ಶ್ರೀಮಂಗಲ, ಫೆ. ೨೪: ನೂತನ ಪೊನ್ನಂಪೇಟೆ ತಾಲೂಕಿನ ಶ್ರೀಮಂಗಲ, ಟಿ. ಶೆಟ್ಟಿಗೇರಿ ಸೇರಿದಂತೆ ಸುತ್ತಮುತ್ತಲಿನ ಹಲವು ಗ್ರಾಮಗಳಲ್ಲಿನ ಜನತೆಗೆ ತೀವ್ರ ಆತಂಕ ಸೃಷ್ಟಿಯಾಗಿರುವ ಹುಲಿ ದಾಳಿ ಪ್ರಕರಣ ಇನ್ನೂ ತಹಬದಿಗೆ ಬಂದಿಲ್ಲ. ಈಗಾಗಲೇ ಇಬ್ಬರು ವ್ಯಕ್ತಿಗಳು ಹುಲಿಯಿಂದ ಜೀವ ಕಳೆದುಕೊಂಡಿರುವ ಘಟನೆ ಒಂದೆಡೆಯಾದರೆ, ಬೇರೆ ಬೇರೆ ಗ್ರಾಮಗಳಲ್ಲಿ ಹುಲಿ ಕಾಣಿಸಿಕೊಳ್ಳುತ್ತಿರುವುದು, ಜಾನುವಾರುಗಳು ಬಲಿಯಾಗುತ್ತಿರುವುದು ಮುಂದೇನು ಎಂಬAತಾಗಿದೆ.ನರಭಕ್ಷಕ ಹುಲಿಯನ್ನು ಈಗಾಗಲೇ ಸೆರೆ ಹಿಡಿಯಲಾಗಿದೆ. ಆದರೆ ಸೆರೆಯಾಗಿರುವ ಹುಲಿ ಇದಲ್ಲ ಎಂಬ ಸಂಶಯವೂ ಇರುವುದರಿಂದ ಜನತೆ ಆತಂಕದಲ್ಲೇ ದಿನ ಕಳೆಯುತ್ತಿದ್ದಾರೆ. ಈ ನಡುವೆ ಅಲ್ಲಲ್ಲಿ ಕಾಣಿಸಿಕೊಳ್ಳುತ್ತಿರುವ ಮತ್ತೊಂದು ಹುಲಿರಾಯನನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ಹಮ್ಮಿಕೊಂಡಿರುವ ಕಾರ್ಯಾಚರಣೆಗೆ ಇನ್ನೂ ಯಶಸ್ಸು ಸಿಕ್ಕಿಲ್ಲ. ಕಾರ್ಯಾಚರಣೆ ನಾಲ್ಕನೇ ದಿನ ದಾಟಿದ್ದು ಈ ತಂಡಕ್ಕೆ ಹುಲಿಯ ಜಾಡು ಅರಿವಾಗುತ್ತಿಲ್ಲ.ಮಳೆಯ ಪರಿಸ್ಥಿತಿ ಹಾಗೂ ಭಯಭೀತರಾಗಿರುವ ಜನತೆ ಪಟಾಕಿ ಸಿಡಿಸುವುದು, ಪದೇ ಪದೇ ಟಾರ್ಚ್ ಬೆಳಕುಗಳನ್ನು ಬೆಳಗಿಸುವುದು, ಶಬ್ಧ ಮಾಡುವ ಕಾರಣದಿಂದ ಹುಲಿ; ಕಾರ್ಯಾಚರಣೆ ತಂಡದ ಬಲೆಗೆ ಬೀಳುತ್ತಿಲ್ಲವೆನ್ನಲಾಗಿದೆ. ಆದರೆ, ಬೇರೆ ಬೇರೆ ಭಾಗಗಳಲ್ಲಿ ಜನತೆಗೆ ವ್ಯಾಘ್ರ ಕಾಣಿಸಿಕೊಳ್ಳುತ್ತಿರುವುದು, ಹೆಜ್ಜೆ ಗುರುತು ಪತ್ತೆಯಾಗುತ್ತಿರುವುದು ಪರಿಸ್ಥಿತಿ ಬಿಗಡಾಯಿಸುವಂತಾಗಿದೆ. ಅರಣ್ಯ ಇಲಾಖಾ ತಂಡ ಹುಲಿಯ ಸೆರೆಗೆ ಹಗಲು-ರಾತ್ರಿ ಪ್ರಯತ್ನ ಮುಂದುವರಿಸಿದ್ದು, ಈ ವಿಭಾಗದಲ್ಲಿ ಅಧಿಕ ಸಂಖ್ಯೆಯ ಅಧಿಕಾರಿಗಳು-ಸಿಬ್ಬಂದಿಗಳು ನಿಯೋಜಿತರಾಗಿದ್ದಾರೆ.ಸಮೀಪದ ಬಿರುನಾಣಿ ಗ್ರಾ.ಪಂ ವ್ಯಾಪ್ತಿಯಲ್ಲಿ ತಾ. ೨೩ ರಂದು ಹೈಸೊಡ್ಲೂರು-ಬಾಡಗರಕೇರಿ ಮುಖ್ಯ ರಸ್ತೆಯಲ್ಲಿ ಮತ್ತು (ಮೊದಲ ಪುಟದಿಂದ) ಪೊರಾಡು ಗ್ರಾಮದಲ್ಲಿ ಹುಲಿ ಸಾರ್ವಜನಿಕರಿಗೆ ಪ್ರತ್ಯಕ್ಷವಾಗಿದೆ. ಇದಲ್ಲದೆ, ಟಿ.ಶೆಟ್ಟಿಗೇರಿ ಸಮೀಪ ತಾವಳಗೇರಿ ಗ್ರಾಮದ ಗುಟ್ಟುಕೊಲ್ಲಿಯಲ್ಲಿಯೂ ಜನರಿಗೆ ಹುಲಿ ಗೋಚರಿಸಿದೆ.

