ಮಡಿಕೇರಿ, ಫೆ. ೨೩: ಬೆಳೆಯುವ ಮಕ್ಕಳಿಗೆ ಸಕಾರಾತ್ಮಕ ವಿಷಯಗಳ ಬಗ್ಗೆ ಅರಿವು ಮೂಡಿಸಬೇಕು. ಲೌಕಿಕ ಪ್ರಬುದ್ಧತೆ ಇದ್ದರೆ ಸಾಲದು, ಮಾನವೀಯತೆ ಹಾಗೂ ದೈಹಿಕವಾಗಿ ಪ್ರಬುದ್ಧತೆಯನ್ನು ಹೊಂದಿರಬೇಕು. ಇದು ಸ್ಕೌಟ್ಸ್ ಮತ್ತು ಗೈಡ್ಸ್ ಚಟುವಟಿಕೆಯಿಂದ ಸಾಧ್ಯ ಎಂದು ಸಿವಿಲ್ ನ್ಯಾಯಾಧೀಶರು ಹಾಗೂ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನೀಸಾ ಪ್ರತಿಪಾದಿಸಿದರು.

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ವತಿಯಿಂದ ಸೋಮವಾರ ನಗರದ ಸಂತ ಜೋಸೆಫರ ಶಾಲಾ ಆವರಣದಲ್ಲಿ ನಡೆದ ಸ್ಕೌಟ್ಸ್ ಮತ್ತು ಗೈಡ್ಸ್ ವಿಶ್ವ ಸಂಸ್ಥಾಪಕರ ದಿನಾಚರಣೆ ಮತ್ತು ಚಿಂತನ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸರ್ವಧರ್ಮಗಳ ಪ್ರಾರ್ಥನೆ ನಾವೆಲ್ಲರೂ ಒಂದೇ ಎಂಬ ಮನೋಭಾವನೆಯ ಮೂಲ. ಎಲ್ಲಾ ಧರ್ಮಗಳು ಸಾರುವುದು ಹಾಗೂ ಎಲ್ಲಾ ಧರ್ಮಗ್ರಂಥಗಳು ಹೇಳಿರುವುದು ಧರ್ಮಗಳಿಗಿಂತಲೂ ಮಾನವತಾ ಧರ್ಮವೇ ಮೇಲೂ ಎಂದು ಅವರು ಹೇಳಿದರು. ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಹಾಗೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ನ ಪ್ರಧಾನ ಆಯುಕ್ತ ಪಿ.ಎಸ್. ಮಚ್ಚಾಡೋ ಮಾತನಾಡಿ, ಮಕ್ಕಳು ಮಾನಸಿಕವಾಗಿ ಮೊದಲು ಸದೃಢರಾಗಬೇಕು, ಆರೋಗ್ಯ ಮತ್ತು ದೈಹಿಕವಾಗಿ ಸಶಕ್ತರಾಗಿ ಮುಂದುವರೆಯಲು ದೇಶದ ಉತ್ತಮ ಪ್ರಜೆಗಳಾಗಿ ಬೆಳೆಯಲು ಮಕ್ಕಳ ಮಾನಸಿಕ ಪ್ರಬುದ್ಧತೆಯ ಮೇಲೆ ಸಕಾರಾತ್ಮಕ ಪರಿಣಾಮ ಬೀರಲು ಸ್ಕೌಟ್ಸ್ ಮತ್ತು ಗೈಡ್ಸ್ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಅವರು ಹೇಳಿದರು.

ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥಾಪಕ ಲಾರ್ಡ್ ಬೇಡೆನ್ ಪೊವೆಲ್ ಹಾಗೂ ಅವರ ಪತ್ನಿ ಲೇಡಿ ಬೇಡೆನ್ ಪೊವೆಲ್ ಅವರ ಜನ್ಮದಿನ ಒಂದೇ ದಿನದಂದು ಆಚರಿಸುತ್ತಿದ್ದು, ಅವರ ನೆನಪಿಗಾಗಿ ಫೆಬ್ರವರಿ ೨೨ ನ್ನು ಸಂಸ್ಥಾಪಕರ ದಿನವನ್ನಾಗಿ ಹಾಗೂ ಚಿಂತನ ದಿನವನ್ನಾಗಿ ಪ್ರಪಂಚದಾದ್ಯAತ ಆಚರಿಸಲಾಗುತ್ತದೆ ಎಂದು ತಿಳಿಸಿದರು.

ಪ್ರಾಸ್ತವಿಕವಾಗಿ ಮಾತನಾಡಿದ ಜಿಮ್ಮಿ ಸಿಕ್ವೇರ ಅವರು, ಸ್ಕೌಟ್ಸ್ ಮತ್ತು ಗೈಡ್ಸ್ನ ಹುಟ್ಟು ಮತ್ತು ಬೆಳವಣಿಗೆಯನ್ನು, ಅದರ ಸಂಸ್ಥಾಪಕರಾದ ಲಾರ್ಡ್ ಬೇಡೆನ್ ಪೊವೆಲ್ ಅವರ ಇತಿಹಾಸವನ್ನು ಮಕ್ಕಳಿಗೆ ನೆನಪಿಸಿದರು. ಪ್ರಪಂಚದಾದ್ಯAತ ಇರುವ ಏಕೈಕ ಸಂಸ್ಥೆಯೆAದರೆ ಅದು ಸ್ಕೌಟ್ಸ್ ಮತ್ತು ಗೈಡ್ಸ್ ಎಂದು ತಿಳಿಸಿದರು.

ಒಂದೇ ರೀತಿಯ ಸಮವಸ್ತç ಪ್ರಪಂಚದ ಯಾವುದೇ ಮೂಲೆ ಮೂಲೆಯಲ್ಲಿ ಕಾಣುವುದು ಕೇವಲ ಸ್ಕೌಟ್ಸ್ ಮತ್ತು ಗೈಡ್ಸ್ನಿಂದ ಮಾತ್ರ. ಅದು ಮಕ್ಕಳಲ್ಲಿ ವಿಶೇಷ ಮನೋಭಾವ ಬೆಳೆಯಲು ಸಹಕರಿಸುತ್ತದೆ. ಸ್ಕೌಟಿಂಗ್ ಎಂದರೆ ವಿಶ್ವ ಸಹೋದರತ್ವ ಎಂಬುದಾಗಿದೆ; ಆ ನಿಟ್ಟಿನಲ್ಲಿ ಸಂಸ್ಥೆಯು ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು. ಸ್ಕೌಟ್ಸ್ ಮತ್ತು ಗೈಡ್ಸ್ ಉತ್ತಮ ಕಾರ್ಯನಿರ್ವಾಹಕರಾದ ಹಾಗೂ ಮಡಿಕೇರಿ ಕ್ಷೇತ್ರ ಶಿಕ್ಷಣಾಧಿಕಾರಿ ಗಾಯತ್ರಿಯವರಿಗೆ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಕಾರ್ಯನಿರ್ವಾಹಕ ಕೆ.ಟಿ.ಬೇಬಿ ಮ್ಯಾಥ್ಯೂ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ರಂಜಿತ್, ಸ್ಥಳೀಯ ಸಂಸ್ಥೆ ಕಾರ್ಯದರ್ಶಿ ವಸಂತಿ, ದಮಯಂತಿ, ಉಪಸ್ಥಿತರಿದ್ದರು.