ವೀರಾಜಪೇಟೆ, ಫೆ.೨೨ : ವೀರಾಜಪೇಟೆ ಬಳಿಯ ಕೊಡಗು -ಕೇರಳ - ಮಾಕುಟ್ಟ ಚೆಕ್ ಪೋಸ್ಟ್ನಲ್ಲಿ ಇಂದು ಕೇರಳ ರಾಜ್ಯದ ವಿವಿಧೆಡೆಗಳಿಂದ ಬಂದ ಕೊರೊನಾ ನೆಗೆಟಿವ್ ವರದಿ ಇದ್ದವರಿಗೆ ಮಾತ್ರ ಕರ್ನಾಟಕ ರಾಜ್ಯ ಪ್ರವೇಶಕ್ಕೆ ಆರೋಗ್ಯ ತಪಾಸಣೆಯ ಅಧಿಕಾರಿಗಳು ಅವಕಾಶ ನೀಡಿದ್ದರಿಂದ ಗಡಿಭಾಗದಲ್ಲಿ ಕೆಲಕಾಲ ಗೊಂದಲದ ಸ್ಥಿತಿ ನಿರ್ಮಾಣವಾಗಿತ್ತು.

ನೆರೆಯ ಕೇರಳದಲ್ಲಿ ಕೊರೊನಾ ಸೋಂಕಿನ ಪ್ರಮಾಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ಸೂಚನೆಯಂತೆ ಗಡಿಭಾಗದಲ್ಲಿ ಕರ್ನಾಟಕಕ್ಕೆ ಪ್ರವೇಶಿಸುವ ವಾಹನಗಳನ್ನು ಅಧಿಕಾರಿಗಳು ತಪಾಸಣೆಗೊಳಪಡಿಸುತ್ತಿದ್ದು, ಕೊರೊನಾ ನೆಗೆಟಿವ್ ವರದಿ ಇದ್ದವರಿಗೆ ಮಾತ್ರ ಇಂದು ಬೆಳಗಿನಿಂದ ರಾಜ್ಯ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ. ಇದರಿಂದ ಕರ್ನಾಟಕದಿಂದ ಕೇರಳಕ್ಕೆ ತೆರಳಿದ್ದ ವಾಹನ ಚಾಲಕರು ಹಾಗೂ ಪ್ರಯಾಣಿಕರು ಮರಳಿ ಕರ್ನಾಟಕಕ್ಕೆ ಬರಲು ಸಾಧ್ಯವಾಗದೆ ಗಡಿಭಾಗದಲ್ಲಿ ಪರಿತಪಿಸುವಂತಾಯಿತು. ಗಡಿಯಲ್ಲಿ ಸಾಕಷ್ಟು ವಾಹನಗಳು ನಿಂತು, ಪ್ರಯಾಣಿಕರು ಹಾಗೂ ವಾಹನ ಚಾಲಕರು ಸಮಸ್ಯೆ ಎದುರಿಸುವಂತಾಯಿತು.

