ಮಡಿಕೇರಿ, ಫೆ. ೧೩: ಕೇಂದ್ರ ಸರ್ಕಾರದ ಮಹತ್ವಾ ಕಾಂಕ್ಷಿ ಜಲ್ ಜೀವನ್ ಮಿಷನ್ ಯೋಜನೆಯಡಿ ಗ್ರಾಮೀಣ ಪ್ರದೇಶದ ಮನೆಗಳಿಗೆ ಅಗತ್ಯವಾಗಿರುವ ಕುಡಿಯುವ ನೀರಿನ ಸಂಪರ್ಕವನ್ನು ಒದಗಿಸಲು ಕ್ರಿಯಾಯೋಜನೆ ತಯಾರಾಗಿದೆ ಎಂದು ಕೊಡಗು - ಮೈಸೂರು ಸಂಸದ ಪ್ರತಾಪ್ ಸಿಂಹ ‘ಶಕ್ತಿ’ಗೆ ತಿಳಿಸಿದ್ದಾರೆ. ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಶ್ರೀಯುತರು ಜಿಲ್ಲೆಯ ಮೂರೂ ತಾಲೂಕುಗಳನ್ನು ಈ ಯೋಜನೆಗೆ ಒಳಪಡಿಸಿದ್ದು, ಕೇಂದ್ರ - ರಾಜ್ಯ ಹಾಗೂ ಇತರ ಆರ್ಥಿಕ ಮೂಲಗಳನ್ನು ಬಳಸಿ ಜನತೆಗೆ ಕುಡಿಯುವ ನೀರಿಗಾಗಿ ನಲ್ಲಿ ಸಂಪರ್ಕ ಒದಗಿಸಲಾಗುವುದೆಂದು ವಿವರಿಸಿದ್ದಾರೆ.

ಜಲ್ ಜೀವನ್ ಮಿಷನ್ ಯೋಜನೆ ಕೇಂದ್ರ ಪುರಸ್ಕೃತ ಯೋಜನೆಯಾಗಿದ್ದು, ೨೦೨೪ರ ಇಸವಿಯೊಳಗೆ ಗ್ರಾಮೀಣ ಪ್ರದೇಶದ ಎಲ್ಲಾ ಜನವಸತಿಯಲ್ಲಿನ ಮನೆಗಳಿಗೆ ನಲ್ಲಿ ನೀರು ಸಂಪರ್ಕ ಕಲ್ಪಿಸಲು ಉದ್ದೇಶಿಸಲಾಗಿದೆ.

ಕೊಡಗು ಜಿಲ್ಲೆಯಲ್ಲಿ ಒಟ್ಟು ೫೯೭ ಜನವಸತಿಗಳಿದ್ದು ಒಟ್ಟು ೧,೩೨,೭೫೨ ಮನೆಗಳಿರುತ್ತವೆ. ಇದರಲ್ಲಿ ಮಾರ್ಚ್-೨೦೨೦ರ ಅಂತ್ಯಕ್ಕೆ ಒಟ್ಟು ೪೦,೮೦೧ ಗ್ರಾಮೀಣ ಮನೆಗಳು ನಲ್ಲಿ ನೀರು ಸಂಪರ್ಕ ಹೊಂದಿದ್ದು, ಉಳಿದ ೯೧,೯೫೧ ಮನೆಗಳಿಗೆ ಹೊಸದಾಗಿ ನಲ್ಲಿ ನೀರು ಸಂಪರ್ಕವನ್ನು ಒದಗಿಸ ಲಾಗುತ್ತದೆ.

೨೦೨೦-೨೧ನೇ ಸಾಲಿಗೆ ಜಲ ಜೀವನ್ ಮಿಷನ್ ಯೋಜನೆಯಡಿ ಯಲ್ಲಿ ಒಟ್ಟು ೧೯೧ ಗ್ರಾಮೀಣ ಜನವಸತಿಗಳಿಗೆ ನಲ್ಲಿ ನೀರು ಸಂಪರ್ಕ ಒದಗಿಸಲು ಒಟ್ಟು ರೂ.೧೧,೦೯೯.೯೧ ಲಕ್ಷಗಳಿಗೆ ಕ್ರಿಯಾಯೋಜನೆ ಅನುಮೋದನೆಗೊಂಡಿದೆ.

