್ ಪಂದ್ಯದಲ್ಲಿ ರಮೇಶ್ ಮಾಲೀಕತ್ವದ ಸೈಕ್ಲೋನ್ ಕ್ರಿಕೆಟರ್ಸ್ ವಿರುದ್ಧ ಭರ್ಜರಿ ಜಯ ಸಾಧಿಸುವ ಮೂಲಕ ಕಾಕಮಾಡ ಅಜಿತ್ ಮಾಲೀಕತ್ವದ ಎ.ಜೆ. ಬಾಯ್ಸ್ ಕ್ರಿಕೆಟರ್ಸ್ ಪಿಪಿಎಲ್ ಚಾಂಪಿಯನ್ ಪಟ್ಟವನ್ನು ಮುಡಿಗೇರಿಸಿಕೊಂಡಿತು.

ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಎಜೆ ಬಾಯ್ಸ್ ಮೊದಲು ಬ್ಯಾಟಿಂಗ್ ಮಾಡುವ ಅವಕಾಶವನ್ನು ಸೈಕ್ಲೋನ್ ಕ್ರಿಕೆಟರ್ಸ್ ತಂಡಕ್ಕೆ ನೀಡಿತು. ಎಜೆ ಬಾಯ್ಸ್ ಬೌಲಿಂಗ್ ದಾಳಿಗೆ ನಲುಗಿದ ಸೈಕ್ಲೋನ್ ಕ್ರಿಕೆಟರ್ಸ್ ಸೀಮಿತ ೫ ಓವರ್‌ಗಳಲ್ಲಿ ೭ ವಿಕೆಟ್ ಕಳೆದುಕೊಂಡು ೨೪ ರನ್ನುಗಳ ಮೊತ್ತವನ್ನು ಕಲೆ ಹಾಕಿತು. ಗೆಲ್ಲಲು ೨೫ ರನ್ನುಗಳ ಗುರಿಯನ್ನು ಬೆನ್ನತ್ತಿದ ಎ.ಜೆ. ಬಾಯ್ಸ್ ತಂಡ ಇನ್ನೂ ೮ ಎಸೆತಗಳು ಬಾಕಿ ಇರುವಂತೆಯೇ ಗೆಲುವಿನ ನಗೆ ಬೀರಿತು. ಸೈಕ್ಲೋನ್ ಕ್ರಿಕೆಟರ್ಸ್ ತಂಡ ರನ್ನರ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.

ಫೈನಲ್ ಪಂದ್ಯಕ್ಕೂ ಮೊದಲು ಸೈಕ್ಲೋನ್ ಕ್ರಿಕೆಟರ್ಸ್ ಹಾಗೂ ಬ್ಲಾಕ್ ಕೋಬ್ರಾ ನಡುವೆ ನಡೆದ ಕ್ವಾಲಿಫೈಯರ್ ೧ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಬ್ಲಾಕ್ ಕೋಬ್ರಾ ನಿಗದಿತ ೫ ಓವರ್‌ಗಳಲ್ಲಿ ೫ ವಿಕೆಟ್‌ಗೆ ೨೯ ರನ್‌ಗಳಿಸಿತು. ನಂತರ ಬ್ಯಾಟಿಂಗ್ ಮಾಡಿದ ಸೈಕ್ಲೋನ್ ಕ್ರಿಕೆಟರ್ಸ್ ೨ ವಿಕೆಟ್ ನಷ್ಟಕ್ಕೆ ೩೦ ರನ್‌ಗಳಿಸಿ ನೇರವಾಗಿ ಫೈನಲ್ ಪ್ರವೇಶಿಸಿತು. ಎಲಿಮಿನೇಟರ್ ಪಂದ್ಯದಲ್ಲಿ ಎಜೆ ಬಾಯ್ಸ್ ವಿರುದ್ಧ ಸೋಲುಂಡ ಅವೆಂಜರ್ಸ್ ಪಂದ್ಯಾವಳಿಯಿAದ ಹೊರನಡೆಯಿತು. ೨ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಎಜೆ ಬಾಯ್ಸ್ ಕ್ರಿಕೆಟರ್ಸ್ ಬ್ಲಾಕ್ ಕೋಬ್ರಾ ಕ್ರಿಕೆಟರ್ಸ್ ವಿರುದ್ಧ ಜಯಗಳಿಸುವ ಮೂಲಕ ಫೈನಲ್‌ಗೆ ಲಗ್ಗೆ ಇಟ್ಟಿತು.

ಬೆಸ್ಟ್ ಬ್ಯಾಟ್ಸ್ಮನ್ ಪ್ರಶಸ್ತಿಯನ್ನು ಸೂಪರ್ ಕಿಂಗ್ಸ್ ತಂಡದ ಮಂಜು, ಬೆಸ್ಟ್ ಬೌಲರ್ ಎ.ಜೆ.ಬಾಯ್ಸ್ ಕ್ರಿಕೆಟರ್ಸ್ನ ಮಯೂರ್, ಬೆಸ್ಟ್ ಆಲ್-ರೌಂಡರ್ ಬ್ಲಾಕ್ ಕೋಬ್ರಾ ಕ್ರಿಕೆಟರ್ಸ್ ಮನು, ಬೆಸ್ಟ್ ಕ್ಯಾಚ್ ಪ್ರಶಸ್ತಿಯನ್ನು ಪ್ರಮೋದ್ ಹಾಗೂ ಮನು, ಶಿಸ್ತುಬದ್ಧ ತಂಡ ಪ್ರಶಸ್ತಿಯನ್ನು ಆಲ್ ಸ್ಟಾರ್ ಕ್ರಿಕೆಟರ್ಸ್ ತಂಡ ಪಡೆದುಕೊಂಡಿತು. ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಪೊನ್ನಂಪೇಟೆ ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖರಾದ ಕೋಟೆರ ಕಿಶನ್ ಉತ್ತಪ್ಪ, ಬಿಜೆಪಿ ಕೃಷಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮತ್ರಂಡ ಕಬೀರ್‌ದಾಸ್, ಮಾಜಿ ತಾ. ಪಂ. ಸದಸ್ಯ ಶಾಜಿ ಅಚ್ಚುತನ್, ಕುಮಾರ್, ಗ್ರಾ. ಪಂ. ಸದಸ್ಯೆ ಸುಮಿತ ಹಾಗೂ ಹ್ಯಾರಿಸ್ ಹಾಗೂ ಪಂದ್ಯಾವಳಿ ಆಯೋಜಕರು ಹಾಜರಿದ್ದು, ಬಹುಮಾನ ವಿತರಿಸಿದರು. ಮಣಿ, ಮಧು, ಸಂತೋಷ್ ಹಾಗೂ ರೈನಾ ತೀರ್ಪು ಗಾರರಾಗಿ ಕಾರ್ಯ ನಿರ್ವಹಿಸಿದರು.