ಕರಿಕೆ, ಫೆ. ೧೮: ಇಡೀ ಜಗತ್ತು ಹಾಗೂ ದೇಶದ ಜನಜೀವನ ಮತ್ತು ಆರ್ಥಿಕ ವ್ಯವಸ್ಥೆಗೆ ಹೊಡೆತ ನೀಡಿ ಆತಂಕ ಸೃಷ್ಟಿಸಿದ್ದ ‘ಕೊರೊನಾ’ ವೈರಸ್ ಕಳೆದ ಕೆಲ ತಿಂಗಳುಗಳಿAದ ಕೊಂಚಮಟ್ಟಿಗೆ ನಿಯಂತ್ರಣ ಬಂದು ಜನರು ನಿಟ್ಟುಸಿರು ಬಿಡುವಂತಾಗಿತ್ತು. ಆದರೆ ಕೆಲ ದಿನಗಳಿಂದ ಕೊಡಗಿನ ಗಡಿ ಗ್ರಾಮಗಳಾದ ಕರಿಕೆ, ಕುಟ್ಟ, ಮಾಕುಟ್ಟಕ್ಕೆ ಹೊಂದಿಕೊAಡಿರುವ ಕೇರಳ ರಾಜ್ಯದಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ಹೆಚ್ಚಾಗಿದ್ದು ಹದಿನೈದು ದಿನಗಳ ಹಿಂದೆ ಕರಿಕೆ ಗ್ರಾಮದಲ್ಲಿ ಮೂವತ್ತು ಪಾಸಿಟಿವ್ ಪ್ರಕರಣ ಪತ್ತೆಯಾಗಿ ಸೋಂಕಿತರನ್ನು ಮಡಿಕೇರಿಯ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು.

ಕರಿಕೆ ಗ್ರಾಮದ ಬಹುಪಾಲು ಮಂದಿ ತಮ್ಮ ದಿನನಿತ್ಯದ ಅಗತ್ಯ ವಸ್ತುಗಳ ಖರೀದಿ, ಇತರ ಕೆಲಸ ಕಾರ್ಯಗಳಿಗೆ ನೆರೆಯ ಕಾಸರಗೋಡು ಜಿಲ್ಲೆಯ ಪನತ್ತಡಿ ಗ್ರಾಮ ಪಂಚಾಯಿತಿಯ ಪಾಣತ್ತೂರಿಗೆ ತೆರಳುತ್ತಾರೆ. ಅಲ್ಲದೇ ಸುಳ್ಯದ ಶಾಲಾ-ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಕರಿಕೆಯಿಂದ ಪಾಣತ್ತೂರು ಮೂಲಕ ಸುಳ್ಯಕ್ಕೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದು, ಇದರಿಂದಾಗಿ ಕೋವಿಡ್ ಭೀತಿ ಎದುರಾಗಿದೆ. ಕಳೆದ ಕೆಲವು ದಿನಗಳಲ್ಲಿ ಪಾಣತ್ತೂರಿನಲ್ಲಿ ನೂರಕ್ಕೂ ಹೆಚ್ಚು ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ಗುರುವಾರ ಒಂದೇ ದಿನ ಹನ್ನೆರಡು ಪಾಸಿಟಿವ್ ಪ್ರಕರಣ ವರದಿಯಾಗಿದೆ.

(ಮೊದಲ ಪುಟದಿಂದ) ಕೊಡಗು ಜಿಲ್ಲಾಧಿಕಾರಿಗಳ ಆದೇಶದನ್ವಯ ಗಡಿ ಭಾಗವಾದ ಚೆಂಬೇರಿಯಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿ ದಿನನಿತ್ಯ ಮಡಿಕೇರಿಯಿಂದ ಬಂದು ತಪಾಸಣೆ ನಡೆಸುತ್ತಿದ್ದಾರೆ. ಆದರೆ ಕರಿಕೆ ಹಾಗೂ ಸುತ್ತಲಿನ ಗ್ರಾಮಸ್ಥರು ಕೇರಳದೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿರುವುದರಿAದ ಕೂಡಲೇ ಜಿಲ್ಲಾಡಳಿತ ದಿನದ ಇಪ್ಪತ್ತನಾಲ್ಕು ಗಂಟೆ ತಪಾಸಣೆ ನಡೆಸಲು ಕಟ್ಟುನಿಟ್ಟಿನ ಆದೇಶ ಹೊರಡಿಸುವುದಲ್ಲದೆ ಸಿಬ್ಬಂದಿಗಳಿಗೆ ಸೂಕ್ತ ವಾಹನ ಹಾಗೂ ವಸತಿ ವ್ಯವಸ್ಥೆಯನ್ನು ಕಲ್ಪಿಸಬೇಕಾಗಿದೆ.

