ಮಡಿಕೇರಿ, ಫೆ. ೧೮ : ಒಂದು ಕಾಲದಲ್ಲಿ ಭತ್ತದ ಕಣಜ ಎಂದೆ ಕರೆಸಿಕೊಳ್ಳುತ್ತಿದ್ದ ಕೊಡಗು ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಭತ್ತ ಬೆಳೆ ಬೆಳೆಯಲು ರೈತರು ಹಿಂದೇಟು ಹಾಕುತ್ತಿದ್ದಾರೆ. ಅಕಾಲಿಕ ಮಳೆ, ವನ್ಯಜೀವಿ ಉಪಟಳವೇ ಇದಕ್ಕೆ ನೇರ ಕಾರಣವಾಗಿದೆ. ಇದರ ನಡುವೆ ಜಿಲ್ಲೆಯ ೮ ಕಡೆಗಳಲ್ಲಿ ಭತ್ತಖರೀದಿ ಕೇಂದ್ರ ತೆರೆಯಲಾಗಿದ್ದು, ೩ ಕಡೆಗಳಲ್ಲಿ ನೋಂದಣಿ ಕೇಂದ್ರ ಸ್ಥಾಪಿಸಲಾಗಿದೆ. ಈ ವರ್ಷ ಭತ್ತ ಮಾರಾಟಕ್ಕೆ ಉತ್ತಮ ಪ್ರತಿಕ್ರಿಯೆ ಕೂಡ ವ್ಯಕ್ತವಾಗುತ್ತಿದೆ. ಈಗಾಗಲೇ ಜಿಲ್ಲೆಯಲ್ಲಿ ಭತ್ತ ಕಟಾವು ಕಾರ್ಯ ಪೂರ್ಣ ಗೊಂಡಿದ್ದು, ಬೆಳೆದ ಬೆಳೆ ಮಾರಾಟಕ್ಕೆ ರೈತರು ಮುಂದಾಗಿದ್ದಾರೆ. ಅಕಾಲಿಕ ಮಳೆಯಿಂದ ಭತ್ತ ಬೆಳೆ ನಾಶವಾಗಿ ದ್ದರೂ ಕೂಡ ಜಿಲ್ಲೆಯಲ್ಲಿ ೨೩,೭೩೭ ಹೆಕ್ಟೇರ್‌ನಷ್ಟು ಭತ್ತ ಬೆಳೆ ಬೆಳೆಯಲಾಗಿದೆ. ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ನೇರವಾಗಿ ಭತ್ತ ಖರೀದಿಸುವ ಪ್ರಕ್ರಿಯೆ ಇದಾಗಿದ್ದು, ಒಬ್ಬ ರೈತನಿಂದ ಗರಿಷ್ಠ ೭೫ ಕ್ವಿಂಟಾಲ್ ಭತ್ತ ಖರೀದಿಸ ಬಹುದಾಗಿದೆ. ರೈತರು ತಂತ್ರಾAಶದ ಮೂಲಕ ಹೆಸರು ನೋಂದಣಿ ಮಾಡಿಸಿಕೊಂಡು ಭತ್ತ ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದೆ. ಈಗಾಗಲೇ ಕೊಡಗಿನಲ್ಲಿ ಅತೀ ಹೆಚ್ಚು ಬೆಳೆಯುವ ಸಾಮಾನ್ಯ ಭತ್ತಕ್ಕೆ ಕ್ವಿಂಟಾಲ್‌ಗೆ ರೂ. ೧೮೬೮ ನಿಗದಿಪಡಿಸಲಾಗಿದೆ.
