ಶ್ರೀಮಂಗಲ, ಫೆ. ೨೩: ಶ್ರೀಮಂಗಲ ಹೋಬಳಿಯಲ್ಲಿ ಹುಲಿ ದಾಳಿ ಪ್ರಕರಣ ಮುಂದುವರೆದಿದ್ದು, ಟಿ.ಶೆಟ್ಟಿಗೇರಿ ಗ್ರಾ.ಪಂ. ವ್ಯಾಪ್ತಿಯ ತಾವಳಗೇರಿಯಲ್ಲಿ ರೈತರೋರ್ವರ ಹಾಲು ಕರೆಯುವ ಹಸುವಿನ ನಾಲ್ಕು ತಿಂಗಳ ಕರುವನ್ನು ಕೊಂದು ಸಮೀಪದ ಕಂದಕಕ್ಕೆ ಎಳೆದೊಯ್ದು ಭಾಗಶಃ ತಿಂದಿದೆ.

ಗ್ರಾಮದ ರೈತ ಮಚ್ಚಮಾಡ ಜೀವನ್ ಬೋಪಣ್ಣ ಅವರಿಗೆ ಸೇರಿದ ಕರುವಾಗಿದ್ದು, ಸೋಮವಾರ ರಾತ್ರಿ ಈ ಘಟನೆ ನಡೆದಿದೆ. ರಾತ್ರಿ ಸುಮಾರು ೧೨ ಗಂಟೆ ವೇಳೆ (ಮೊದಲ ಪುಟದಿಂದ) ಹಸು, ದನಗಳು ಗಾಭರಿಯಿಂದ ಕಿರುಚುತ್ತಿದ್ದಾಗ ಮನೆಯವರು ಕೊಟ್ಟಿಗೆಗೆ ಹೋಗಿ ಪರಿಶೀಲಿಸಿದ್ದಾರೆ. ಈ ಸಂದರ್ಭ ಕರು ಕಾಣೆಯಾಗಿರುವುದು ಗೊತ್ತಾಗಿದ್ದು, ಕೊಟ್ಟಿಗೆಯಲ್ಲಿದ್ದ ಇತರ ಹಸು ಕರುಗಳನ್ನು ಮನೆಯ ಸಮೀಪ ತಂದು ಕಟ್ಟಿದ್ದಾರೆ. ತಾ. ೨೧ರ ರಾತ್ರಿ ಇದೇ ಗ್ರಾಮದ ದೇಕಮಾಡ ಪುಷ್ಪ ಅವರ ಹಸುವನ್ನು ಹುಲಿ ಕೊಂದುಹಾಕಿತ್ತು. ಈ ಸ್ಥಳದಿಂದ ಸೋಮವಾರ ರಾತ್ರಿ ಕರು ಮೇಲೆ ಹುಲಿ ದಾಳಿ ಮಾಡಿರುವ ಸ್ಥಳ,ಅಂದಾಜು ೧ ಕಿ.ಮೀ.ನಷ್ಟು ಮಾತ್ರ ದೂರವಿದೆ. ತಾ. ೨೧ ರಂದು ಬೆಳಿಗ್ಗೆ ೭ ಗಂಟೆಗೆ ಟಿ.ಶೆಟ್ಟಿಗೇರಿ ಗ್ರಾಮದ ಕಾರ್ಮಿಕ ಮಹಿಳೆ ಚಿಣ್ಣಿಯನ್ನು ಹುಲಿ ಕೊಂದು ಹಾಕಿದ ಸ್ಥಳದಿಂದಲೂ ಅಂದಾಜು ೧ ಕಿ.ಮೀ.ನಷ್ಟು ಅಂತರವಿದೆ. ಸ್ಥಳಕ್ಕೆ ಹುಲಿ ಸೆರೆ ಕಾರ್ಯಾಚರಣೆ ತಂಡ ಭೇಟಿ ನೀಡಿ ಪರಿಶೀಲಿಸಿದ್ದು, ಟಿ.ಶೆಟ್ಟಿಗೇರಿಯ ಕೊರಕೊಟ್ಟ್ ಅಯ್ಯಪ್ಪ ದೇವಸ್ಥಾನದ ಮುಖ್ಯದ್ವಾರ ಬಳಿ ಸಿಸಿಎಫ್ ಹೀರಾಲಾಲ್ ನೇತೃತ್ವದಲ್ಲಿ ಠಿಕಾಣಿ ಹೂಡಿದೆ. ಕಾರ್ಯಾಚರಣೆಗೆ ಸಾಕಾನೆ ಸಹಿತ ನಾಲ್ಕು ತಂಡಗಳನ್ನು ಮಾಡಲಾಗಿದ್ದು, ಕುಮಟೂರು, ಮಂಚಳ್ಳಿ, ಶ್ರೀಮಂಗಲ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ.

