ನಾಪೋಕ್ಲು, ಫೆ. ೨೪: ನಾಪೋಕ್ಲು ಪ್ರಥಮ ದರ್ಜೆ ಕಾಲೇಜಿಗೆ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಒದಗಿಸುವದು ನಮ್ಮ ಜವಾಬ್ದಾರಿ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷರು, ಶಾಸಕ ಕೆ.ಜಿ.ಬೋಪಯ್ಯ ಹೇಳಿದರು.
ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ವಿದ್ಯಾರ್ಥಿ ವೇದಿಕೆ ಹಾಗೂ ಸಾಂಸ್ಕೃತಿಕ, ಕ್ರೀಡೆ, ಎನ್ಎಸ್ಎಸ್ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ದೀಪ ಬೆಳಗಿಸಿ ಅವರು ಮಾತನಾಡಿದರು. ಕಾಲೇಜಿನ ಸಂಪೂರ್ಣ ಅಭಿವೃದ್ಧಿಗೆ ೩೧ ಲಕ್ಷ ರೂ.ಗಳನ್ನು ಮಂಜೂರು ಮಾಡಿ ಕ್ರಿಯಾ ಯೋಜನೆ ರೂಪಿಸಲಾಗಿದೆ. ಇದರಲ್ಲಿ ಕುಡಿಯುವ ನೀರಿನ ವ್ಯವಸ್ಥೆಯೂ ಸೇರಿದೆ. ಮೊದಲು ಒಂದು ಕೋಟಿ ರೂ. ಮಂಜೂ ರಾಗಿತ್ತು. ಆದರೆ, ವಿದ್ಯಾರ್ಥಿಗಳ ಕೊರತೆಯಿರುವದರಿಂದ ಅದನ್ನು ಬಿಡುಗಡೆಗೊಳಿಸಿಲ್ಲ. ಈಗ ವಿದ್ಯಾರ್ಥಿಗಳ ಕೊರತೆ ಹೆಚ್ಚಾಗಿ ಕಂಡು ಬರುತ್ತಿದೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಪ್ರತಿಭೆ ಹೊರತರುವ ನಿಟ್ಟಿನಲ್ಲಿ ಇಲ್ಲಿ ಪ್ರಥಮ ದರ್ಜೆ ಕಾಲೇಜು ಆರಂಭಿಸಲಾಯಿತು. ಇತ್ತೀಚಿನ ವರ್ಷಗಳಲ್ಲಿ ಸರಕಾರಿ ಕಾಲೇಜುಗಳಲ್ಲಿ ಉತ್ತಮ ಫಲಿತಾಂಶ ಬರುತ್ತಿದೆ. ಪೋಷಕರು ತಮ್ಮ ಮಕ್ಕಳನ್ನು ಸರಕಾರಿ ಕಾಲೇಜಿಗೆ ಸೇರಿಸುವತ್ತ ಗಮನಹರಿಸಬೇಕು ಎಂದರು.
ಮುಖ್ಯ ಭಾಷಣಕಾರರಾಗಿ ಆಗಮಿಸಿ ಮಾತನಾಡಿದ ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ನೂರುನ್ನೀಸಾ ನಮ್ಮ ಸಮಾಜದಲ್ಲಿ ರಾವಣನಿಗಿಂತ ನೀಚನಾದ ಅಪ್ಪ, ಚಿಕ್ಕಪ್ಪ, ಅಣ್ಣ, ಮಾವಂದಿರು, ಸ್ನೇಹಿತರು ಪೋಕ್ಸೋ ಕಾಯ್ದೆಯಡಿಯಲ್ಲಿ ಬಂಧನಕ್ಕೊಳ ಗಾಗುತ್ತಾರೆ ಎಂದು ವಿಷಾಧ ವ್ಯಕ್ತಪಡಿಸಿದರು.
ಇತ್ತೀಚಿನ ದಿನಗಳಲ್ಲಿ ಶೇ. ೭೦ರಷ್ಟು ಯುವಕರು ಪೋಕ್ಸೊ ಮತ್ತಿತರ ಪ್ರಕರಣಗಳಲ್ಲಿ ಜೈಲು ಸೇರಿ ಜೈಲಿನಲ್ಲೇ ತಮ್ಮ ಆಯುಷವನ್ನು ಕಳೆಯು ವಂತಾಗಿದೆ. ಇವರು ಜೈಲಿನಲ್ಲಿ ಕೂತರೆ ಸಮಾಜದ ಉದ್ಧಾರ ಹೇಗೆ ಸಾಧ್ಯ ಎಂದರು. ಅಲ್ಪಸಂಖ್ಯಾತ ವಿದ್ಯಾರ್ಥಿನಿಯರು ಎಲ್ಲದರಲ್ಲಿಯೂ ಮುಂದಿದ್ದಾರೆ. ಆದರೆ, ಅವರಿಗೆ ಪೂರ್ತಿಯಾಗಿ ವಿದ್ಯೆ ನೀಡಲಾಗುತ್ತಿಲ್ಲ. ಅವರು ಸಾಧನೆ ಮಾಡಿದರೆ ಏನು ತಪ್ಪು. ನಮ್ಮ ಧರ್ಮ ಗ್ರಂಥಗಳಲ್ಲಿ ವಿದ್ಯಾರ್ಥಿನಿಯರು ಶಿಕ್ಷಣ ಪಡೆಯಬಾರದು ಎಂದು ಎಲ್ಲೂ ಹೇಳಿಲ್ಲ. ಹಿಂದೆ ಮಾನವೀಯ ಮೌಲ್ಯಗಳಿಗೆ ಹೆಚ್ಚು ಒತ್ತು ನೀಡಲಾಗುತ್ತಿತ್ತು. ಇಂದು ಮಾನವೀಯ ಮೌಲ್ಯಗಳು ಕಡಿಮೆಯಾಗಿವೆ. ಭೌತಿಕ ಮತ್ತು ನೈತಿಕ ಶಿಕ್ಷಣದ ಅಗತ್ಯ ಇಂದಿನ ಮಕ್ಕಳಿಗೆ ಹೆಚ್ಚಾಗಿ ಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಪಾಡಿಯಮ್ಮಂಡ ಮುರಳಿ ಕರುಂಬಮ್ಮಯ್ಯ, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಬಿದ್ದಾಟಂಡ ರಮೇಶ್ ಚಂಗಪ್ಪ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಡಾ. ಕಾವೇರಿ ಪ್ರಕಾಶ್ ಮಾತನಾಡಿದರು. ಪ್ರಾದ್ಯಾಪಕಿ ಜೀವಿತಾ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು.
ಈ ಸಂದರ್ಭ ಕಾಲೇಜು ವಿದ್ಯಾರ್ಥಿ ಸಮಿತಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ನ್ಯಾಯಾಧೀಶೆ ನೂರುನ್ನೀಸಾ ಪ್ರಮಾಣ ವಚನ ಬೋಧಿಸಿದರು. ಕಾರ್ಯಕ್ರಮದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರು, ಪ್ರಾಧ್ಯಾಪಕ ವೃಂದ ಹಾಜರಿದ್ದರು.
ವಿದ್ಯಾರ್ಥಿಗಳಿಗೆ ಪ್ರಾರ್ಥನೆ, ಎನ್.ಎಸ್.ಎಸ್. ಸಂಯೋಜಕ ಹೆಚ್.ಎಸ್. ನಂದೀಶ್ ಸ್ವಾಗತ, ಪ್ರಾಧ್ಯಾಪಕಿ ಲೀನಾ ನಿರೂಪಿಸಿ, ಸಾನಿಯಾ ವಂದಿಸಿದರು.