ಗೋಣಿಕೊಪ್ಪಲು, ಫೆ. ೨೩:ದ.ಕೊಡಗಿನ ನಿಟ್ಟೂರು ಗ್ರಾಮದಲ್ಲಿ ಜನವೋ ಜನ, ಇದೇ ಮೊದಲ ಬಾರಿಗೆ ಮೈಸೂರಿನ ರಂಗಾಯಣದಿAದ ಆಯೋಜಿಸಲಾಗಿದ್ದ ‘ನಮ್ಮ ಜನ - ನಮ್ಮ ಸಂಸ್ಕೃತಿ’ ಗಿರಿಜನೋತ್ಸವಕ್ಕೆ ಜನಸಾಗರ ಹರಿದು ಬಂದಿತ್ತು. ವೇದಿಕೆಯಲ್ಲಿ ಅಳವಡಿಸಲಾಗಿದ್ದ ಆಸನಗಳು ಭರ್ತಿಗೊಂಡಿದ್ದರೂ ಸಿಕ್ಕ ಸ್ಥಳಗಳಲ್ಲಿ ನಿಂತು ಕಾರ್ಯಕ್ರಮವನ್ನು ವೀಕ್ಷಿಸುವ ಮೂಲಕ ಸಾಕ್ಷಿಯಾದರು. ಕೊಡಗು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಜಾನಪದ ಕಲಾತಂಡಗಳು ತಮ್ಮ ಪ್ರದರ್ಶನಗಳನ್ನು ನೀಡುತ್ತಿದ್ದಂತೆಯೇ ಹರ್ಷೋದ್ಗಾರ ಕೇಳಿ ಬರುತ್ತಿತ್ತು. ಒಂದಕ್ಕೊAದು ಮೀರಿಸುವ ರೀತಿಯಲ್ಲಿ ಜಾನಪದ ಕಲೆಗಳು ವೇದಿಕೆಯಲ್ಲಿ ಪ್ರದರ್ಶನ ನೀಡಿದವು. ಊರಿನ ಗ್ರಾಮಸ್ಥರು ತಮ್ಮೆಲ್ಲ ಕೆಲಸಗಳನ್ನು ಬದಿಗೊತ್ತಿ ಗ್ರಾಮದಲ್ಲಾಗುತ್ತಿರುವ ಗಿರಿಜನೋತ್ಸವದ ಸಂಭ್ರಮವನ್ನು ಸವಿದರು.ನಿಟ್ಟೂರಿನ ಗ್ರಾಮ ಪಂಚಾಯಿತಿ ಸಮೀಪವಿರುವ ವಿಶಾಲವಾದ ಮೈದಾನದಲ್ಲಿ ರಂಗಾಯಣ ಮೈಸೂರು, ವನವಾಸಿ ಕಲ್ಯಾಣ ಕೇಂದ್ರ ಕೊಡಗು ಜಿಲ್ಲೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಗಿರಿಜನ ಉಪಯೋಜನೆ, ನಿಟ್ಟೂರು ಗ್ರಾಮ ಪಂಚಾಯಿತಿ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ನಮ್ಮ ಜನ -ನಮ್ಮ ಸಂಸ್ಕೃತಿ ಗಿರಿಜನೋತ್ಸವ ಕಾರ್ಯಕ್ರಮವನ್ನು ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ನಂತರ ಮಾತನಾಡಿದ ಕೆ.ಜಿ.