ಮಡಿಕೇರಿ, ಫೆ.೨೩: ಕೊಡಗು ಜಿಲ್ಲೆಯಲ್ಲಿ ವನ್ಯಜೀವಿ-ಮಾನವ ಸಂಘರ್ಷ ಹೆಚ್ಚಾಗುತ್ತಿದೆ. ಸಮಸ್ಯೆಗೆ ಪರಿಹಾರ ನೀಡಬೇಕಾದ ಸರ್ಕಾರ ಜಾಣಮೌನ ವಹಿಸಿದೆ. ಕೊಡಗನ್ನು ಸರಕಾರ ಸಂಪೂರ್ಣ ನಿರ್ಲಕ್ಷಿಸಿದೆ ಎಂದು ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಆರೋಪಿಸಿದರು. ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹುಲಿ ದಾಳಿಯಿಂದ ದಕ್ಷಿಣ ಕೊಡಗು ಕಂಗಾಲಾಗಿದೆ. ಅಮಾಯಕ ಜೀವಗಳ ಬಲಿಯಾಗಿದೆ. ನೂರಾರೂ ಜಾನುವಾರುಗಳು ಹುಲಿ ಬಾಯಿಗೆ ತುತ್ತಾಗಿವೆ. ಆದರೆ, ಸರ್ಕಾರ ಮಾತ್ರ ಗಂಭೀರ ಸಮಸ್ಯೆಯನ್ನು ಪರಿಹಾರ ಮಾಡದೆ ನಿರ್ಲಕ್ಷö್ಯ ವಹಿಸಿದೆ. ಅರಣ್ಯ ಸಚಿವರನ್ನು ಜಿಲ್ಲೆಗೆ ಆಹ್ವಾನಿಸಿದರೂ ಕೂಡ ಆಗಮಿಸುತ್ತಿಲ್ಲ ಎಂದು ದೂರಿದ ಅವರು, ಹುಲಿ ದಾಳಿಯಿಂದ ಮೃತಪಟ್ಟವರ ಕುಟುಂಬಕ್ಕೆ ರೂ. ೨೫ ಲಕ್ಷ (ಮೊದಲ ಪುಟದಿಂದ) ಪರಿಹಾರವನ್ನು ಸರಕಾರ ಘೋಷಣೆ ಮಾಡಬೇಕು. ಅರಣ್ಯ ಇಲಾಖೆಗೆ ಹೆಚ್ಚಿನ ಸಿಬ್ಬಂದಿಗಳನ್ನು ನಿಯೋಜನೆ ಮಾಡಬೇಕು. ೬ ರಿಂದ ೭ ಹುಲಿ ಸಂಚರಿಸುತ್ತಿರುವ ಗುಮಾನಿ ಇದ್ದು, ಅದನ್ನು ಸೆರೆಹಿಡಿಯಲು ಕ್ರಮವಹಿಸಬೇಕು. ಹುಲಿ ಕಂಡು ಮೂರ್ಛೆ ಹೋದ ಬಾಲಕಿ ಚಿಕಿತ್ಸೆ ವೆಚ್ಚವನ್ನು ಸರ್ಕಾರ ಭರಿಸಬೇಕೆಂದು ಆಗ್ರಹಿಸಿದರು. ಕಂಡಲ್ಲಿ ಗುಂಡು ಹಾರಿಸಲು ಅನುಮತಿ ನೀಡಿಹುಲಿಯನ್ನು ಕಂಡಲ್ಲಿ ಗುಂಡು ಹಾರಿಸಲು ಸರ್ಕಾರ ಅನುಮತಿ ನೀಡಬೇಕು. ಜನರು ಕಾನೂನು ಕೈಗೆತ್ತಿಕೊಳ್ಳುವ ಮೊದಲು ಸರ್ಕಾರ ಎಚ್ಚರವಹಿಸಬೇಕು ಎಂದು ವೀಣಾ ಅಚ್ಚಯ್ಯ ಹೇಳಿದರು. ವನ್ಯಜೀವಿ ರಕ್ಷಣೆಯೊಂದಿಗೆ ಮನುಷ್ಯನ ಜೀವ ಕೂಡ ಮುಖ್ಯವಾಗಿದೆ. ಹುಲಿ ಹಾವಳಿಯಿಂದ ಜನರು ಮನೆಯಿಂದ ಹೊರ ಬರಲು ಭಯ ಪಡುತ್ತಿದ್ದಾರೆ. ಸರ್ಕಾರ ಮಾತ್ರ ಕಣ್ಣು, ಕಿವಿ, ಬಾಯಿ ಇಲ್ಲದಂತೆ ವರ್ತಿಸುತ್ತಿದೆ. ವನ್ಯಜೀವಿ ದಾಳಿಯಿಂದ ಅಂಗವೈಫಲ್ಯ ಅನುಭವಿಸುತ್ತಿರುವವರಿಗೆ ಸಮರ್ಪಕ ಪರಿಹಾರ ತಲುಪಿಲ್ಲ ಎಂದು ಆರೋಪಿಸಿದರು.