ಟಿ.ಶೆಟ್ಟಿಗೇರಿ ಸಮೀಪ ತಾವಳಗೇರಿ ಗ್ರಾಮದಲ್ಲಿ ತಾ. ೨೨ರ ರಾತ್ರಿ ರೈತ ಮಚ್ಚಮಾಡ ಜೀವನ್ ಬೋಪಣ್ಣ ಅವರ ಕರುವನ್ನು ಕೊಂದಿರುವ ಜಾಗದಲ್ಲಿ ಕರುವಿನ ಕಳೆಬರ ಇರುವ ಸ್ಥಳದ ಸಮೀಪ ಹುಲಿ ಹೆಜ್ಜೆ ಗುರುತು ಪತ್ತೆಯಾಗಿದೆ.

ಟಿ.ಶೆಟ್ಟಿಗೇರಿ ಗ್ರಾಮದಲ್ಲಿ ಕಾರ್ಮಿಕ ಮಹಿಳೆಯನ್ನು ಮತ್ತು ಕುಮಟೂರು ಗ್ರಾಮದಲ್ಲಿ ವಿದ್ಯಾರ್ಥಿಯನ್ನು ಕೊಂದಿದ್ದ ನಂತರ ತಾವಳಗೇರಿ ಗ್ರಾಮದಲ್ಲಿ ಎರಡು ಕಡೆ ಹಸುಗಳನ್ನು ಕೊಂದ ಸ್ಥಳದಲ್ಲಿ ಹುಲಿಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ೨ ಅಟ್ಟಣಿಗೆ ನಿರ್ಮಿಸಿ ಹುಲಿಯನ್ನು ಶಾರ್ಪ್ ಶೂಟರ್ ಮೂಲಕ ಅರವಳಿಕೆ ನೀಡಿ ಸೆರೆ ಹಿಡಿಯಲು ಕಾರ್ಯಾಚರಣೆಗೆ ಸಿದ್ಧತೆ ಮಾಡಿಕೊಂಡಿದೆ. ಸ್ಥಳದಲ್ಲಿ ೨ ಅಟ್ಟಣಿಗೆಯೊಂದಿಗೆ ಕ್ಯಾಮರಗಳನ್ನು ಅಳವಡಿಸಲಾಗಿದ್ದು, ದೂರದಿಂದ ಹುಲಿ ಆಗಮಿಸುವುದನ್ನು ಗುರುತಿಸಲು ಅತ್ಯಾಧುನಿಕ ಬೈನಾಕ್ಯೂಲರ್ ವ್ಯವಸ್ಥೆಯನ್ನು ಮಾಡಿಕೊಂಡಿದೆ.

