ಮಡಿಕೇರಿ, ಫೆ. ೧೯: ಬೆಂಗಳೂರಿನ ಜಾಗೃತಿ ಸಂಸ್ಥೆ ಹಾಗೂ ಸಿಸ್ಕೋ ಸಂಸ್ಥೆ ವತಿಯಿಂದ ಸೂರ್ಲಬ್ಬಿ ಸರ್ಕಾರಿ ಪ್ರೌಢಶಾಲೆ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕೋವಿಡ್-೧೯ ರ ಹಿನ್ನೆಲೆ ಸ್ಯಾನಿಟೈಸರ್ ಅನ್ನು ಕೊಡುಗೆಯಾಗಿ ನೀಡುವುದರೊಂದಿಗೆ ಮಾಸ್ಕ್ಗಳನ್ನು ವಿತರಿಸಲಾಯಿತು.

ಸಂಸ್ಥೆಯ ಪರವಾಗಿ ವಿದ್ಯಾರ್ಥಿಗಳಿಗೆ ಸ್ಯಾನಿಟೈಸರ್ ವಿತರಿಸಿ ಮಾತನಾಡಿದ ಜಾಗೃತಿ ಸಂಸ್ಥೆಯ ಆಡಳಿತಾಧಿಕಾರಿ ಆರ್. ಕಣ್ಣನ್, ಕೋವಿಡ್-೧೯ ರ ಹಿನ್ನೆಲೆ ಮಕ್ಕಳಿಗೆ ವಿದ್ಯಾಗಮ ನಿರಂತರ ಕಲಿಕಾ ಕಾರ್ಯಕ್ರಮದ ನಂತರ ಇದೀಗ ಜನವರಿಯಿಂದ ಶಾಲೆಯಲ್ಲಿ ತರಗತಿಗಳು ನಡೆಯುತ್ತಿರುವುದರಿಂದ ಮಕ್ಕಳ ಕಲಿಕೆ ಉತ್ತಮವಾಗಿದೆ ಎಂದರು. ಸೂರ್ಲಬ್ಬಿ ಶಾಲೆಗೆ ಮಕ್ಕಳು ದೂರದ ಊರುಗಳಿಂದ ಸಾರಿಗೆ ಸೌಲಭ್ಯವಿಲ್ಲದೆ ದಿನಂಪ್ರತಿ ೫-೬ ಕಿ.ಮೀ. ನಡೆದುಕೊಂಡು ಬರುತ್ತಿರುವ ವಿದ್ಯಾರ್ಥಿಗಳು ದೃಢಕಾಯ ಆರೋಗ್ಯ ಹೊಂದಿದ್ದಾರೆ ಎಂದರು.

ಪ್ರೌಢಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ಟಿ.ಜಿ. ಪ್ರೇಮಕುಮಾರ್ ಮಾತನಾಡಿ, ಕೊಡಗಿನಲ್ಲಿ ಹೆಚ್ಚು ಮಳೆಯ ಕಾರಣ ಸಂಭವಿಸಿದ ಭೂಕುಸಿತ ಮತ್ತು ಜಲಪ್ರಳಯದ ಬಳಿಕ ಜಾಗೃತಿ ಸಂಸ್ಥೆ ಹಾಗೂ ಸಿಸ್ಕೋ ಸಂಖ್ಯೆ ವತಿಯಿಂದ ಜಿಲ್ಲೆಯ ವಿವಿಧ ಶಾಲೆಗಳ ಮಕ್ಕಳ ಶಿಕ್ಷಣ ಮತ್ತು ಕ್ರೀಡಾ ಚಟುವಟಿಕೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಸಿಸ್ಕೋ ಸಂಸ್ಥೆಯ ವ್ಯವಸ್ಥಾಪಕ ಸಂಪತ್ ಮಾಸ್ಕ್ಗಳನ್ನು ವಿತರಿಸಿದರು. ಸಂಸ್ಥೆಯ ಪ್ರಮುಖರಾದ ಶರತ್, ಶರಣ್, ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಸುಂದರಿ, ಶಿಕ್ಷಕರು ಇದ್ದರು. ಶಿಕ್ಷಕ ಕಾರ್ಗಲ್ ಡಿ. ರಜಿತ ನಿರ್ವಹಿಸಿದರು. ಸಿಸ್ಕೋ ಸಂಸ್ಥೆಯ ವ್ಯವಸ್ಥಾಪಕ ಸಂಪತ್, ಪ್ರಭಾರ ಮುಖ್ಯ ಶಿಕ್ಷಕ ಟಿ.ಜಿ. ಪ್ರೇಮಕುಮಾರ್, ಶಿಕ್ಷಕರು ಇದ್ದರು.