ಸಭೆ ನಡೆಸಿ

ಅರಣ್ಯ ಸಚಿವರು ಸೇರಿದಂತೆ ಇಲಾಖೆಯ ಉನ್ನತಾಧಿಕಾರಿಗಳು ದಕ್ಷಿಣ ಕೊಡಗಿನಲ್ಲಿ ಸಭೆ ನಡೆಸಿ ಜನರ ಸಮಸ್ಯೆಯನ್ನು ಆಲಿಸಬೇಕು. ಇದರಿಂದ ಜನರ ದುಗುಡ ಸಚಿವರಿಗೆ ತಿಳಿಯುತ್ತದೆ ಎಂದು ವೀಣಾ ಅಚ್ಚಯ್ಯ ಆಶಿಸಿದರು.

ಕಾಂಗ್ರೆಸ್ ಮುಖಂಡ ತೀತಿರ ಧರ್ಮಜ ಉತ್ತಪ್ಪ ಮಾತನಾಡಿ, ವನ್ಯಜೀವಿ ಹಾವಳಿ ತಡೆಗೆ ರೂಪಿಸುವ ಯೋಜನೆ ಸಮರ್ಪಕವಾಗಿ ಅನುಷ್ಠಾನವಾಗಿಲ್ಲ. ಕೊಡಗನ್ನು ಹುಲಿಧಾಮ ಮಾಡಲು ಅಧಿಕಾರಿಗಳು ಹೊರಟಿದ್ದಾರೆ. ವನ್ಯಜೀವಿಗಳಿಗೆ ಬೇಕಾದ ಆಹಾರವನ್ನು ಕಾಡಿನಲ್ಲಿ ಸಿಗುವಂತೆ ಮಾಡಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ವಕ್ತಾರ ಟಾಟು ಮೊಣ್ಣಪ್ಪ ಮಾತನಾಡಿ, ಸಮಸ್ಯೆ ಪರಿಹರಿಸದಿದ್ದಲ್ಲಿ ಜಿಲ್ಲೆಯಲ್ಲಿ ಉಗ್ರ ಪ್ರತಿಭಟನೆ ಮಾಡಲಾಗುವುದು. ಹುಲಿಗಳ ಸಂಚಾರದಿAದ ದಕ್ಷಿಣ ಕೊಡಗಿನಲ್ಲಿ ಅಘೋಷಿತ ಲಾಕ್‌ಡೌನ್ ಪರಿಸ್ಥಿತಿ ಸೃಷ್ಟಿಯಾಗಿದೆ ಎಂದರು.

ಗೋಷ್ಠಿಯಲ್ಲಿ ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀದೇರಿರ ನವೀನ್, ಪ್ರಮುಖ ಬೊಳ್ಳಜೀರ ಅಯ್ಯಪ್ಪ ಇದ್ದರು.