ಬೋಪಯ್ಯ ಇಂದು ಪಾಶ್ಚಾತ್ಯ ಸಂಸ್ಕೃತಿ ಲಗ್ಗೆಇಟ್ಟಿದ್ದರೂ ಆದಿವಾಸಿಗಳಲ್ಲಿರುವ ಆಚಾರ ವಿಚಾರ ಸಂಸ್ಕೃತಿ ಕಡಿಮೆಯಾಗಿಲ್ಲ. ಇಂದಿಗೂ ಕೂಡ ಸಂಸ್ಕೃತಿ ಉಳಿಯಲು ಕಾಡಿನಲ್ಲಿರುವ ಆದಿವಾಸಿಗಳೇ ಮುಖ್ಯ ಕಾರಣ. ಇದನ್ನು ನಾವು ಹೆಮ್ಮೆಯಿಂದ ಹೇಳಿಕೊಳ್ಳಬಹುದು. ಗಿರಿಜನರ ಸಂಸ್ಕೃತಿಗಳು ನಶಿಸಿಹೋಗುವುದನ್ನು ತಡೆಯಲು ರಂಗಾಯಣದ ಮೂಲಕ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಮಾಡುತ್ತಿರುವ ಕಾರ್ಯಕ್ರಮ ಅರ್ಥಪೂರ್ಣವಾಗಿದೆ. ಗಿರಿಜನರ ಬದುಕು ಇನ್ನೂ ಕೂಡ ಸಂಕಷ್ಟದಲ್ಲಿದೆ. ಮೂಲಭೂತ ಸೌಕರ್ಯ ನೀಡಲು ಸರ್ಕಾರ ಇವರಿಗಾಗಿ ಪ್ರತ್ಯೇಕ ಇಲಾಖೆಯನ್ನೇ ನೇಮಕ ಮಾಡಿದೆ. ಅರಣ್ಯ ಕಾಯ್ದೆಯನ್ನು ಜಾರಿಗೆ ತಂದಿದ್ದರೂ ಇದು ಸರಿಯಾದ ರೀತಿಯಲ್ಲಿ ಇನ್ನು ಕೂಡ ಜನರಿಗೆ ತಲುಪಿಲ್ಲ. ಮೂಲಭೂತ ಸೌಕರ್ಯಗಳನ್ನು ನೀಡಲು ಸಾಧ್ಯವಾಗುತ್ತಿಲ್ಲ. ಅರಣ್ಯ ಇಲಾಖೆಯ ಕೆಲವು ಅಧಿಕಾರಿಗಳು ಇದಕ್ಕೆ ಅಡ್ಡಗಾಲು ಹಾಕುತ್ತಿದ್ದಾರೆ. ಸ್ವಾತಂತ್ರö್ಯ ಬಂದು ದಶಕಗಳೇ ಉರುಳಿದರೂ ಇವರನ್ನು ಸಮಾಜದ (ಮೊದಲ ಪುಟದಿಂದ) ಮುಖ್ಯವಾಹಿನಿಗೆ ತರಲು ಸಾಧ್ಯವಾಗುತ್ತಿಲ್ಲ. ಕೆಲವು ಅಧಿಕಾರಿಗಳಿಗೆ ಮಾನವಿಯತೆಯೇ ಇಲ್ಲದಂತಾಗಿದೆ ಎಂದು ತಮ್ಮ ನೋವನ್ನು ತೋಡಿಕೊಂಡರುಮೈಸೂರು ರಂಗಾಯಣದ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ಮೈಸೂರು ರಂಗಾಯಣ ಸೃಜನಶೀಲ ಸಂಸ್ಥೆಯಾಗಿದೆ. ವಿದೇಶಗಳಲ್ಲಿ ಪ್ರದರ್ಶನ ನೀಡಿದೆ. ನಾಡಿನಾದ್ಯಂತ ಹೆಸರು ಉಳ್ಳ ೫೪ಕ್ಕೂ ಅಧಿಕ ಸಿಬ್ಬಂದಿಗಳನ್ನೊಳಗೊAಡ ನೂರಾರು ಕಲಾವಿದರಿರುವ ದೊಡ್ಡ ಸಂಸ್ಥೆಯಾಗಿದೆ. ಇದೇ ಮೊದಲ ಬಾರಿಗೆ ಕೊಡಗಿನಲ್ಲಿ ರಂಗಾಯಣದ ಮೂಲಕ ರಾಜ್ಯಮಟ್ಟದ ಕಾರ್ಯಕ್ರಮವನ್ನು ಗಿರಿಜನರಿಗೋಸ್ಕರ ಆಯೋಜನೆ ಮಾಡಿದ್ದೇವೆ. ಈ ಹಿಂದೆ ಇಂತಹ ಕಾರ್ಯಕ್ರಮಗಳು ಕೇವಲ ಹೆಸರಿಗಷ್ಟೆ ಮೈಸೂರಿನ ರಂಗಾಯಣದಲ್ಲಿ ನಡೆಯುತ್ತಿದ್ದವು. ಇದೀಗ ವನವಾಸಿ ಕಲ್ಯಾಣದ ಜೊತೆಯಲ್ಲಿ ಇಂತಹ ಕಾರ್ಯಕ್ರಮವನ್ನು ಆಯೋಜನೆ ಮಾಡುವ ಮೂಲಕ ನೈಜ್ಯ ಗಿರಿಜನರಿನಲ್ಲಿರುವ ಸಂಸ್ಕೃತಿಯನ್ನು ಬಿಂಬಿಸಲು ವೇದಿಕೆ ನಿರ್ಮಾಣ ಮಾಡಿಕೊಡಲಾಗಿದೆ. ಗಿರಿಜನರ ಭಾಷೆಗಳನ್ನು ಹಾಡಲು ಹಿಂದೇಟು ಹಾಕುತ್ತಿರುವ ಈ ಕಾಲಘಟ್ಟದಲ್ಲಿ ಇಂತಹ ಕಾರ್ಯಕ್ರಮವನ್ನು ಆಯೋಜಿಸಿರುವುದರಿಂದ ಗಿರಿಜನರ ಸಂಸ್ಕೃತಿಯನ್ನು ತೋರಿಸಿಕೊಡಲು ಗ್ರಾಮೀಣ ಭಾಗದಲ್ಲಿ ಇಂತಹ ದೊಡ್ಡ ಕಾರ್ಯಕ್ರಮವನ್ನು ಆಯೋಜಿಸಿದ್ದೇವೆ ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವಿಧಾನ ಪರಿಷತ್ ಸದಸ್ಯ ಬೆಂಗಳೂರಿನ ಶಾಂತರಾಮ್ ಸಿದ್ಧಿ ಮಾತನಾಡಿ ಗಿರಿಜನರ ಕಲ್ಯಾಣಕ್ಕಾಗಿ ವನವಾಸಿ ಕಲ್ಯಾಣ ೭೦ ವರ್ಷಗಳಿಂದ ದುಡಿಯುತ್ತಿದೆ. ಗಿರಿಜನರಿಗೆ ಸವಲತ್ತುಗಳು ದೊರಕಲು ಕೆಲವು ದಾಖಲಾತಿಗಳನ್ನು ನೀಡಲು ಅಧಿಕಾರಿಗಳು ಇಚ್ಚಾಶಕ್ತಿ ತೋರುತ್ತಿಲ್ಲ. ರಾಜ್ಯದ ಎಲ್ಲಾ ಭಾಗದಲ್ಲಿಯೂ ಈ ಪರಿಸ್ಥಿತಿ ಮುಂದುವರೆಯುತ್ತಿದೆ. ಕೇವಲ ಅಲ್ಪಸ್ವಲ್ಪವಿರುವ ಜಮೀನುಗಳಿಗೆ ದಾಖಲೆಗಳನ್ನು ನೀಡಲು ಅಧಿಕಾರಿಗಳು ಮನಸ್ಸು ಮಾಡುತ್ತಿಲ್ಲ. ಗುಡಿಸಲು ಮನೆಗಳಲ್ಲಿಯೇ ಇಂದಿಗೂ ಜೀವನ ಸಾಗಿಸುತ್ತಿದ್ದಾರೆ. ಅರಣ್ಯ ಇಲಾಖೆಯ ಅಧಿಕಾರಿಗಳ ಮಾನವೀಯತೆಯ ಕೊರತೆಯಿಂದಾಗಿ ಇನ್ನು ಕೂಡ ಗಿರಿಜನರಿಗೆ ಮೂಲಭೂತ ಸೌಕರ್ಯ ಒದಗಿಸಲು ಸಾಧ್ಯವಾಗುತ್ತಿಲ್ಲ. ಅರಣ್ಯ, ಈ ಪ್ರಕೃತಿ ಉಳಿದಿದ್ದರೆ ಇದು ಬುಡಕಟ್ಟು ಜನಾಂಗದ ಕೊಡುಗೆ ಹೊರತು ಬೇರೇನು ಅಲ್ಲ. ಪ್ರಕೃತಿಯನ್ನು ದೇವರೆಂದು ಆರಾಧಿಸುವ ಆದಿವಾಸಿಗಳು ಅರಣ್ಯದಲ್ಲಿರುವ ವನ್ಯಜೀವಿಗಳು ಉಳಿಯಲು ಮುಖ್ಯ ಕಾರಣರಾಗಿದ್ದಾರೆ. ಆದಿವಾಸಿಗಳಿಗಾಗಿಯೇ ಪ್ರತ್ಯೇಕ ಸಚಿವಾಲಯ,ಮಂತ್ರಿ ನೇಮಕವಾಗಬೇಕು. ಆ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯಲಿ ಎಂದು ಹೇಳಿದರು.

