ಮಡಿಕೇರಿ, ಫೆ. ೨೩: ದಕ್ಷಿಣ ಕೊಡಗಿನಲ್ಲಿ ಹುಲಿ ದಾಳಿಯಿಂದಾಗಿ ಮಾನವ-ಜಾನುವಾರು ಪ್ರಾಣ ಹಾನಿ ಸಂಭವಿಸಿರುವ ಘಟನೆಯ ಬಗ್ಗೆ ಸರಕಾರ ಹಾಗೂ ಅರಣ್ಯ ಇಲಾಖೆಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಹಲವು ಪ್ರಮುಖರು ನಿರ್ಲಕ್ಷö್ಯವನ್ನು ಖಂಡಿಸಿದ್ದಾರೆ. ಈ ಬಗ್ಗೆ ಜಿಲ್ಲಾ ಕಾಂಗ್ರೆಸ್, ಜಿಲ್ಲಾ ಜೆ.ಡಿ.ಎಸ್. ಹಾಗೂ ಕೆ.ಪಿ.ಸಿ.ಸಿ. ಸದಸ್ಯ ಕದ್ದಣಿಯಂಡ ಹರೀಶ್ ಬೋಪಣ್ಣ ಪ್ರತ್ಯೇಕ ಹೇಳಿಕೆಗಳನ್ನು ನೀಡಿದ್ದಾರೆ.

ಸರಕಾರ ನೇರ ಹೊಣೆ

ಶ್ರೀಮಂಗಲದಲ್ಲಿ ಹುಲಿ ದಾಳಿಯಿಂದ ಸಂಭವಿಸಿದ ಇಬ್ಬರು ಅಮಾಯಕರ ಸಾವಿಗೆ ಸರ್ಕಾರವೇ ನೇರ ಹೊಣೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ.ಕೆ. ಮಂಜುನಾಥ್‌ಕುಮಾರ್ ಆರೋಪಿಸಿದ್ದಾರೆ.

ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ, ಪ್ರಾಕೃತಿಕ ವಿಕೋಪ ಮತ್ತು ಕಾಡು ಪ್ರಾಣಿಗಳ ದಾಳಿಯಿಂದ ಜಿಲ್ಲೆಯ ಜನ ಸಂಕಷ್ಟಗಳನ್ನು ಎದುರಿಸುತ್ತಿದ್ದರೂ ಯಾವುದೇ ಸ್ಪಂದನ ನೀಡುತ್ತಿಲ್ಲ ಎಂದು ಟೀಕಿಸಿದ್ದಾರೆ.

ಸಕಾಲದಲ್ಲಿ ಸರ್ಕಾರ ಅರಣ್ಯ ಇಲಾಖೆಗೆ ಸೂಕ್ತ ನಿರ್ದೇಶನ ನೀಡಿದ್ದರೆ ಎರಡು ಜೀವಗಳನ್ನು ಉಳಿಸಿಕೊಳ್ಳಬಹುದಾಗಿತ್ತು. ಕಳೆದ ಆರು ತಿಂಗಳುಗಳಿAದ ನಿರಂತರವಾಗಿ ಹುಲಿ ದಾಳಿಯಾಗುತ್ತಿದ್ದು, ನೂರಾರು ಹಸುಗಳು ಬಲಿಯಾಗಿವೆ. ಆದರೂ ಸರ್ಕಾರ ನಿದ್ರಾವಸ್ಥೆಯಿಂದ ಎಚ್ಚರಗೊಳ್ಳದಿದ್ದದ್ದೇ ಇದೀಗ ಇಬ್ಬರು ಅಮಾಯಕರು ಸಾವಿಗೀಡಾಗಲು ಕಾರಣವಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಸಚಿವರ ರಾಜೀನಾಮೆಗೆ ಒತ್ತಾಯ

ಹುಲಿ ದಾಳಿಗೆ ಎರಡು ಜೀವ ಬಲಿಯಾಗಲು ಸರ್ಕಾರದ ನಿರ್ಲಕ್ಷö್ಯವೇ ಕಾರಣವೆಂದು ಆರೋಪಿಸಿರುವ ಜಾತ್ಯತೀತ ಜನತಾದಳದ ಜಿಲ್ಲಾಧ್ಯಕ್ಷ ಕೆ.ಎಂ. ಗಣೇಶ್, ಅರಣ್ಯ ಸಚಿವರು ತಮ್ಮ ಸ್ಥಾನಕ್ಕೆ ತಕ್ಷಣ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದ್ದಾರೆ.

ಕೊಡಗು ಜಿಲ್ಲೆಯಲ್ಲಿ ನಿರಂತರ ಹುಲಿ ಮತ್ತು ಕಾಡಾನೆಗಳ ದಾಳಿಯಾಗುತ್ತಿದ್ದರೂ ಯಾವುದೇ ಕ್ರಮ ಕೈಗೊಳ್ಳದೆ ಸರ್ಕಾರ ಮೈಮರೆತದ್ದೇ ಎರಡು ಅಮಾಯಕ ಜೀವಗಳು ಬಲಿಯಾಗಲು ಕಾರಣವೆಂದು ಆರೋಪಿಸಿದ್ದಾರೆ.

