ಗೋಣಿಕೊಪ್ಪಲು, ಫೆ. ೨೪: ಮನೆಯಿಂದ ಕಾಲೇಜಿಗೆ ಬರುವ ವೇಳೆ ರಸ್ತೆಯಲ್ಲಿ ಎದುರಾದ ಹುಲಿಯನ್ನು ಕಂಡು ಪ್ರಜ್ಞೆ ತಪ್ಪಿ ಆಸ್ಪತ್ರೆಗೆ ದಾಖಲಾಗಿದ್ದ ಮುಗುಟಗೇರಿ ಗ್ರಾಮದ ವಿದ್ಯಾರ್ಥಿನಿ ಕೇಚಮಾಡ ರಕ್ಷ ದೇಚಮ್ಮ ಮಂಗಳವಾರ ಮೈಸೂರಿನ ಖಾಸಗಿ ಆಸ್ಪತ್ರೆಯಿಂದ ಸಂಪೂರ್ಣ ಚೇತರಿಸಿಕೊಂಡು ಬಿಡುಗಡೆಯಾಗಿದ್ದಾರೆ.

ರೈತ ಸಂಘದ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಸೋಮವಾರ ಮೈಸೂರಿನ ಆಸ್ಪತ್ರೆಯ ವೈದ್ಯರನ್ನು ಹಾಗೂ ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳನ್ನು ಸಂಪರ್ಕಿಸಿ ವಿದ್ಯಾರ್ಥಿಯ ಆರೋಗ್ಯದ ಬಗ್ಗೆ ಹೆಚ್ಚಿನ ನಿಗಾ ವಹಿಸುವಂತೆ ಮನವಿ ಮಾಡಿದ್ದರು.

ಅರಣ್ಯ ಇಲಾಖೆಯ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸಾ ವೆಚ್ಚವನ್ನು ಇಲಾಖೆಯಿಂದ ಭರಿಸಿದ್ದರು. ಯುವತಿಯ ಪೋಷಕರು ಇಲಾಖೆಯ ಹಾಗೂ ರೈತ ಸಂಘದ ಪದಾಧಿಕಾರಿಗಳ ತುರ್ತು ಸ್ಪಂದನವನ್ನು ಶ್ಲಾಘಿಸಿದ್ದಾರೆ.