‘ಅರಿವಿನತ್ತ ಗಿರಿಜನರ ಸಂಸ್ಕೃತಿ’ ಎಂಬ ವಿಷಯದ ಬಗ್ಗೆ ವಿಚಾರ ಮಂಡನೆ ಮಾಡಿದ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ಜಡೇಗೌಡ ಅವರು, ಗಿರಿಜನರನ್ನು ನಮ್ಮ ಜನ ಎಂದು ರಂಗಾಯಣದ ಮೂಲಕ ಗುರುತಿಸಿದೆ. ಸಂಸ್ಕೃತಿಯಿAದ ಅರಣ್ಯ ಉಳಿಯುತ್ತಿದೆ. ಗಿರಿಜನರು ಸರಳ ಜೀವನ, ಪ್ರಕೃತಿಯೊಂದಿಗೆ ಸಾಮರಸ್ಯ, ಹಂಚಿತಿನ್ನುವ ಸಂಸ್ಕೃತಿ ಉಳ್ಳವರು ಇದರಿಂದಾಗಿ ದೇವರ ಕಾಡುಗಳು ಇಂದಿಗೂ ಉಳಿಯಲು ಕಾರಣ. ನಮ್ಮ ಸಂಸ್ಕೃತಿಯ ಮೇಲೆ ಕೀಳರಿಮೆ ಸಲ್ಲದು, ಗಿರಿಜನರಿಗಾಗಿಯೇ ವಿಶ್ವವಿದ್ಯಾನಿಲಯ ಸ್ಥಾಪನೆಯಾಗಬೇಕು. ಪಠ್ಯಪುಸ್ತಕದ ರೂಪದಲ್ಲಿ ಗಿರಿಜನರ ಹಾಡುಗಳು ಹೊರಬರಬೇಕು ಎಂದರು.

ಮತ್ತೋರ್ವ ಅತಿಥಿ ದಕ್ಷಿಣ ಭಾರತದ ವನವಾಸಿ ಹಿತರಕ್ಷಣಾ ಪ್ರಮುಖ್ ಕೃಷ್ಣಮೂರ್ತಿ ಮಾತನಾಡಿ, ಕಳೆದ ೭೦ ವರ್ಷಗಳಿಂದ ಗಿರಿಜನರ ಮಧ್ಯದಲ್ಲಿ ಕೆಲಸ ಮಾಡಿಕೊಂಡಿದ್ದರೂ ಗಿರಿಜನರನ್ನು ನಮ್ಮವರು ಎಂದು ನಾವು ಸಂಪೂರ್ಣವಾಗಿ ಒಪ್ಪಿಕೊಂಡಿಲ್ಲ. ಗಿರಿಜನರು ಹುಟ್ಟು ಸಾವಿನಲ್ಲಿ ಪ್ರಕೃತಿಯನ್ನು ದೇವರೆಂದು ನಂಬಿದ್ದಾರೆ. ಸಂಸ್ಕೃತಿ ಜೀವನದ ಒಂದು ಭಾಗ; ಕಾರ್ಯಕ್ರಮಕಷ್ಟೆ ಗಿರಿಜನರು ಸೀಮಿತವಾಗಬಾರದು. ಇವರ ಬದುಕಿಗೆ ನಾವು ಆಸರೆಯಾಗಬೇಕು. ಆದಿವಾಸಿಗಳಲ್ಲಿರುವ ಶ್ರೀಮಂತ ಕಲೆ ಉಳಿಯಲು ನಾವೆಲ್ಲರೂ ಇವರಿಗೆ ನೆರವಾಗಬೇಕು ಎಂದರು. ಕಾರ್ಯಕ್ರಮದಲ್ಲಿ ವೀರಾಜಪೇಟೆ ತಾಲೂಕು ಪಂಚಾಯಿತಿ ಅಧ್ಯಕ್ಷೆ ಸ್ಮಿತಾ ಪ್ರಕಾಶ್, ಉಪಾಧ್ಯಕ್ಷ ಚಲನ್ ಕುಮಾರ್, ಜಿ.ಪಂ.ಸದಸ್ಯ ಬಿ.ಎನ್.ಪ್ರಥ್ಯು, ನಿಟ್ಟೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಚೆಕ್ಕೇರ ಸೂರ್ಯ ಅಯ್ಯಪ್ಪ, ವನವಾಸಿ ಕಲ್ಯಾಣ ಕೇಂದ್ರದ ಅಧ್ಯಕ್ಷ ಯರವರ ಪ್ರಕಾಶ್, ವನವಾಸಿ ಕಲ್ಯಾಣ ರಾಜ್ಯ ಸಂಚಾಲಕ ಚೆಕ್ಕೆರ ಮನು ಕಾವೇರಪ್ಪ, ಮುಂತಾದವರು ಉಪಸ್ಥಿತರಿದ್ದರು.

ಕಲಾತಂಡಗಳ ಮೆರುಗು

ದ. ಕನ್ನಡ ಜಿಲ್ಲೆಯ ಬಾಬು ಪಾಂಗಳ ಕಲಾವಿದÀರ ಕೊರಗರ ಡೋಲು ಕುಣಿತ, ರಾಮನಗರ ಜಿಲ್ಲೆಯ ಹನುಮಂತನಾಯ್ಕ ಕಲಾವಿದÀರು ಮಾದೇಶ ಪೂಜಾ ಕುಣಿತ, ಉತ್ತರ ಕನ್ನಡ ಜಿಲ್ಲೆಯ ಅಮ್ಮಚ್ಚೆ ಮೌಳಿ ಸಿದ್ಧಿ ಕಲಾವಿದರಿಂದ ಸಿದ್ದಿ ಡಮಾಮಿ ನೃತ್ಯ, ಚಾಮರಾಜನಗರ ಜಿಲ್ಲೆಯ ಸೋಲಿಗ ಪುಷ್ಪಮಾಲೆ ಕಲಾತಂಡದಿAದ ಗೊರುಕನ ಸೋಲಿಗರ ನೃತ್ಯ, ಮೈಸೂರು ಜಿಲ್ಲೆಯ ಕುಮಾರ್ ನಾಯಕ್ ಕಲಾವಿದÀರಿಂದ ಕಂಸಾಳೆ ನೃತ್ಯ, ತುಮಕೂರು ಜಿಲ್ಲೆಯ ಮಂಜುನಾಥ್ ತಂಡದಿAದ ಕೀಲುಕುದುರೆ ಪಿರಿಯಾಪಟ್ಟಣ ತಾಲೂಕಿನ ನಾಗನಾಯಕ್ ತಂಡದಿAದ ಡೊಳ್ಳು ಕುಣಿತ, ಮೈಸೂರು ಜಿಲ್ಲೆಯ ರಮೇಶ ತಂಡದಿAದ ಕರಡಿ ಕುಣಿತ ನೃತ್ಯಗಳು, ಕೊಡಗು ಜಿಲ್ಲೆಯ ವೀರಾಜಪೇಟೆ ತಾಲೂಕಿನ ಮಾಯಮುಡಿ ಗ್ರಾಮದ ಪಿ.ಬಿ.ಕಾಳ ತಂಡದಿAದ ಯರವರ ಚೀನಿ ದುಡಿ, ಜೆ.ಕೆ.ರಾಮು ತಂಡದಿAದ ಜೇನುಕುರುಬರ ಕೋಲಾಟ, ತೋರ ಗ್ರಾಮದ ಗೋಪಮ್ಮ ಮಹಿಳಾ ತಂಡದಿAದ ಕುಡಿಯರ ಉರಟಿಕೊಟ್ಟ್ ಆಟ್, ನಾಣಚ್ಚಿಯ ರಮೇಶ್ ತಂಡದಿAದ ಸೋದೊದಿಮ್ಮಿ ಕುಣಿತ, ಮತ್ತೂರುವಿನ ಸುಮ ತಂಡದಿAದ ಬೆಟ್ಟ ಕುರುಬ ದೇವರ ಕರಿಯಾಟ ಪ್ರದರ್ಶನಗೊಂಡವು.

