ಮಡಿಕೇರಿ / ಶನಿವಾರಸಂತೆ, ಫೆ. ೧೯: ಅಕಾಲಿಕ ಮಳೆಯಿಂದ ಕಂಗೆಟ್ಟಿದ್ದ ಉತ್ತರ ಕೊಡಗಿನ ರೈತರು, ಇದೀಗ ಮತ್ತೊಮ್ಮೆ ಇಕ್ಕಟ್ಟಿಗೆ ಸಿಲುಕಿಕೊಂಡಿದ್ದಾರೆ. ತಾ.೧೯ ರಂದು ಶನಿವಾರಸಂತೆ ವ್ಯಾಪ್ತಿಯಲ್ಲಿ ಸುರಿದ ಆಲಿಕಲ್ಲು ಸಹಿತ ಮಳೆಗೆ ಉತ್ತರ ಕೊಡಗು ತತ್ತರಿಸಿ ಹೋಗಿದೆ. ತಾಲೂಕಿನ ಶನಿವಾರಸಂತೆ ಪಟ್ಟಣ ಸೇರಿದಂತೆ ಸಮೀಪದ ಗುಡುಗಳಲೆ, ಅಂಕನಹಳ್ಳಿ, ಹಂಡ್ಲಿ, ಮೆಣಸ, ದುಂಡಳ್ಳಿ, ದೊಡ್ಡಳ್ಳಿ, ನಿಡ್ತ ವ್ಯಾಪ್ತಿಯಲ್ಲಿ ಆಲ್ಲಿಕಲ್ಲು ಗುಡುಗು-ಸಿಡಿಲು ಸಹಿತ ಭಾರೀ ಮಳೆಯಾಗಿದೆ. ಆಕಾಶದಿಂದ ಬೃಹತ್ ಗಾತ್ರದ ಆಲಿಕಲ್ಲುಗಳು ಬಿದ್ದಿದ್ದು, ಹಿಂದೆAದೂ ಕಾಣದ ವಾತಾವರಣ ಸೃಷ್ಟಿಯಾಗಿದೆ. ಯಾವುದೋ ಹಿಮ ಆವೃತ ಪ್ರದೇಶದಂತೆ ಭಾಸವಾಗುತ್ತಿದೆ. ರಸ್ತೆ, ತೋಟ, ಮನೆಯ ಸುತ್ತ ಮಂಜುಗಡ್ಡೆ ಹರಡಿದ್ದು ಜನರಲ್ಲಿ ಆತಂಕ ಸೃಷ್ಟಿಸಿದೆ. ಆತಂಕದ ನಡುವೆ ಇಷ್ಟೊಂದು ಪ್ರಮಾಣದ ಆಲಿಕಲ್ಲು ಮಳೆ ಜನತೆಯಲ್ಲಿ ಅಚ್ಚರಿಯನ್ನು ಮೂಡಿಸಿದೆ. ಇದುವರೆಗೂ ಈ ರೀತಿಯ ಮಳೆ ಆಗಿರಲಿಲ್ಲ. ಉತ್ತರ ಭಾರತದಲ್ಲಿ ಈ ರೀತಿಯ ಮಳೆಯಾಗುವುದನ್ನು ನೋಡಿದ್ದೇವೆ. ಕೊಡಗು ಜಿಲ್ಲೆಯ ಯಾವುದೇ ಪ್ರದೇಶದಲ್ಲೂ ದೊಡ್ಡ ಪ್ರಮಾಣದ ಆಲಿಕಲ್ಲು ಮಳೆ ಸುರಿದಿರಲಿಲ್ಲ. ಇದೇ ಮೊದಲ ಬಾರಿಗೆ ಈ ರೀತಿಯ ಸನ್ನಿವೇಶ ನೋಡಿದ್ದೇವೆ ಎಂದು ಗ್ರಾಮಸ್ಥರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಕಳೆದ ಮೂರು ವರ್ಷಗಳಿಂದ ಜಿಲ್ಲೆಯಲ್ಲಿ ಉಂಟಾಗುತ್ತಿರುವ ಪ್ರಾಕೃತಿಕ ವಿಕೋಪದಿಂದ ನಲುಗಿರುವ ಜನತೆ ಮತ್ತೊಮ್ಮೆ ಆಲಿಕಲ್ಲು ಮಳೆಯ ವಿಶೇಷ ಅನುಭವಕ್ಕೆ ಬೆದರಿದ್ದಾರೆ. ರೈತ ಕಂಗಾಲು : ಮಧ್ಯಾಹ್ನ ಒಂದು ಗಂಟೆಗೆ ಸುರಿಯಲಾರಂಭಿಸಿದ ಆಲಿಕಲ್ಲು ಮಳೆ ಸುಮಾರು ಒಂದು ಗಂಟೆಗಳ ಕಾಲ ಎಡೆಬಿಡದೆ ಅಪ್ಪಳಿಸಿದೆ. ನೀರಿನ ಬದಲು ಆಲಿಕಲ್ಲು ಬಿದ್ದ ಪರಿಣಾಮ ರೈತರು ಕಂಗಾಲಾಗಿದ್ದಾರೆ. ಹಸಿಮೆಣಸು, ಕಾಫಿ, ಕರಿಮೆಣಸು, ಅಡಿಕೆ ಸೇರಿದಂತೆ (ಮೊದಲ ಪುಟದಿಂದ) ತೋಟಗಾರಿಕಾ ಬೆಳೆಗಳ ಮೇಲೆ ಇದು ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ರೈತರು ಅಸಹಾಯಕತೆ ವ್ಯಕ್ತಪಡಿಸಿದರು.