೬೨೯ ನೋಂದಣಿ
ಜಿಲ್ಲೆಯಲ್ಲಿ ಒಟ್ಟು ೬೨೯ ರೈತರು ಭತ್ತ ಮಾರಾಟಕ್ಕೆ ನೋಂದಣಿ ಮಾಡಿಸಿ ಕೊಂಡಿದ್ದಾರೆ. ಮಡಿಕೇರಿ ತಾಲೂಕಿನಲ್ಲಿ ೩೫, ಸೋಮವಾರಪೇಟೆ ತಾಲೂಕಿನಲ್ಲಿ ೩೭೦ ಹಾಗೂ ವೀರಾಜಪೇಟೆ ತಾಲೂಕಿನಲ್ಲಿ ೨೨೯ ರೈತರು ಬೆಳೆ ಮಾರಾಟಕ್ಕೆ ಒಲವು ತೋರಿದ್ದಾರೆ. ಈ ಪೈಕಿ ೪೦೦ ರೈತರು ಬೆಳೆದ ಭತ್ತವನ್ನು ಖರೀದಿ ಕೂಡ ಮಾಡಲಾಗಿದೆ.
ಜಿಲ್ಲೆಯ ಮಡಿಕೇರಿ ಎ.ಪಿ.ಎಂ.ಸಿ, ಕುಶಾಲನಗರದ ಕೆ.ಎಸ್.ಕೆ.ಎಂ.ಎಫ್, ಗೋಣಿಕೊಪ್ಪ ಆರ್.ಎಂ.ಸಿ ಯಾರ್ಡ್ನಲ್ಲಿ ನೋಂದಣಿ ಕೇಂದ್ರ ಸ್ಥಾಪಿಸಿದ್ದು, ಗುಡ್ಡೆಹೊಸೂರುವಿನಲ್ಲಿ ೨ ಸೇರಿದಂತೆ ಪೊನ್ನಂಪೇಟೆ, ಗೋಣಿಕೊಪ್ಪ, ಕೊಡ್ಲಿಪೇಟೆ, ಶನಿವಾರಸಂತೆ, ಗೋಣಿಮರೂರು ಹಾಗೂ ಹೆಬ್ಬಾಲೆಯಲ್ಲಿ ತಲಾ ಒಂದು ಖರೀದಿ ಕೇಂದ್ರ ತೆರೆಯಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಕೇಂದ್ರದಲ್ಲಿ ಖರೀದಿ ಹೆಚ್ಚಾಗಿದೆ. ಕಳೆದ ವರ್ಷ ಒಟ್ಟು ೧೬ ಸಾವಿರ ಕ್ವಿಂಟಾಲ್ ಭತ್ತ ಖರೀದಿಸಲಾಗಿತ್ತು. ಈ ವರ್ಷ ಇದುವರೆಗೆ ೧೮,೧೦೦ ಕ್ವಿಂಟಾಲ್ ಭತ್ತ ಖರೀದಿಸಲಾಗಿದೆ. ೨೫ ಸಾವಿರ ಕ್ವಿಂಟಾಲ್ ಭತ್ತ ಖರೀದಿಯ ಗುರಿ ಹೊಂದಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
(ಮೊದಲ ಪುಟದಿಂದ)
ಗುಣಮಟ್ಟ ಪರಿಶೀಲನೆ
ಗುಣಮಟ್ಟ ಪರಿಶೀಲಿಸಿದ ನಂತರ ಖರೀದಿ ಕೇಂದ್ರದಲ್ಲಿ ಭತ್ತ ಖರೀದಿಸಲಾಗುತ್ತದೆ. ಗುಣಮಟ್ಟದ ಪರೀಕ್ಷೆಯನ್ನು ‘ಅಗ್ರಿಕಲ್ಚರ್ ಗ್ರೇರ‍್ಸ್’ ಮೂಲಕ ಡಿಜಿಟಲ್ ಯಂತ್ರ ಬಳಸಿ ಮಾಡಲಾಗುತ್ತದೆ. ಭತ್ತದ ಕೆಲವೊಂದು ವಿಷಯಗಳಿಗೆ ಗರಿಷ್ಠ ಮಿತಿಯನ್ನು ನಿಗದಿಮಾಡಲಾಗಿದೆ. ಭತ್ತದಲ್ಲಿ ಅನ್ಯವಸ್ತುಗಳು, ಸಾವಯವ ಶೇ ೧, ವಿರೂಪಗೊಂಡ ಧಾನ್ಯಗಳು ಶೇ ೫, ಕುಗ್ಗಿದ ಮತ್ತು ಶ್ರವಣಿತ ಧಾನ್ಯಗಳು ಶೇ ೩, ಕೆಳವರ್ಗದ ಮಿಶ್ರಣ ಶೇ ೬, ತೇವಾಂಶ ಶೇ ೧೭ ಇರಬೇಕಾಗಿ ರುತ್ತದೆ.
