ಕಣಿವೆ, ಫೆ. ೨೪: ನೂತನ ಕುಶಾಲನಗರ ತಾಲೂಕು ತಹಶೀಲ್ದಾರ್ ಕಚೇರಿಗೆ ಕೊಡಗು ಜಿಲ್ಲಾ ಉಪವಿಭಾಗಾಧಿಕಾರಿ ಈಶ್ವರ ಕುಮಾರ್ ಖಂಡು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬಳಿಕ ‘ಶಕ್ತಿ’ಯೊಂದಿಗೆ ಮಾತನಾಡಿದ ಅವರು, ಕುಶಾಲನಗರ ಹೊಸ ತಾಲೂಕಾಗಿರುವುದರಿಂದ ಅಧಿಕಾರಿ ಹಾಗೂ ಸಿಬ್ಬಂದಿಗಳ ನಿಯೋಜನೆ ಸೇರಿದಂತೆ ಇನ್ನಿತರ ಅಗತ್ಯ ಸೌಲಭ್ಯ ಆಗಬೇಕಿದೆ.

ಸದ್ಯಕ್ಕೆ ಜನಸಾಮಾನ್ಯರಿಗೆ ಕೇಂದ್ರ ಸ್ಥಾನವಾಗಿರುವ ನಾಡ ಕಚೇರಿ ಕಟ್ಟಡದಲ್ಲೇ ಹೊಸ ತಾಲೂಕು ಕಚೇರಿ ಕಾರ್ಯಾಚರಿಸುತ್ತಿದೆ. ಈ ನಿಟ್ಟಿನಲ್ಲಿ ಈಗಾಗಲೇ ತಹಶೀಲ್ದಾರ್ ಅವರನ್ನು ನೇಮಕಗೊಳಿಸಲಾಗಿದೆ ಎಂದರು.

ಕಳೆದ ಎರಡು ದಿನಗಳ ಹಿಂದಷ್ಟೇ ಶನಿವಾರಸಂತೆ ಭಾಗದ ಕೆಲವು ಕಡೆಗಳಲ್ಲಿ ಸುರಿದ ಆಲಿಕಲ್ಲು ಮಳೆಯಿಂದಾಗಿ ಅಲ್ಲಿನ ಕೃಷಿಕರಿಗೆ ಆಗಿರುವ ನಷ್ಟವನ್ನು ಖುದ್ದು ಪರಿಶೀಲಿಸಿ ಸರ್ಕಾರಕ್ಕೆ ವರದಿ ಕಳಿಸಲು ಅಲ್ಲಿಗೆ ಹೋಗಿ ಬಂದಿದ್ದೇನೆ. ಈ ಬಗ್ಗೆ ಕೂಡಲೇ ಸಮಗ್ರ ಅಂದಾಜು ಪಟ್ಟಿ ತಯಾರಿಸಿ ಸಲ್ಲಿಸಲು ಕಂದಾಯ ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ ಎಂದು ಎಸಿ ಈಶ್ವರ ಕುಮಾರ್ ತಿಳಿಸಿದರು.

ಈ ಸಂದರ್ಭ ಪ್ರೊಬೆಷನರಿ ಎಸಿ ಕಾವ್ಯ, ತಹಶೀಲ್ದಾರ್ ಪ್ರಕಾಶ್, ಕಂದಾಯಾಧಿಕಾರಿ ಸಂತೋಷ್, ಗ್ರಾಮ ಲೆಕ್ಕಿಗರಾದ ಗೌತಮ್, ಸಚಿನ್, ಪೀರ್ ಮೊಹಮ್ಮದ್, ಲೋಕೇಶ್, ನಿವ್ಯ ಮೊದಲಾದವರಿದ್ದರು.