ಈ ಸಂದರ್ಭದಲ್ಲಿ ಕರ್ನಾಟಕದಿಂದ ಕೇರಳಕ್ಕೆ ತೆರಳಿ ಹಿಂತಿರುಗಿದ ಗೂಡ್ಸ್ ವಾಹನ ಸೇರಿದಂತೆ ಇತರ ವಾಹನಗಳ ಪರವಾಗಿ ಮಾತನಾಡಿದ ಇಲ್ಲಿನ ಕೆಲವರು ರಾಜ್ಯದಿಂದ ಕೇರಳ ಪ್ರವೇಶಿಸುವವರಿಗೆ, ಕೇರಳದಿಂದ ಹಿಂದಿರುಗುವಾಗ ಕೊರೊನಾ ನೆಗೆಟಿವ್ ವರದಿ ನೀಡುವಂತೆ ಯಾವುದೇ ಮಾಹಿತಿಯನ್ನು ನೀಡಲಿಲ್ಲ. ಅಲ್ಲದೆ ಸೋಮವಾರ ಬೆಳಗಿನವರೆಗೂ ಕೂಡ ಯಾವುದೇ ತಪಾಸಣೆ ಇಲ್ಲದೆ ಕರ್ನಾಟಕವನ್ನು ಪ್ರವೇಶಿಸಲು ಅವಕಾಶ ನೀಡಲಾಗಿತ್ತು. ಆದರೆ ಇದೀಗ ದಿಢೀರನೆ ನೆಗೆಟಿವ್ ವರದಿ ಇದ್ದರೆ ಮಾತ್ರ ರಾಜ್ಯ ಪ್ರವೇಶಕ್ಕೆ ಅವಕಾಶ ನೀಡಲಾಗುವುದು ಎಂದು ಹೇಳಿ ಕರ್ನಾಟಕ ರಾಜ್ಯದವರಿಗೆ ಗೇಟ್ ಬಂದ್ ಮಾಡಲಾಗಿದೆ. ಸಾಕಷ್ಟು ಮಂದಿ ಸರಕು ಸಾಗಾಣಿಕಾ ವಾಹನಗಳ ಚಾಲಕರು ಈ ಕುರಿತು ಯಾವುದೇ ಮಾಹಿತಿ ಇಲ್ಲದೆ ಭಾನುವಾರವಷ್ಟೆ ಕೇರಳಕ್ಕೆ ತೆರಳಿದ್ದರು. ಮೊದಲೇ ಮಾಹಿತಿ ನೀಡದೆ ಅಥವಾ ಕೊರೊನಾ ಪರೀಕ್ಷೆ ನಡೆಸಿ ಸ್ಥಳದಲ್ಲಿಯೇ ಫಲಿತಾಂಶ ವ್ಯವಸ್ಥೆ ಮಾಡದೆ ಈಗ ದಿಢೀರನೆ ನೆಗೆಟಿವ್ ವರದಿ ಕೇಳುತ್ತಿರುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯದಿಂದ ಕೇರಳಕ್ಕೆ ತೆರಳಿದವರಿಗೆ ಚೆಕ್‌ಪೋಸ್ಟ್ನಲ್ಲಿ ಅಧಿಕಾರಿಗಳ ಸೂಕ್ತ ಮಾಹಿತಿ ಕೊರತೆಯಿಂದಾಗಿ ಪಟ್ಟಣದಿಂದ ಕೇರಳದ ಕಡೆಗೆ ತೆರಳಿದ ಕೆಎಸ್‌ಆರ್‌ಟಿಸಿ ಬಸ್‌ಗಳು ಹಾಗೂ ಹಲವು ಖಾಸಗಿ ವಾಹನಗಳು ವಿಚಾರ ತಿಳಿದು ಗಡಿಭಾಗದಲ್ಲೆ ಪ್ರಯಾಣಿಕರನ್ನು ಇಳಿಸಿ ಹಿಂದಕ್ಕೆ ಬಂದ ಘಟನೆ ಇಂದು ನಡೆಯಿತು.

ಈ ಕುರಿತು ಮಾಹಿತಿ ನೀಡಿದ ಅಧಿಕಾರಿಗಳು ಕೊರೊನಾ ನೆಗೆಟಿವ್ ವರದಿ ತಂದ ಕೇರಳದ ಸುಮಾರು ೨೫೦ ಕ್ಕೂ ಹೆಚ್ಚು ಮಂದಿಗೆ ಸರಕಾರದ ಆದೇಶದಂತೆ ಇಂದು ರಾಜ್ಯ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ. ಚೆಕ್‌ಪೋಸ್ಟ್ನಲ್ಲಿ ತಪಾಸಣೆ ನಡೆಸಿ ಹಿಂದಕ್ಕೆ ಹೋದ ಕೆಲವು ಮಂದಿ ಕೇರಳದ ಇರಿಟ್ಟಿಗೆ ತೆರಳಿ ನೆಗೆಟಿವ್ ವರದಿ ತಂದಿದ್ದು ಅವರಿಗೂ ಕರ್ನಾಟಕ ರಾಜ್ಯ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ ಎಂದು ‘ಶಕ್ತಿ’ ಪ್ರತಿನಿಧಿಗೆ ತಿಳಿಸಿದರು.

ಹಿಂದಿರುಗಿದ ಕೇರಳ ರಾಜ್ಯದ ಬಸ್ಸುಗಳು

ಎಂದಿನAತೆ ಕೇರಳ ರಾಜ್ಯದ ಸರ್ಕಾರಿ ಬಸ್ಸುಗಳು ಕೇರಳ ರಾಜ್ಯದಿಂದ ಗಡಿ ಮೂಲಕ ರಾಜ್ಯಕ್ಕೆ ಸಂಚಾರ ಮಾಡುತಿದ್ದು ಇಂದು ದಿಡೀರ್ ಬೆಳವಣಿಗೆಯಲ್ಲಿ ಮೈಸೂರು, ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದ ಪ್ರಯಾಣಿಕರನ್ನು ಕೇರಳ ರಾಜ್ಯ ಗಡಿಭಾಗವಾದ ಕೂಟುಹೊಳೆ ಜಂಕ್ಷನ್ ನಲ್ಲಿ ಕೆಳಗಿಳಿಸಿ ಹಿಂದಿರುಗಿದವು.