ಈಗಾಗಲೇ ಅಕಾಲಿಕ ಮಳೆಯಿಂದ ತೋಟಗಾರಿಕಾ ಬೆಳೆ ನಷ್ಟವಾಗಿದೆ. ಕೆಲವೆಡೆ ಇನ್ನೂ ಕೂಡ ಕಾಫಿ, ಕರಿಮೆಣಸು ಕೊಯ್ಲು ಕಾರ್ಯ ಮುಗಿದಿಲ್ಲ. ಇದರ ನಡುವೆ ಆಲಿಕಲ್ಲು ಮಳೆ ಗಾಯದ ಮೇಲೆ ಬರೆ ಎಳೆದಂತೆ ಮಾಡಿದೆ ಎಂದು ನೋವು ತೋಡಿಕೊಂಡಿದ್ದಾರೆ.

ಕಾಫಿ ತೋಟಗಳಲ್ಲಿ ರೋಬಸ್ಟ÷ ಕಾಫಿ ಕೊಯ್ಲು ನಡೆಯುತ್ತಿದ್ದು ಆಲಿಕಲ್ಲು ಹೊಡೆತಕ್ಕೆ ಹಣ್ಣು ನೆಲಕಚ್ಚಿದೆ. ಕಣದಲ್ಲಿ ಒಣಗುತ್ತಿದ್ದ ಹಾಗೂ ಪಲ್ಪಿಂಗ್ ಮಾಡಿ ಒಣಗಿಸಿದ್ದ ಕಾಫಿ ಹಣ್ಣು ಒದ್ದೆಯಾಗಿ ಹಾನಿ ಸಂಭವಿಸಿದೆ. ಜೋಳ ಬೆಳೆ ಕೂಡ ಹಾನಿಗೊಳಗಾಗಿದೆ.

ಅಕಾಲಿಕ ಮಳೆಯಿಂದ ಕಾಫಿ ಹೂ ಬಿಡುವ ಆತಂಕ ಮೂಡಿದೆ. ಹಸಿರು ಮೆಣಸಿನ ಕಾಯಿ ಗಿಡ ನೆಟ್ಟಿದ್ದು ಇದೀಗ ಕೊಳೆಯುತ್ತಿದೆ. ಭೂಮಿ ಶೀತಗೊಂಡರೆ ಬೆಳೆ ಹಾಳಾಗುತ್ತದೆ. ಈ ಸಮಯದಲ್ಲಿ ಆಲಿಕಲ್ಲು ಮಳೆ ಬೀಳಬಾರದಿತ್ತು ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದರು.

ರಭಸದಿಂದ ಒಂದು ಗಂಟೆಗಳ ಕಾಲ ಸುರಿದ ಆಲಿಕಲ್ಲು ಮಳೆಗೆ ರಸ್ತೆ ಸೇರಿದಂತೆ ತೋಟ, ಶಾಲೆ, ಕಟ್ಟಡ, ಮನೆ ಮೇಲ್ಛಾವಣಿ ಆಲಿಕಲ್ಲಿನಿಂದ ಆವೃತಗೊಂಡಿತ್ತು.