ಕಾರ್ಯಾಚರಣೆ ತಂಡ ಹಗಲು ರಾತ್ರಿ ಹುಲಿ ಸೆರೆಗೆ ಪ್ರಯತ್ನಿಸುತ್ತಿದ್ದು ಟಿ.ಶೆಟ್ಟಿಗೇರಿಯಲ್ಲಿ ಕಾರ್ಮಿಕ ಮಹಿಳೆಯನ್ನು ಹುಲಿ ಕೊಂದಿರುವ ಸ್ಥಳದ ಸಮೀಪವೇ ತಾತ್ಕಾಲಿಕ ಶೆಡ್ ನಿರ್ಮಿಸಿ ಅಲ್ಲಿ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಬೀಡುಬಿಟ್ಟಿದ್ದಾರೆ. ಸ್ಥಳದಲ್ಲಿಯೇ ಕಾರ್ಯಾಚರಣೆ ತಂಡ ಸುಮಾರು ೧೫೦ ಅಧಿಕಾರಿ-ಸಿಬ್ಬಂದಿಗಳಿಗೆ ಅಡುಗೆ ತಯಾರಿಸುವುದು ಮತ್ತು ಅರಣ್ಯ ಇಲಾಖೆಯ ಕಚೇರಿ ಕೆಲಸವನ್ನು ಸಹ ಕಂಪ್ಯೂಟರ್ ಇಟ್ಟುಕೊಂಡು ಸ್ಥಳದಲ್ಲಿಯೇ ನಿರ್ವಹಿಸಲಾಗುತ್ತಿದೆ.

ಗಂಭೀರ ಸನ್ನಿವೇಶವಲ್ಲವೇ...?

ನಿರಂತರವಾಗಿ ಹುಲಿ ದಾಳಿ ನಡೆಯುತ್ತಿರುವುದು ಸರಕಾರದ ಪಾಲಿಗೆ ಗಂಭೀರ ವಿಚಾರವಲ್ಲವೇ? ಎಂದು ಜನತೆ ಪ್ರಶ್ನಿಸುವಂತಾಗಿದ್ದು, ಇದೀಗ ಆಕ್ರೋಶದ ಸನ್ನಿವೇಶ ನಿರ್ಮಾಣವಾಗುತ್ತಿದೆ. ಕಳೆದ ಹಲವು ವರ್ಷಗಳಿಂದ ನಿರಂತರವಾಗಿ ವನ್ಯಪ್ರಾಣಿಗಳ ಉಪಟಳದ ನಡುವೆ ಜನತೆ ಬದುಕು ಸಾಗಿಸುವಂತಾಗಿದ್ದು, ಒಂದು ರೀತಿಯಲ್ಲಿ ಇದಕ್ಕೆ ಹೊಂದಿಕೊAಡAತಾಗಿತ್ತು.

ಆದರೆ, ಇದೀಗ ಇಬ್ಬರು ಅಮಾಯಕರು ವ್ಯಾಘ್ರನ ದಾಳಿಗೆ ಸಿಲುಕಿದ್ದು, ಇದನ್ನು ಅರಣ್ಯ ಇಲಾಖೆಯ ಉನ್ನತಾಧಿಕಾರಿಗಳು, ಸರಕಾರ ಅತ್ಯಂತ ಗಂಭೀರ ವಿಚಾರವೆಂದು ಪರಿಗಣಿಸಿ ಶಾಶ್ವತ ಪರಿಹಾರದ ನಿಟ್ಟಿನಲ್ಲಿ ಯೋಜನೆ ರೂಪಿಸಬೇಕು ಎಂಬ ಆಗ್ರಹ ವ್ಯಕ್ತಗೊಳ್ಳುತ್ತಿದೆ.