ಮರಳಿದ ಸರ್ಕಾರಿ ಬಸ್ಸುಗಳು

ಇಂದು ಕೇರಳ ರಾಜ್ಯದ ವಿವಿಧ ಸ್ಥಳಕ್ಕೆ ತೆರಳಬೇಕಿದ್ದ ಕೆ.ಎಸ್.ಆರ್.ಟಿ.ಸಿ ಬಸ್ಸುಗಳು ಮತ್ತು ಖಾಸಗಿ ಸಂಸ್ಥೆಗಳ ಒಡೆತನ ಬಸ್ಸುಗಳು ಗಡಿಯ ಮಾಕುಟ್ಟದವರೆಗೆ ಸಂಚರಿಸಿ ಹಿಂದಕ್ಕೆ ಸಾಗಿವೆ. ಪತ್ರಿಕೆಯು ಬಸ್ಸು ನಿರ್ವಾಹಕ ಬಳಿ ಕೇಳಿದಾಗ ನಿಲ್ದಾಣದಿಂದ ಹೊರಡುವ ಮುನ್ನವೇ ಮಾಹಿತಿ ತಿಳಿದಲ್ಲಿ ಇಂತಹ ಘಟನೆ ಸಂಭವಿಸುತ್ತಿರಲಿಲ್ಲ್ಲ ಎಂದು ಹೇಳಿದರು. ಸರಕು ಎತ್ತುವಳಿ ಮಾಡಿಕೊಂಡು ಕೇರಳ ರಾಜ್ಯಕ್ಕೆ ಪ್ರತಿನಿತ್ಯ ಸಾಗುವ ವಾಹನ ಚಾಲಕರು ಇರಟ್ಟಿ ತಲಶೇರಿ ಮಾರ್ಗವಾಗಿ ಮಾನಂದವಾಡಿ, ಬಾವಲಿಗಾಗಿ ಸಾಗಬೇಕಾಗಿದೆ ಸುಮಾರು ೬೦-೮೦ ಕಿ.ಮೀ. ಹೆಚ್ಚು ಸಾಗಬೇಕು; ದಿನೋಪಯೋಗಿ ವಸ್ತುಗಳ ಸಾಗಿಸುವ ನಮ್ಮವರಿಗೆ ವಿನಾಯಿತಿ ನೀಡಬೇಕು ಎಂದು ಮೈಸೂರಿನ ಚಾಲಕ ಗೋವಿಂದ ಅವರು ನೊಂದು ಹೇಳಿದರು.

ಜನಪ್ರತಿನಿಧಿಗಳ ಆಕ್ರೋಶ

ಈ ಹಿಂದೆ ಕೋವಿಡ್ ಹಿನ್ನೆಲೆಯಲ್ಲಿ ಕೇರಳ ರಾಜ್ಯದ ಗಡಿಭಾಗವಾದ ಕಿಳಿಯಂದ್ರ ಚೆಕ್ ಪೊಸ್ಟ್ ನಲ್ಲಿ ಕೋವಿಡ್ ತಪಾಸಣೆ ಕೇಂದ್ರ ಸ್ಥಾಪನೆ ಮಾಡಿದ್ದು ನಂತರದಲ್ಲಿ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ಸ್ಥಳದಲ್ಲೇ ಉಚಿತವಾಗಿ ರೇಪಿಡ್ ಟೆಸ್ಟ್ ಮಾಡಿ ಪಾಸಿಟಿವ್ ವರದಿ ಬಂದಲ್ಲಿ ಪ್ರಯಾಣಿಸಲು ನೆಗೇಟಿವ್ ವರದಿ ಬಂದಲ್ಲಿ ಸೂಕ್ತವಾದ ಕ್ರಮ ಜರುಗಿಸುವ ಕ್ರಮ ಮಾಡಲಾಗಿತ್ತು. ಪ್ರಸ್ತುತ ಸ್ಥಳದಲ್ಲೇ ಕೊವೀಡ್ ತಪಾಸಣೆ ಕೇಂದ್ರವನ್ನು ತೆರೆದು ಪ್ರಯಾಣಿಕರಿಗೆ ತೊಂದರೆಯಾಗದ ರೀತಿಯಲ್ಲಿ ಕ್ರಮ ವಹಿಸುವಂತೆ ಜಿಲ್ಲಾಡÀಳಿತವನ್ನು ಒತ್ತಾಯ ಮಾಡುತ್ತಿದ್ದೇವೆ ಎಂದು ಪಟ್ಟಣ ಪಂಚಾಯಿತಿ ಸದಸ್ಯ ಮಹಮ್ಮದ್ ರಾಫಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

