ಮಡಿಕೇರಿ, ಫೆ. ೧೬: ಹಿಂದುಳಿದ ಶಾಶ್ವತ ಆಯೋಗ ವರದಿ ಅನುಷ್ಠಾನಕ್ಕೆ ಒತ್ತಾಯಿಸಿ ತಾ.೧೮ ರಂದು ಅಲ್ಪಸಂಖ್ಯಾತ, ಹಿಂದುಳಿದ ವರ್ಗ, ದಲಿತ (ಅಹಿಂದ) ಒಕ್ಕೂಟದ ವತಿಯಿಂದ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಒಕ್ಕೂಟದ ಸ್ಥಾಪಕಾಧ್ಯಕ್ಷ ಟಿ.ಪಿ. ರಮೇಶ್ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೆಅಹಿಂದ ಸಂಘಟನೆ ತನ್ನ ಕಾರ್ಯಚಟುವಟಿಕೆ ಮರು ಆರಂಭಿಸಿದೆ. ಇದರ ಮೊದಲ ಹಂತವಾಗಿ ಶಾಶ್ವತ ಆಯೋಗ ವರದಿ ಅನುಷ್ಠಾನಕ್ಕೆ ಒತ್ತಾಯಿಸಿ ಪ್ರತಿಭಟನೆ ನಡೆಸಲಾಗುತ್ತದೆ. ವರದಿ ಆಧಾರದಲ್ಲಿ ಜನಗಣತಿ ಕೂಡ ನಡೆಸಿದ್ದು ಇದರ ವರದಿಯನ್ನು ಸರ್ಕಾರ ಸ್ವೀಕರಿಸಬೇಕು.
ಗಣತಿಯಿಂದ ೧೩೫೧ ಜಾತಿಯನ್ನು ಗುರುತಿಸಲಾಗಿದೆ. ಹೊಸ ೪೬೪ ಹಿಂದುಳಿದ ಜಾತಿ ಬೆಳಕಿಗೆ ಬಂದಿದೆ ಎಂದು Ã ಹೇಳಲಾಗುತ್ತಿದೆ. ವರದಿ ಅನುಷ್ಠಾನದಿಂದ ಮೀಸಲಾತಿ ದೊರಕುತ್ತದೆ. ಈ ಮೂಲಕ ಹಿಂದುಳಿದ ಜನಾಂಗದವರಿಗೆ ಪ್ರಯೋಜನವಾಗಲಿದೆ ಎಂದರು.
ಇದರೊಂದಿಗೆ ಪೆಟ್ರೋಲ್ ಡಿಸೇಲ್ ಬೆಲೆ ಇಳಿಕೆ, ಅಕಾಲಿಕ ಮಳೆಯಿಂದ ಬೆಳೆ ಕಳೆದುಕೊಂಡ ರೈತರಿಗೆ ತ್ವರಿತ ಪರಿಹಾರ ಹಾಗೂ ಮೂರು ವಿವಾದಾತ್ಮಕ ಕೃಷಿ ಕಾಯ್ದೆ ರದ್ದತಿಗೆ ಒತ್ತಾಯಿಸಲಾಗುತ್ತದೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಒಕ್ಕೂಟದ ಅಧ್ಯಕ್ಷ ಟಿ.ಎಂ ಮುದ್ದಯ್ಯ, ಕಾರ್ಯಾಧ್ಯಕ್ಷ ಬೇಬಿ ಮ್ಯಾಥ್ಯು, ಕಾರ್ಯದರ್ಶಿ ಮುನೀರ್ ಅಹಮ್ಮದ್, ನಿರ್ದೇಶಕ ಚಂದ್ರಶೇಖರ್ ಇದ್ದರು.