ನಾಪೋಕ್ಲು, ಫೆ. ೨೦: ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಮಡಿಕೇರಿ ತಾಲೂಕು ಕಾಂತೂರು-ಮೂರ್ನಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಬಡಕೇರಿ ಧವಸ ಭಂಡಾರದಲ್ಲಿ ಮಡಿಕೇರಿ ತಾಲೂಕು ತಹಶೀಲ್ದಾರ್ ಮಹೇಶ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಮಡಿಕೇರಿ ಹೋಬಳಿ ಕಂದಾಯ ಪರಿವೀಕ್ಷಕರು, ಗ್ರಾಮ ಲೆಕ್ಕಾಧಿಕಾರಿಗಳು, ಆಹಾರ ಇಲಾಖಾ ನಿರೀಕ್ಷಕರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಭೂ ದಾಖಲೆಗಳ ಸಹಾಯಕರು, ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ತಾಲೂಕು ಪಂಚಾಯಿತಿ ಅಧ್ಯಕ್ಷರು, ಜಿಲ್ಲಾ ಪಂಚಾಯಿತಿ ಸದಸ್ಯರು ಈ ಸಂದರ್ಭದಲ್ಲಿ ಹಾಜರಿದ್ದರು.

ಕಾರ್ಯಕ್ರಮದಲ್ಲಿ ಹಲವಾರು ಅಹವಾಲುಗಳನ್ನು ಸ್ವೀಕರಿಸಲಾಯಿತು. ಸ್ಥಳದಲ್ಲಿ ಕೆಲವು ಅರ್ಜಿಗಳಿಗೆ ಪರಿಹಾರ ಒದಗಿಸಲಾಯಿತು. ಹಕ್ಕು ಪತ್ರಗಳನ್ನೂ, ಪಿಂಚಣಿದಾರರಿಗೆ ಆದೇಶ ಪಟ್ಟಿ ನೀಡಲಾಯಿತು. ತಹಶೀಲ್ದಾರರು ಅಧಿಕಾರಿಗಳೊಂದಿಗೆ ಹೊದವಾಡ ಶಾಲೆಗೆ, ರಸ್ತೆ ದುರಸ್ತಿ ಸ್ಥಳಕ್ಕೆ, ಪಾಲೆಮಾಡು ಅಂಬೇಡ್ಕರ್ ಭವನ ನಿರ್ಮಿಸಲು ಸ್ಥಳ ಪರಿಶೀಲನೆ, ಅಂಗನವಾಡಿ ನಿರ್ಮಾಣಕ್ಕೆ ಜಾಗ ಮಂಜೂರಾತಿ ಕುರಿತು ಸ್ಥಳ ಪರಿಶೀಲನೆಯನ್ನು ಸಾರ್ವಜನಿಕರ ಅಹವಾಲಿನ ಮೇರೆಗೆ ನಡೆಸಿದರು.