ಸಾಧಕರಿಗೆ ಸನ್ಮಾನ

ಕಲಾವಿದರಾದ ಜೇನುಕುರುಬರ ಮರಿದಾಸಿ, ಪಂಜರಿಯರವರ ಚಾತ, ನಾಟಿ ಔಷಧಿ ವೈದ್ಯೆ ಸೋಲಿಗರ ನಾಗಮ್ಮ, ಗಿರಿಜನರ ಹೋರಾಟಗಾರ ಬೆಟ್ಟಕುರುಬರ ಕಾಳ, ಯರವ ಸಂಸ್ಕೃತಿ ಆರಾಧಕಿ ಚಿಣ್ಣಿ, ಇವರನ್ನು ಅತಿಥಿಗಳು ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಿದರು. ಜಾನಪದ ಕಲೆಗಳನ್ನು ವೀಕ್ಷಿಸಲು ಸಾವಿರಾರು ಸಂಖ್ಯೆಯಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರು ಆಗಮಿಸಿದ್ದರು. ಮುಂಜಾನೆ ೧೦.೩೦ಗಂಟೆಗೆ ವಿವಿಧ ಜಿಲ್ಲೆಯ ಕಲಾತಂಡಗಳು ಸಮೀಪದ ಕಾಲಭೈರವೇಶ್ವರ ದೇವಾಲಯ ಆವರಣದಿಂದ ಮೆರವಣಿಗೆಯಲ್ಲಿ ಸಾಗಿ ಅತಿಥಿಗಳನ್ನು ಬರಮಾಡಿಕೊಂಡರು. ಕಾರ್ಯಕ್ರಮದ ಸಂಚಾಲಕ ಪಡಿಜ್ಞರಂಡ ಪ್ರಭುಕುಮಾರ್ ಕಾರ್ಯಕ್ರಮ ನಿರೂಪಿಸಿದರು. ರಂಗಾಯಣದ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನಸ್ವಾಮಿ ಸ್ವಾಗತಿಸಿದರು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಪಡಿಜ್ಞರಂಡ ಕವಿತ ಪ್ರಭು, ಸದಸ್ಯರಾದ ಕಾಟಿಮಾಡ ಶರೀನ್ ಮುತ್ತಣ್ಣ, ಜೇನುಕುರುಬರ ಸರಸು, ವೈ.ಕೆ.ಅಮ್ಮುಣ್ಣಿ, ಅಳಮೇಂಗಡ ಪವಿತ, ಯರವರ ರಾಜು, ಸೇರಿದಂತೆ ಗ್ರಾಮದ ಪ್ರಮುಖರಾದ ಯಮುನಾ ಚಂಗಪ್ಪ ಕರ್ತಮಾಡ ಭಾಗ್ಯ ಅನಿಲ್, ಕಾಟಿಮಾಡ ದೀರಜ್, ಕೊಟ್ಟಂಗಡ ಮಂಜುನಾಥ್, ಮುಕ್ಕಾಟೀರ ರೋಶನ್, ಸೋಮಯ್ಯ, ಗಾಡಂಗಡ ಸುಧೀಶ್ ಮುಂತಾದವರು ಹಾಜರಿದ್ದರು. ನಿಟ್ಟೂರು ಪಂಚಾಯಿತಿ ಆಡಳಿತ ಮಂಡಳಿ ವತಿಯಿಂದ ರಂಗಾಯಣದ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಅವರನ್ನು ಇದೇ ಸಂದರ್ಭ ಸನ್ಮಾನಿಸಿ ಗೌರವಿಸಲಾಯಿತು.

-ಹೆಚ್.ಕೆ. ಜಗದೀಶ್