ಈಗಾಗಲೇ ಕಾರ್ಯಾಚರಣೆಗೆ ಅನುಕೂಲವಾಗುವಂತೆ ಹುಲಿಯ ಚಲನ-ವಲನ ಕಂಡುಹಿಡಿಯಲು ೨೧ ಕ್ಯಾಮರಗಳನ್ನು ಅಳವಡಿಸಲಾಗಿದ್ದು, ಇನ್ನು ಹೆಚ್ಚುವರಿಯಾಗಿ ಕ್ಯಾಮರಾ ಅಳವಡಿಸಲಾಗುವುದು. ಒಟ್ಟು ೫೦ ಕ್ಯಾಮರಾ ಅಳವಡಿಸಲು ನಿರ್ಧರಿಸಲಾಗಿದೆ. ಹಸುಗಳ ಮೇಲೆ ಹುಲಿ ದಾಳಿ ಮಾಡಿದ ಜಾಗ, ಕಾರ್ಮಿಕ ಮಹಿಳೆ ಮತ್ತು ಬಾಲಕನನ್ನು ಹುಲಿ ದಾಳಿ ಮಾಡಿ ಕೊಂದುಹಾಕಿರುವ ಜಾಗದ ಸುತ್ತಲೂ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಕಾರ್ಯಾಚರಣೆಗೆ ಡ್ರೋನ್ ಕ್ಯಾಮರಾ ಬಳಸಿಕೊಳ್ಳಲಾಗುತ್ತಿದೆ. ಡ್ರೋನ್ ಕ್ಯಾಮರಾ ಅರ್ಧ ಕಿ.ಮೀ.ವರೆಗೆ ಹಾರುತ್ತದೆ. ೧ ರಿಂದ ೨ ಕಿ.ಮೀ.ವರೆಗಿನ ವ್ಯಾಪ್ತಿಯ ಚಿತ್ರವನ್ನು ಸ್ಪಷ್ಟವಾಗಿ ಸೆರೆಹಿಡಿಯುವ ಸಾಮರ್ಥ್ಯ ಹೊಂದಿದೆ ಎಂದು ಸಿಸಿಎಫ್ ಮಾಹಿತಿ ನೀಡಿದರು. ಇದುವರೆಗೆ ನಡೆದ ಅರಣ್ಯ ಇಲಾಖೆಯ ಕಾರ್ಯಾಚರಣೆಯಲ್ಲಿ ಹುಲಿ ಪ್ರತ್ಯಕ್ಷವಾಗಿಲ್ಲ.

ಭಾನುವಾರ ರಾತ್ರಿ ದೇಕಮಾಡ ಪುಷ್ಪ ಅವರ ಹಸುವನ್ನು ಕೊಂದ ಜಾಗದಲ್ಲಿ ಅಳವಡಿಸಿದ ಬೋನಿನ ಸಮೀಪ ಕ್ಯಾಮರಾ ಅಳವಡಿಸಿದ್ದು, ಅಲ್ಲಿಗೆ ಹುಲಿ ಬಂದಿಲ್ಲ. ಮಂಗಳವಾರ ಮಧ್ಯಾಹ್ನ ತಾವಳಗೇರಿ ಗ್ರಾಮದ ಗುಟ್ಟುಕೊಲ್ಲಿ ಪೈಸಾರಿ ಜಾಗದಲ್ಲಿ ಹುಲಿ ಸಾರ್ವಜನಿಕರಿಗೆ ಪ್ರತ್ಯಕ್ಷವಾಗಿದ್ದು, ಸೋಮವಾರ ಸಂಜೆ ಟಿ.ಶೆಟ್ಟಿಗೇರಿ-ಬಿರುನಾಣಿ ಮುಖ್ಯರಸ್ತೆ ಬದಿಯ ಪೊನ್ಯಭಗವತಿ ದೇವಸ್ಥಾನ ಸಮೀಪ ಖಾಸಗಿ ಬಸ್‌ನ ಎದುರು ಸಂಜೆ ೫ ಗಂಟೆ ವೇಳೆಗೆ ಹುಲಿ ರಸ್ತೆ ದಾಟಿದ್ದನ್ನು ಬಸ್‌ನ ಚಾಲಕ ಮತ್ತು ಕೆಲವು ಪ್ರಯಾಣಿಕರು ಪ್ರತ್ಯಕ್ಷವಾಗಿ ಕಂಡಿದ್ದಾರೆ.