ಕಡಂಗ, ಫೆ. ೨೦: ಕಡಂಗ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡವನ್ನು ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ ಬೋಪಯ್ಯ ಉದ್ಘಾಟಿಸಿದರು. ಜಿಲ್ಲಾ ಪಂಚಾಯಿತಿ, ಲೋಕೋಪಯೋಗಿ ಇಲಾಖೆಯ ವತಿಯಿಂದ ರೂ ೨೦ ಲಕ್ಷ ವೆಚ್ಚದಲ್ಲಿ ಕಟ್ಟಡ ನಿರ್ಮಿಸಲಾಗಿದ್ದು, ಕಳೆದ ಮಳೆಗಾಲದ ವೇಳೆಯಲ್ಲಿ ಕಟ್ಟಡ ಹಾನಿಗೊಳಗಾಗಿತ್ತು. ಈ ಹಿನ್ನೆಲೆ ನೂತನ ಕಟ್ಟಡ ನಿರ್ಮಿಸಲಾಗಿದೆ.

ಉದ್ಘಾಟನೆ ಬಳಿಕ ಮಾತನಾಡಿದ ಶಾಸಕರು, ಸರಕಾರಿ ಶಾಲೆಗಳ ಅಭಿವೃದ್ಧಿಗೆ ಸರ್ಕಾರದ ಜೊತೆ ದಾನಿಗಳ ಸಹಕಾರದ ಅವಶ್ಯಕತೆ ಇದೆ. ಕಡಂಗ ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್ ನಿರ್ಮಾಣಕ್ಕೆ ಸಹಕರಿಸಿದ ದಾನಿಗಳಾದ ರಂಗರಾಜು ಮತ್ತು ತಂಡದವರ ಕಾರ್ಯವನ್ನು ಶ್ಲಾಘಿಸಿದ ಅವರು, ಸರಕಾರಿ ಶಾಲೆ ವಿದ್ಯಾರ್ಥಿಗಳು ಶಿಕ್ಷಣ, ಕ್ರೀಡೆ, ಕಲೆ ಎಲ್ಲಾ ವಿಷಯದಲ್ಲೂ ಮುಂದಿದ್ದಾರೆ. ಅವಕಾಶವನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿ ಕೊಳ್ಳಬೇಕೆಂದು ಕರೆ ನೀಡಿದರು.

ಜಿ.ಪಂ ಸದಸ್ಯ ನೆಲ್ಲಚಂಡ ಕಿರಣ್ ಕಾರ್ಯಪ್ಪ ಮಾತನಾಡಿದರು ಮುಖ್ಯ ಅತಿಥಿಗಳಾಗಿ ತಾ.ಪಂ ಅಧ್ಯಕ್ಷೆ ಶೋಭ ಮೋಹನ್, ಸದಸ್ಯೆ ಉಮಾ ಪ್ರಭು, ಎಸ್.ಡಿ.ಎಂ.ಸಿ. ಅಧ್ಯಕ್ಷೆ ಫೌಸಿಯ, ಗ್ರಾ.ಪಂ ಸದಸ್ಯ ಸುಬೀರ್ ಸಿ.ಈ, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೋಡಿರ ಪ್ರಸನ್ನ ತಮ್ಮಯ್ಯ, ಶಾಲೆಯ ಸ್ಥಳ ದಾನಿಗಳಾದ ಪ್ರಕಾಶ್, ಶಿಕ್ಷಣಾಧಿಕಾರಿ ಗಾಯತ್ರಿ ಟಿ.ಎನ್, ವೈದ್ಯಾಧಿಕಾರಿ ಶೈಲಜಾ, ಮುಖ್ಯ ಶಿಕ್ಷಕಿ ತಂಗಮ್ಮ ಸೇರಿದಂತೆ ಇನ್ನಿತರರು ಇದ್ದರು. ಉತ್ತ್ತಪ್ಪ ಸ್ವಾಗತಿಸಿ, ಬಬಿತಾ ವಂದಿಸಿದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಮೂಡಿಬಂದವು.