ಮಡಿಕೇರಿ, ಫೆ. ೧೯: ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ನೆರವಿನೊಂದಿಗೆ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ವತಿಯಿಂದ ಸಾರ್ವಜನಿಕ ಶಿಕ್ಷಣ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಮಡಿಕೇರಿ ನಗರದ ರೋಟರಿ ಮಿಸ್ಟಿ ಹಿಲ್ಸ್ ಸಂಯುಕ್ತ ಆಶ್ರಯದಲ್ಲಿ ತಾ. ೨೦ ರಂದು (ಇಂದು) ಮಡಿಕೇರಿ ನಗರದ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿನ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಭವನದ ಮಹಡಿ ಸಭಾಂಗಣದಲ್ಲಿ ಬೆಳಿಗ್ಗೆ ೧೦ ಗಂಟೆಗೆ ಕೊಡಗು ಜಿಲ್ಲಾಮಟ್ಟದ ಯುವ ವಿಜ್ಞಾನಿ ಸ್ಪರ್ಧಾ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ತಾವು ವಿಜ್ಞಾನ ಸ್ಪರ್ಧೆಗಳಲ್ಲಿ ಕಳೆದ ೩ ವರ್ಷಗಳಲ್ಲಿ ಗಳಿಸಿರುವ ಸಾಧನೆಯನ್ನು ಪರಿಗಣಿಸುವುದರೊಂದಿಗೆ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಉತ್ತಮವಾಗಿ ವೈಜ್ಞಾನಿಕ ಪ್ರಬಂಧ ಮಂಡಿಸುವವರನ್ನು ಯುವ ವಿಜ್ಞಾನಿಗಳನ್ನಾಗಿ ಆಯ್ಕೆ ಮಾಡಲಾಗುವುದು ಎಂದು ಸ್ಪರ್ಧಾ ಕಾರ್ಯಕ್ರಮದ ಜಿಲ್ಲಾ ಸಂಯೋಜಕ ಜಿ.ಶ್ರೀಹರ್ಷ ತಿಳಿಸಿದ್ದಾರೆ.

ಜಿಲ್ಲಾಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದವರಿಗೆ ರೂ. ೫ ಸಾವಿರ, ದ್ವಿತೀಯ ಸ್ಥಾನ ಪಡೆದವರಿಗೆ ರೂ.೩ ಸಾವಿರ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು. ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಯುವ ವಿಜ್ಞಾನಿಗೆ ನಂತರ ನಡೆಯಲಿರುವ ರಾಜ್ಯಮಟ್ಟದ ಯುವ ವಿಜ್ಞಾನಿ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ಲಭಿಸಲಿದೆ.