ಗ್ರಾಮದ ಆರೋಗ್ಯ ವಿಸ್ತರಣಾ ಕೇಂದ್ರಕ್ಕೆ ಒಂದು ತುರ್ತು ಚಿಕಿತ್ಸಾ ವಾಹನ ಒದಗಿಸಬೇಕಾಗಿದ್ದು, ಈ ಹಿಂದೆ ಮಂಜೂರಾಗಿದ್ದ ವಾಹನವನ್ನು ಹಿಂಪಡೆಯಲಾಗಿದೆ. ಜಿಲ್ಲೆಗೆ ಪ್ರವಾಸಕ್ಕೆ ಬರುವವರಿಗೆ ಕೋವಿಡ್ ತಪಾಸಣೆ ಗಡಿಯಲ್ಲೇ ನಡೆಸಬೇಕಾಗಿದೆ. ಗ್ರಾಮದಲ್ಲಿ ಕಡುಬಡವರು, ಕೂಲಿ ಕಾರ್ಮಿಕರು ಹೆಚ್ಚಾಗಿ ವಾಸಿಸುವ ಕಾಲೋನಿಗಳಿರುವುದರಿಂದ ಆರೋಗ್ಯ ಇಲಾಖೆ ಜಾಗೃತಿ ಮೂಡಿಸಿ ಮಾಸ್ಕ್, ಸ್ಯಾನಿಟೈಸರ್‌ಗಳನ್ನು ಹಂಚಿಕೆ ಮಾಡಲು ಕಟ್ಟುನಿಟ್ಟಿನ ಕ್ರಮ ವಹಿಸಬೇಕಿದೆ. ಪರಿಸ್ಥಿತಿ ಕೈ ಮೀರುವ ಮುನ್ನ ಎಚ್ಚೆತ್ತುಕೊಂಡು ಸೂಕ್ತ ರೀತಿಯಲ್ಲಿ ಮುಂಜಾಗ್ರತಾ ಕ್ರಮ ವಹಿಸಿದಲ್ಲಿ ಮಾತ್ರ ಮುಂದಾಗುವ ಅನಾಹುತವನ್ನು ತಪ್ಪಿಸಬಹುದಾಗಿದೆ.

ವೈದ್ಯಾಧಿಕಾರಿ ಪ್ರತಿಕ್ರಿಯೆ

ಕೇರಳಕ್ಕೆ ಕರಿಕೆ ಹಾಗೂ ಸುತ್ತಮುತ್ತಲಿನ ಗ್ರಾಮದಿಂದ ಹೋಗಿ ಬರುವವರ ತಪಾಸಣೆ ಗಡಿಯಲ್ಲಿ ಕಡ್ಡಾಯವಾಗಿ ಮಾಡಲು ಕರಿಕೆ ಆರೋಗ್ಯ ವಿಸ್ತರಣಾ ಕೇಂದ್ರದ ವೈದ್ಯರಿಗೆ ಆದೇಶ ಮಾಡಿದ್ದು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಮೇಲುಸ್ತುವಾರಿಯಲ್ಲಿ ಜಿಲ್ಲೆಯ ಮೂರು ಗಡಿ ಗ್ರಾಮಗಳಾದ ಕರಿಕೆ, ಕುಟ್ಟ, ಮಾಕುಟ್ಟ ಗಡಿಗಳಲ್ಲಿ ಸಿಬ್ಬಂದಿ ಕರ್ತವ್ಯ ನಿರ್ವಹಿಸಲಿದ್ದಾರೆ. ಕೇರಳದಿಂದ ಜಿಲ್ಲೆಗೆ ಪ್ರವಾಸಕ್ಕೆ ಬರುವವರಿಗೆ ಎಪ್ಪತ್ತೆರಡು ಗಂಟೆಗಳ ಒಳಗಾಗಿ ಕೋವಿಡ್ ನೆಗೆಟಿವ್ ಪ್ರಮಾಣ ಪತ್ರ ಕಡ್ಡಾಯವಾಗಿದ್ದು, ಫೆಬ್ರವರಿ ೨ ರಿಂದ ಬಂದ ವಿದ್ಯಾರ್ಥಿಗಳ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಮಡಿಕೇರಿ ತಾಲೂಕು ವೈದ್ಯಾಧಿಕಾರಿ ಡಾ. ಮಂಜುನಾಥ್ ತಿಳಿಸಿದ್ದಾರೆ.