ಇತ್ತೀಚೆಗಷ್ಟೇ ಮಡಿಕೇರಿಗೆ ಆಗಮಿಸಿದ್ದ ಅರಣ್ಯ ಸಚಿವ ಅರವಿಂದ ಲಿಂಬಾವಳಿ ಅವರು ಅರಣ್ಯ ಭವನದ ನಾಲ್ಕು ಗೋಡೆಗಳ ಮಧ್ಯ ಅಧಿಕಾರಿಗಳ ಕಾಟಾಚಾರದ ಸಭೆ ನಡೆಸಿ ಹೋಗಿದ್ದಾರೆ. ಜಿಲ್ಲೆಯ ಜನ ವನ್ಯಜೀವಿಗಳ ದಾಳಿಯಿಂದ ಅನುಭವಿಸುತ್ತಿರುವ ಕಷ್ಟ, ನಷ್ಟಗಳ ಬಗ್ಗೆ ಸಚಿವರು ಯಾವುದೇ ಗಂಭೀರ ಚಿಂತನೆ ಮಾಡಿಲ್ಲ. ಗ್ರಾಮಸ್ಥರು ಹಾಗೂ ಬೆಳೆಗಾರರೊಂದಿಗೆ ಸಭೆ ನಡೆಸಿ ಕಾಡು ಪ್ರಾಣಿಗಳ ಹಾವಳಿಯ ಕುರಿತು ಅಭಿಪ್ರಾಯ ಸಂಗ್ರಹಿಸದೆ ಕೇವಲ ಅಧಿಕಾರಿಗಳಿಂದ ಮಾಹಿತಿ ಪಡೆದು ತೆರಳಿರುವ ಅರಣ್ಯ ಸಚಿವರು ಶ್ರೀಮಂಗಲದ ಘಟನೆಗೆ ನೇರ ಹೊಣೆಯಾಗಿದ್ದಾರೆ ಎಂದು ಆರೋಪಿಸಿರುವ ಗಣೇಶ್, ಸಚಿವರು ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕೆಂದು ಒತ್ತಾಯಿಸಿದ್ದಾರೆ.

ವನ್ಯಜೀವಿ ಉಪಟಳ ತಡೆಯುವಲ್ಲಿ ವಿಫಲ

ದಕ್ಷಿಣ ಕೊಡಗಿನಲ್ಲಿ ನಿರಂತರವಾಗಿರುವ ಹುಲಿ ದಾಳಿಗೆ ಅರಣ್ಯ ಇಲಾಖೆಯ ಕರ್ತವ್ಯ ಲೋಪ ಮತ್ತು ಸರ್ಕಾರದ ನಿರ್ಲಕ್ಷö್ಯವೇ ಕಾರಣವೆಂದು ಕೆಪಿಸಿಸಿ ಸದಸ್ಯ ಹರೀಶ್ ಬೋಪಣ್ಣ ಆರೋಪಿಸಿದ್ದಾರೆ.

ಶ್ರೀಮಂಗಲದಲ್ಲಿ ಎರಡು ಅಮಾಯಕ ಜೀವಗಳನ್ನು ಹುಲಿ ಬಲಿ ತೆಗೆದುಕೊಂಡ ಪ್ರಕರಣ ಆತಂಕಕಾರಿಯಾಗಿದ್ದು, ಸರ್ಕಾರ ತಕ್ಷಣ ಎಚ್ಚೆತ್ತುಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಕೊಡಗಿನಲ್ಲಿ ವನ್ಯಜೀವಿಗಳ ದಾಳಿ ಮಿತಿ ಮೀರಿದೆ ಎನ್ನುವ ಮಾಹಿತಿ ಸರ್ಕಾರಕ್ಕಿದ್ದರೂ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷö್ಯ ತೋರಿರುವುದು ಮತ್ತು ಅರಣ್ಯ ಇಲಾಖೆಯ ಅಸಡ್ಡೆ ಈ ಘಟನೆಗೆ ಕಾರಣವಾಗಿದೆ ಎಂದು ಟೀಕಿಸಿದ್ದಾರೆ.

ತಕ್ಷಣ ವನ್ಯಜೀವಿಗಳ ದಾಳಿ ತಡೆಗೆ ಶಾಶ್ವತ ಯೋಜನೆಯೊಂದನ್ನು ಸರ್ಕಾರ ರೂಪಿಸÀಬೇಕು, ಜಿಲ್ಲಾಡಳಿತ ಈ ಕುರಿತು ಸಮಗ್ರ ವರದಿಯೊಂದನ್ನು ಸಿದ್ಧಪಡಿಸಬೇಕು ಮತ್ತು ಬೆಳೆ ನಷ್ಟವನ್ನು ಬಿಡುಗಡೆ ಮಾಡಬೇಕೆಂದು ಅವರು ಒತ್ತಾಯಿಸಿದ್ದಾರೆ.