* ರಾಜ್ಯ ಹೆದ್ದಾರಿಯಾಗಿರುವ ಮಾಕುಟ್ಟ ಗಡಿಯಲ್ಲಿ ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚಾರ ಮಾಡುತ್ತವೆ. ರಾಜ್ಯ ಸರ್ಕಾರದ ಆದೇಶದಂತೆ ಗಡಿಯಲ್ಲಿ ಯಾವುದೇ ತಪಾಸಣೆ ಅಗತ್ಯವಿಲ್ಲ ಎಂಬುದಾಗಿದೆ. ಕೋವಿಡ್‌ನಿಂದ ಗಡಿ ಬಂದ್ ಮಾಡಲಾಗುತ್ತದೆ ಎಂದು ಪ್ರಚಾರ ಪಡಿಸಬೇಕಾಗಿತ್ತು. ಮಾಹಿತಿ ಕೊರತೆಯಿಂದ ಇಂದು ಪ್ರಯಾಣಿಕರು ತೊಂದÀರೆಗೆ ಸಿಲುಕಿದ್ದಾರೆ ಎಂದು ಪ.ಪಂ. ಸದಸ್ಯ ಪ್ರಥ್ವಿನಾಥ್ ಅಭಿಪ್ರಾಯಿಸಿದರು.

* ದೇಶದ ಕೆಲವು ಭಾಗಗಳಲ್ಲಿ ಕೋವಿಡ್ ಸೋಂಕು ವ್ಯಾಪಕವಾಗಿ ಹರಡುತ್ತಿದೆ ನೆರೆಯ ಕೇರಳ ರಾಜ್ಯದಲ್ಲಿ ಸೋಂಕಿನ ತೀವ್ರತೆಯ ಮೇಲೆ ಗಡಿ ಭಾಗ ಬಂದ್ ಮಾಡಿರುವುದು ಸಹಜವಾಗಿದೆ ಆದರೆ ದೇಶದ ಎಲ್ಲಾ ಭಾಗಗಳಲ್ಲಿ ಏಕಮುಖವಾದ ಕಾನೂನು ಜಾರಿಯಾಗಬೇಕು. ಪ್ರಯಾಣಿಕರಿಗೆ ಹೊರೆಯಾಗುವಂತೆ ಕಾನೂನು ಜಾರಿಗೆ ತಂದಿರುವುದು ವಿಪರ್ಯಸ ಸ್ಥಳದಲ್ಲೇ ಕೊವಿಡ್ ತಪಾಸಣೆ ಕೇಂದ್ರವನ್ನು ತೆರೆದು ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಬೇಕು. ಉಚಿತವಾಗಿ ಚಿಕಿತ್ಸೆ ನೀಡಬೇಕು ಎಂದು ಜಿಲ್ಲಾಡಳಿತವನ್ನು ಒತ್ತಾಯ ಮಾಡುವದಾಗಿ ಜೆಡಿಎಸ್ ಪ್ರಮುಖ ಹೆಚ್.ಎಸ್. ಮತೀನ್ ಹೇಳಿದ್ದಾರೆ.

ಮಾಕುಟ್ಟ ಚೆಕ್‌ಪೋಸ್ಟ್ನಲ್ಲಿ ತಾಲೂಕು ಆರೋಗ್ಯ ಘಟಕದಿಂದ ಪಿ.ಪಿ.ಕಿಟ್ ಧರಿಸಿದ ೬ಮಂದಿ ಸೇರಿದಂತೆ ಕಂದಾಯ ಇಲಾಖೆ, ಪೊಲೀಸ್ ಇಲಾಖೆ, ಅರಣ್ಯ ಇಲಾಖೆಯ ಸಿಬ್ಬಂದಿಗಳು ಇಂದು ಬೆಳಗಿನಿಂದಲೇ ತಪಾಸಣೆ ಕಾರ್ಯದಲ್ಲಿ ನಿರತರಾಗಿದ್ದಾರೆ.

- ಡಿ.ಎಂ.ಆರ್., ಕೆ.ಕೆ.ಎಸ್.