ಸಿದ್ದಾಪುರ, ಫೆ. ೧೮: ಮಾಲ್ದಾರೆಯಲ್ಲಿ ಪಶು ವೈದ್ಯಕೀಯ ಆಸ್ಪತ್ರೆಯ ನೂತನ ಕಟ್ಟಡ ಕಾಮಗಾರಿಗೆ ಶಾಸಕ ಕೆ.ಜಿ. ಬೋಪಯ್ಯ ಭೂಮಿ ಪೂಜೆಯನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಬಿರುನಾಣಿ, ಶ್ರೀಮಂಗಲ, ಚೆಂಬು, ಮಾಲ್ದಾರೆ ಸೇರಿದಂತೆ ನಾಲ್ಕು ಗ್ರಾಮಗಳಲ್ಲಿ ತಲಾ ರೂ. ೩೫ ಲಕ್ಷ ವೆಚ್ಚದಲ್ಲಿ ಪಶು ವೈದ್ಯಕೀಯ ಆಸ್ಪತ್ರೆಯ ನಿರ್ಮಾಣದ ಕಾಮಗಾರಿ ಪ್ರಾರಂಭಿಸಲಾಗಿದೆ ಎಂದರು. ಕೃಷಿಕರು ಉಪಕಸಬು ಆಗಿ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಜಾನುವಾರುಗಳಿಗೆ ಅನಾರೋಗ್ಯವಾಗುವ ಸಂದರ್ಭದಲ್ಲಿ ಪಶು ಆಸ್ಪತ್ರೆ ಅವಶ್ಯಕತೆವಿರುವ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಪಶು ಆಸ್ಪತ್ರೆ ನಿರ್ಮಾಣ ಮಾಡಲಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಮಾಲ್ದಾರೆ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಸಮೀರ್, ಗ್ರಾ.ಪಂ. ಸದಸ್ಯರುಗಳಾದ ಕುಂಞ್ಞಣ್ಣ, ಸರಸ್ವತಿ, ಚಂದ್ರ, ಸೋಮಯ್ಯ, ಶೋಭ ಹಾಗೂ ಪಶು ಸಂಗೋಪನೆ ಇಲಾಖೆಯ ಜಿಲ್ಲಾ ಮುಖ್ಯ ಅಧಿಕಾರಿ ಡಾ. ಎ.ಬಿ. ತಮ್ಮಯ್ಯ, ವೀರಾಜಪೇಟೆ ತಾಲೂಕು ಕಾರ್ಯನಿರ್ವಾಹಣಾಧಿಕಾರಿ ಅಪ್ಪಣ್ಣ, ಐಟಿಡಿಪಿ ಇಲಾಖಾಧಿಕಾರಿಗಳಾದ ಗುರುಶಾಂತಪ್ಪ, ನವೀನ್, ಪಿಡಿಓ ರಾಜೇಶ್, ಮಾಲ್ದಾರೆ ವ್ಯಾಪ್ತಿಯ ಬಿಜೆಪಿ ಪಕ್ಷದ ಪದಾಧಿಕಾರಿಗಳಾದ ಅಜ್ಜಿನೀಕಂಡ ರಘು ಕರುಂಬಯ್ಯ, ಜೋಸೆಫ್, ವಿಷ್ಣು ಬೆಳ್ಯಪ್ಪ, ಅಜಿನೀಕಂಡ ಕುಂಞ್ಞಪ್ಪ, ಸೂದನ ಯತೀಶ್, ಬಿ.ಕೆ. ಅನಿಲ್‌ಶೆಟ್ಟಿ, ಶಾಸಕರ ಆಪ್ತ ಕಾರ್ಯದರ್ಶಿ ಮಲ್ಲಂಡ ಮಧು ದೇವಯ್ಯ, ನರಸಿಂಹ ಇನ್ನಿತರರು ಹಾಜರಿದ್ದರು.