ಕಣಿವೆ, ಫೆ. ೧೯: ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾನೂನು ಅಧಿಕೃತವಾಗಿ ಜಾರಿಗೆ ಬಂದಿದ್ದರೂ ಕೂಡ ನೆರೆಯ ಮೈಸೂರು ಜಿಲ್ಲೆಯ ಬೈಲುಕೊಪ್ಪದ ಟಿಬೇಟನ್ನರು ವಾಸವಿರುವ ಕ್ಯಾಂಪ್‌ಗಳಲ್ಲಿನ ಹೊಟೇಲ್‌ಗಳಲ್ಲಿ ಗೋಮಾಂಸ ತರಹೇವಾರಿ ಖಾದ್ಯಗಳೊಂದಿಗೆ ಭರ್ಜರಿಯಾಗಿ ಮಾರಾಟವಾಗುತ್ತಿದೆ.

ಬೈಲಕೊಪ್ಪ ಟಿಬೇಟನ್ ನಿರಾಶ್ರಿತ ಶಿಬಿರದ ಟಿಬೆಟ್ ಕಿಚನ್ ಎಂಬ ನಾಮಾಂಕಿತವುಳ್ಳ ಹೊಟೇಲ್‌ನ ಎರಡು ಬ್ರಾಂಚ್‌ಗಳಲ್ಲಿ ಈ ನಿಷೇಧಿತ ಗೋಮಾಂಸ ನಿರಾತಂಕವಾಗಿ ನಡೆಯುತ್ತಿದೆ. ಈ ಹೊಟೇಲ್‌ನಲ್ಲಿರುವ ಉತ್ತರ ಭಾರತದ ಅಡುಗೆ ಸಿಬ್ಬಂದಿಗಳು ರುಚಿ ರುಚಿಯಾಗಿ ತಯಾರಿಸಿ ಕೊಡುವ ಈ ಗೋಮಾಂಸ ಸವಿಯಲು ಕುಶಾಲನಗರ ಹಾಗೂ ಪಿರಿಯಾಪಟ್ಟಣ ಭಾಗದ ನೂರಾರು ಮಂದಿ ಈ ಹೊಟೇಲ್‌ಗೆ ಎಡತಾಕುತ್ತಿದ್ದಾರೆ. ಕುಟುಂಬ ಸದಸ್ಯರು ತಂಡೋಪ ತಂಡವಾಗಿ ಈ ಟಿಬೆಟ್ ಕಿಚನ್ಹೊಟೇಲ್‌ಗೆ ಬಂದು ಅದರ ಸವಿರುಚಿ ಸವಿದು ಆನಂದ ಪಡುತ್ತಿದ್ದಾರೆ.

ಅಷ್ಟೇ ಅಲ್ಲ ಟಿಬೇಟನ್ನರು ಸಹ ಗೋಮಾಂಸವನ್ನು ಹೆಚ್ಚು ಬಳಸುತ್ತಾರೆ ಎನ್ನಲಾಗುತ್ತಿದೆ. ವಾರಾಂತ್ಯದ ದಿನಗಳಲ್ಲಿ ಮೈಸೂರು ಹಾಗೂ ಬೆಂಗಳೂರು ಭಾಗದಿಂದ ರೂಟ್ ಮ್ಯಾಪ್ ಹಾಕಿಕೊಂಡು ಬರುವ ಬಹಳಷ್ಟು ಮಂದಿ ಈ ಹೊಟೇಲ್‌ಗೆ ಬಂದು ಗೋಮಾಂಸದ ಖಾದ್ಯಕ್ಕೆ ಮುಗಿ ಬೀಳುತ್ತಿದ್ದಾರೆ.

ಹಾಗಾಗಿ ವಾರಾಂತ್ಯದ ದಿನಗಳಲ್ಲಿ ಈ ಹೊಟೇಲ್‌ನಲ್ಲಿ ಸರದಿ ಸಾಲಿನಲ್ಲೆ ನಿಂತು ಆಸನಗಳನ್ನು ಮೀಸಲಿರಿಸಿ ಗೋಮಾಂಸ ಸವಿಯುತ್ತಿರುವ ಬಗ್ಗೆ ಹೆಸರು ಹೇಳದ ವ್ಯಕ್ತಿಯೊಬ್ಬರು ‘ಶಕ್ತಿ’ಯೊಂದಿಗೆ ವಿವರಿಸಿದರು.

ಇಲ್ಲಿನ ಎರಡೂ ಶಿಬಿರಗಳಲ್ಲಿ ಇರುವ ಹೊಟೇಲ್‌ನಲ್ಲಿ ಒಂದಷ್ಟು ದರ ವ್ಯತ್ಯಾಸ ಇದೆಯಾದರೂ ಎರಡೂ ಕಡೆಗಳಲ್ಲಿ ಬೀಫ್ ಚಿಲ್ಲಿ, ಬೀಫ್ ಶಾಫ್ಟಾ, ಹುನುನ್ ಬೀಫ್, ಚಿಲ್ಲಿ ಬೀನ್ ಬೀಫ್, ಬ್ಲಾಕ್ ಬೀನ್ ಬೀಫ್, ಬೀಫ್ ವಿಥ್ ಚಿಲ್ಲಿ ಪೆಪ್ಪರ್ ಎಂಬಿತ್ಯಾದಿ ಹೆಸರಿನಲ್ಲಿ ಗೋಮಾಂಸ ಬಿಕರಿಯಾಗುತ್ತಿದೆ.

ಸರಬರಾಜು ಹೇಗೆ : ಗೋ ಹತ್ಯೆ ಹಾಗೂ ಗೋ ಮಾಂಸ ಮಾರಾಟ

(ಮೊದಲ ಪುಟದಿಂದ) ನಿಷೇಧವಿರುವಾಗ ಈ ಟಿಬೇಟನ್ ಶಿಬಿರಕ್ಕೆ ಗೋಮಾಂಸ ಸರಬರಾಜು ಆಗೋದು ಎಲ್ಲಿಂದ ಮತ್ತು ಹೇಗೆ ಸರಬರಾಜು ಆಗುತ್ತದೆ ಎಂಬ ಪ್ರಶ್ನೆಗೆ, ಪಿರಿಯಾಪಟ್ಟಣ ಹಾಗೂ ಹುಣಸೂರು ಕಡೆಗಳಿಂದ ಈ ಕ್ಯಾಂಪಿಗೆ ಮಾರುತಿ ವ್ಯಾನು ಹಾಗೂ ಕಾರುಗಳಲ್ಲಿ ತಂದು ಪೂರೈಕೆ ಮಾಡಲಾಗುತ್ತಿದೆ ಎಂಬ ಉತ್ತರ ಬರುತ್ತದೆ.

ಈ ಟಿಬೇಟನ್ ನಿರಾಶ್ರಿತರ ಶಿಬಿರದ ಬಹಳಷ್ಟು ಕಡೆಗಳಲ್ಲಿ ಈ ಗೋಮಾಂಸ ವ್ಯಾಪಾರ ಹಾಗೂ ಖಾದ್ಯ ಸಿದ್ಧಗೊಂಡು ಭರ್ಜರಿಯಾಗಿ ಬಿಕರಿಯಾಗುತ್ತಿದೆ ಎನ್ನಲಾಗುತ್ತಿದೆ.