ಕಣಿವೆ/ಮಡಿಕೇರಿ ಫೆ. ೨೪: ದುಬಾರೆ ಸಾಕಾನೆ ಶಿಬಿರದ ಗಂಡು ಸಾಕಾನೆ ಕುಶ ಸುಮಾರು ಒಂದು ವರ್ಷದ ಹಿಂದೆ, ಮದವೇರಿದ ಪರಿಣಾಮ ಶಿಬಿರದಿಂದ ತಪ್ಪಿಸಿಕೊಂಡು ಕಾಡಿನತ್ತ ಧಾವಿಸಿದ್ದು, ಇನ್ನೂ ಕೂಡ ಮರಳಿ ಶಿಬಿರಕ್ಕೆ ಹಿಂತಿರುಗಿಲ್ಲ ಎಂಬುದಾಗಿ ಕುಶಾಲನಗರ ವಲಯ ಅರಣ್ಯಾಧಿಕಾರಿ ಅನನ್ಯಕುಮಾರ್ ಅವರು ಮಾಹಿತಿ ನೀಡಿದ್ದಾರೆ. ಕಳೆದ ಸುಮಾರು ಒಂದು ವರ್ಷದಿಂದ ಕುಶ ಶಿಬಿರಕ್ಕೆ ಹಿಂತಿರುಗದೆ ಇರುವ ಕುರಿತು ‘ಶಕ್ತಿ’ ಮಾಹಿತಿ ಬಯಸಿದಾಗ ಪ್ರತಿಕ್ರಿಯಿಸಿದ ಅನನ್ಯಕುಮಾರ್ ಅವರು, ಮದವೇರಿದ ಪರಿಣಾಮ ಕಾಲಿಗೆ ಕಟ್ಟಲಾಗಿದ್ದ ಚೈನ್‌ಅನ್ನು ಕೂಡ ಕಿತ್ತು ತಪ್ಪಿಸಿಕೊಂಡು ಸುಮಾರು ೧೭ ಆನೆಗಳನ್ನೊಳಗೊಂಡ ಕಾಡಾನೆ ಗುಂಪೊAದನ್ನು ಸೇರಿಕೊಂಡಿದೆ. ಒಂದು ವರ್ಷದಿಂದ ಪ್ರತೀ ದಿನ ಕಾರ್ಯಾಚರಣೆ ಸತತವಾಗಿ ನಡೆಯುತ್ತಿದ್ದು, ಇದುವರೆಗೂ ಸೆರೆಹಿಡಿಯಲು ಸಿಬ್ಬಂದಿ ಸಫಲರಾಗಿಲ್ಲ ಎಂಬುದಾಗಿ ಮಾಹಿತಿ ನೀಡಿದ್ದಾರೆ.

೩ ವರ್ಷಗಳ ಹಿಂದೆ ಚೆಟ್ಟಳ್ಳಿ, ಕಂಡಕೆರೆಗಳಲ್ಲಿ ಅಲ್ಲಿನ ಕೃಷಿಕರಿಗೆ ವಿಪರೀತ ಉಪಟಳ ನೀಡುತ್ತಿದ್ದ ಈ ಕಾಡಾನೆಯನ್ನು ಅರಣ್ಯ ಇಲಾಖೆಯವರು ಹಿಡಿದು, ದುಬಾರೆ ಶಿಬಿರಕ್ಕೆ ತಂದು ಪಳಗಿಸಲಾಗಿತ್ತು. ಮದ ಏರಿದ ಪರಿಣಾಮ ಶಿಬಿರದಿಂದ ತಪ್ಪಿಸಿಕೊಂಡ ಈ ಆನೆ ಇದೀಗ ಕಾಡಾನೆ ಹಿಂಡು ಸೇರಿದ್ದು, ಇಲಾಖೆಯವರು ಸೆರೆಹಿಡಿಯಲೆಂದು ಸಮೀಪ ಹೋದರೆ, ಓಡಿ ಹೋಗುತ್ತದೆ.

ಸುಮಾರು ೧ ಕಿ.ಮಿ ದೂರದಲ್ಲಿಯೇ ಕಾರ್ಯಾಚರಣೆ ನಡೆಸುವ ತಂಡದವರ ವಾಸನೆ, ಶಬ್ಧ ಕೇಳಿ ತಪ್ಪಿಸಿಕೊಳ್ಳುತ್ತದೆ ಎಂದು ಅನನ್ಯಕುಮಾರ ಅವರು ಮಾಹಿತಿ ನೀಡಿದ್ದಾರೆ. ಆನೆಗಳ ಗುಂಪಿನಲ್ಲಿ ಮರಿಯಾನೆಗಳು ಕೂಡ ಇವೆ. ಈ ಕಾರಣ ಗುಂಪಿನ ಹೆಣ್ಣಾನೆಗಳು ಆಕ್ರಮಣಕಾರಿ ಸ್ವಭಾವವನ್ನು ಹೊರಹಾಕುತ್ತವೆ. ಇದರಿಂದ ಕುಶನನ್ನು ಸೆರೆಹಿಡಿಯಲು ಬಹಳ ಕಷ್ಟದ ಕಾರ್ಯವಾಗಿದೆ.

ಟ್ರಾö್ಯಕ್ ಮಾಡಲು ತಂಡಗಳ ರಚನೆ

ಕುಶ ೧೭ ಕಾಡಾನೆಗಳನ್ನೊಳಗೊಂಡ ಗುಂಪೊAದನ್ನು ಸೇರಿಕೊಂಡಿದ್ದು, ಈ ಗುಂಪನ್ನು ಟ್ರಾö್ಯಕ್ ಮಾಡಲು ತಂಡÀ ರಚನೆಯಾಗಿದೆ. ಹಲವೆಡೆ ಕ್ಯಾಮರಾ ಟ್ರಾö್ಯಪ್‌ಗಳನ್ನಿಡಲಾಗಿದೆ. ಅರವಳಿಕೆ ಮದ್ದು ಕೂಡ ಸಿದ್ಧವಾಗಿದೆ. ಕುಶ ಪತ್ತೆಯಾದೊಡನೆ ಅರವಳಿಕೆ ತಂಡದವರನ್ನು, ವೈದ್ಯರನ್ನು, ಅರಣ್ಯಾಧಿಕಾರಿಗಳನ್ನು ಕರೆಯಲಾಗುತ್ತದೆ. ಆದರೆ ಕಳೆದ ಒಂದು ವರ್ಷದಿಂದ ಕುಶ ತಪ್ಪಿಸಿಕೊಳ್ಳಲು ಸಫಲನಾಗಿದ್ದಾನೆ. ಆನೆಯ ಕತ್ತಲ್ಲಿ ಇನ್ನೂ ಕೂಡ ಶಿಬಿರದಲ್ಲಿ ಹಾಕಲಾಗಿದ್ದ ಹಗ್ಗ ಇದೆ. ಈ ಮೂಲಕ ಇದನ್ನು ಸುಲಭವಾಗಿ ಗುರುತಿಸಬಹುದಾಗಿದೆ. ಹಗ್ಗ ಕತ್ತಲ್ಲಿದ್ದದನ್ನು ಗಮನಿಸಿದ ಮಾವುತ ನವೀನ್ ಅವರು ಆನೆಯ ಸಮೀಪ ತೆರಳಿದಾಗ, ಅವರ ಮೇಲೆಯೇ ದಾಳಿ ಮಾಡಲು ಕುಶ ಮುಂದಾಗಿದ್ದ ಘಟನೆಯೂ ನಡೆದಿದೆ. ಆನೆಯನ್ನು ಪಳಗಿಸಲಾಗಿದ್ದರು ಮದವೇರಿದ ಕಾರಣ ಈ ರೀತಿ ನಡೆದು ಕೊಳ್ಳುತ್ತಿರುವುದಾಗಿ ಅನನ್ಯಕುಮಾರ್ ಅಭಿಪ್ರಾಯಪಟ್ಟಿದ್ದಾರೆ.

ಇನ್ನೂ ೪,೫ ತಿಂಗಳುಗಳ ಕಾಲ ಪ್ರಯತ್ನ

ಕುಶನನ್ನು ಹಿಡಿಯಲು ಸುಮಾರು ಒಂದು ವರ್ಷದಿಂದ ವಿಫಲವಾಗಿದ್ದು, ಬೆಂಗಳೂರಿನ ಇಲಾಖೆಯ ಮುಖ್ಯ ಕಚೇರಿಗೂ ವರದಿ ನೀಡಲಾಗಿದೆ. ಆದಷ್ಟು ಬೇಗ ಆನೆಯನ್ನು ಹಿಡಿಯಿರಿ ಎಂಬುದಾಗಿ ಇಲಾಖೆ ನಿರ್ದೇಶನ ನೀಡಿದ ಕಾರಣ ಕಾರ್ಯಾಚರಣೆ ಇನ್ನೂ ೪, ೫ ತಿಂಗಳು ಕಾಲ ನಡೆಸಲಾಗುತ್ತದೆ. ಆದರೂ ದೊರೆಯದಿದ್ದರೆ ಬೆಂಗಳೂರಿನ ಮುಖ್ಯ ಕಚೇರಿಗೆ ಮತ್ತೆ ವರದಿ ನೀಡಲಾಗುತ್ತದೆ. ಪಳಗಿಸುವ ಮುನ್ನ, ತೋಟಗಳಿಗೆ ನುಗ್ಗಿ ದಾಳಿ ಮಾಡುತ್ತಿದ್ದ ಆನೆಯು ಇದೀಗ ಕಾಡಾನೆಗಳೊಂದಿಗೆ ಸೇರಿಕೊಂಡು ಮತ್ತೆ ತೋಟದ ಕಡೆ ಹೋಗದ ಹಾಗೆ ನೋಡಿಕೊಳ್ಳಬೇಕಿದೆ. ಆದ್ದರಿಂದ ನಿರಂತರ ಕಾರ್ಯಾಚರಣೆ ನಡೆಯುತ್ತಿರುವುದಾಗಿ ಅವರು ಮಾಹಿತಿ ನೀಡಿದ್ದಾರೆ. ದುಬಾರೆಯ ಸಾಕಾನೆಯ ಶಿಬಿರದಲ್ಲಿ ಎರಡು ವರ್ಷ ಪ್ರಾಯದ ಪಾರ್ಥ ಸೇರಿದಂತೆ ಒಟ್ಟು ೨೭ ಗಂಡಾನೆಗಳಿವೆ. ಕೇವಲ ಮೂರು ಹೆಣ್ಣಾನೆಗಳಿವೆ. ಕುಶ ಮತ್ತೆ ಈ ಗುಂಪನ್ನು ಸೇರಿಕೊಂಡರೆ ಒಟ್ಟು ೩೧ ಆನೆಗಳು ಶಿಬಿರದಲ್ಲಿರಲಿವೆ.

- ಕೆ.ಎಸ್. ಮೂರ್ತಿ / ಜಿ.ಆರ್. ಪ್ರಜ್ವಲ್