ವೀರಾಜಪೇಟೆ ತಾಲೂಕಿನಲ್ಲಿ ಹೆಚ್ಚಾಗಿ ಅತಿರಾ ತಳಿಯ ಭತ್ತ ಬೆಳೆಯಲಾಗುತ್ತದೆ. ಆದರೆ, ಗ್ರೇಡ್ ೧ ಮತ್ತು ಸಾಮಾನ್ಯ ತಳಿಯ ಭತ್ತವನ್ನು ಮಾತ್ರ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಅತಿರಾ ಭತ್ತ ಖರೀದಿ ಮಾಡುವಂತೆ ಸರ್ಕಾರಕ್ಕೆ ಒತ್ತಾಯ ಕೂಡ ಮಾಡಲಾಗಿದೆ. ಅದರೆ, ಖರೀದಿ ಮಾಡಿದ ಭತ್ತವನ್ನು ಪಡಿತರಕ್ಕೆ ಬಳಸಲಾಗುವುದರಿಂದ ಅತಿರಾ ತಳಿ ಬಣ್ಣ ಬೇರೆ ಇರುವುದರಿಂದ ಸರ್ಕಾರ ಇದನ್ನು ಬೆಂಬಲ ಬೆಲೆ ಅಡಿಯಲ್ಲಿ ಖರೀದಿಸುತ್ತಿಲ್ಲ.
ಮಾರ್ಚ್ ತನಕ ಸೇವೆ - ನಂತರ ಹಣ
ಡಿಸೆಂಬರ್‌ನಿAದ ಆರಂಭ ಗೊಂಡ ಭತ್ತ ಖರೀದಿ, ನೋಂದಣಿ ಪ್ರಕ್ರಿಯೆ ಮಾರ್ಚ್ ೭ ರ ತನಕ ಸೇವೆ ನೀಡಲಿದೆ. ಪ್ರಕ್ರಿಯೆ ಕಾಲವಧಿ ಮುಗಿದ ಬಳಿಕ ರೈತರ ಖಾತೆಗೆ ಹಣ ಸಂದಾಯವಾಗಲಿದೆ ಎಂದು ರಾಜ್ಯ ಸರಕಾರ ಮಾರಾಟ ಮಂಡಳಿ ಜಿಲ್ಲಾ ವ್ಯವಸ್ಥಾಪಕ ಟಿ.ಪಿ ಹರೀಶ್ ಕುಮಾರ್ ತಿಳಿಸಿದ್ದಾರೆ.
ಕಳೆದ ವರ್ಷ ಪ್ರಕ್ರಿಯೆ ಮುಗಿದು ಮೂರು ತಿಂಗಳ ಬಳಿಕ ಹಣ ರೈತರ ಕೈ ಸೇರಿತ್ತು. ಈ ವರ್ಷ ಸ್ವಲ್ಪ ಬೇಗ ಹಣ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ. ಈ ನಿಟ್ಟಿನಲ್ಲಿ ಸಂಬAಧಪಟ್ಟ ಇಲಾಖೆ ಸರ್ಕಾರಕ್ಕೆ ಪತ್ರ ವ್ಯವಹಾರ ಕೂಡ ಆರಂಭಿಸಲಾಗಿದೆ. ಶೀಘ್ರದಲ್ಲಿ ಹಣ ಬಿಡುಗಡೆಯಾಗಲಿದೆ ಎಂದು ಅಧಿಕಾರಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.