ಪ್ರಸಕ್ತ ಸಾಲಿನಲ್ಲಿ ಒಟ್ಟು ೨೮,೭೪೬ ಮನೆಗಳಿಗೆ ಹೊಸದಾಗಿ ನಲ್ಲಿ ನೀರು ಸಂಪರ್ಕ ಒದಗಿಸಲು ಹಾಗೂ ಹಾಲಿ ಇರುವ ಒಟ್ಟು ೨೫,೪೭೦ ಸಂಪರ್ಕ ಗಳಿಗೆ ನೀರಿನ ಮೀಟರ್ ಅಳವಡಿಸಲು ಗುರಿ ಹೊಂದಲಾಗಿದೆ. (ಮೊದಲ ಪುಟದಿಂದ) ಪ್ರಸಕ್ತ ಸಾಲಿಗೆ ಕೇಂದ್ರ ಅನುದಾನ ರೂ.೪೮೯೮.೫೫ ಲಕ್ಷಗಳು, ರಾಜ್ಯ ಅನುದಾನ ರೂ.೪೮೯೮.೫೫ ಲಕ್ಷಗಳು, ಸಮುದಾಯ ವಂತಿಕೆ ಅನುದಾನ ರೂ.೪೮೬.೭೪ ಲಕ್ಷಗಳು ಹಾಗೂ ಗ್ರಾಮ ಪಂಚಾಯಿತಿಯ ೧೫ನೇ ಹಣಕಾಸು ಅನುದಾನ ರೂ.೮೧೬.೦೬ ಲಕ್ಷಗಳನ್ನು ಹೊಂದಿರುತ್ತದೆ. ಉಳಿದ ಮನೆಗಳಿಗೆ ಮುಂದಿನ ಆರ್ಥಿಕ ವರ್ಷಗಳಲ್ಲಿ ನಲ್ಲಿ ನೀರು ಸಂಪರ್ಕ ಒದಗಿಸಲು ಗುರಿ ಹೊಂದಲಾಗಿದೆ. ತಾಲೂಕುವಾರು ವಿವರಗಳು

ಮಡಿಕೇರಿ ತಾಲೂಕಿನಲ್ಲಿ ೨೦೨೧-೨೨ನೇ ಸಾಲಿಗೆ ಒಟ್ಟು ೩೫ ಗ್ರಾಮೀಣ ಜನವಸತಿಗಳಿಗೆ ನಲ್ಲಿ ನೀರು ಸಂಪರ್ಕ ಒದಗಿಸಲು ಒಟ್ಟು ರೂ.೩೦೩೨.೪೫ ಲಕ್ಷಗಳಿಗೆ ಕ್ರಿಯಾಯೋಜನೆ ಅನುಮೋದನೆಗೊಂಡಿದೆ.

ಪ್ರಸಕ್ತ ಸಾಲಿನಲ್ಲಿ ಒಟ್ಟು ೯೩೬೩ ಮನೆಗಳಿಗೆ ಹೊಸದಾಗಿ ನೀರು ಸಂಪರ್ಕ ಒದಗಿಸಲು ಹಾಗೂ ಹಾಲಿ ಇರುವ ಒಟ್ಟು ೪೪೦೪ ಹೌಸ್ ಟ್ಯಾಪ್ ಸಂಪರ್ಕಗಳಿಗೆ ನೀರಿನ ಮೀಟರ್ ಅಳವಡಿಸಲು ಗುರಿ ಹೊಂದಲಾಗಿದೆ. ಪ್ರಸಕ್ತ ಸಾಲಿಗೆ ಕೇಂದ್ರ ಅನುದಾನ ರೂ.೧೩೩೯.೨೨ ಲಕ್ಷಗಳು, ರಾಜ್ಯ ಅನುದಾನ ರೂ.೧೩೩೯.೨೨ ಲಕ್ಷಗಳು, ಸಮುದಾಯ ವಂತಿಕೆ ಅನುದಾನ ರೂ.೧೩೪.೮೮ ಲಕ್ಷಗಳು ಹಾಗೂ ಗ್ರಾಮ ಪಂಚಾಯಿತಿಯ ೧೫ನೇ ಹಣಕಾಸು ಅನುದಾನ ರೂ. ೨೧೯.೧೩ ಲಕ್ಷಗಳನ್ನು ಹೊಂದಿರುತ್ತದೆ.

ಸೋಮವಾರಪೇಟೆ ತಾಲೂಕಿನಲ್ಲಿ ೨೦೨೦-೨೧ನೇ ಸಾಲಿಗೆ ಒಟ್ಟು ೧೨೫ ಗ್ರಾಮೀಣ ಜನವಸತಿಗಳಿಗೆ ನಲ್ಲಿ ನೀರು ಸಂಪರ್ಕ ಒದಗಿಸಲು ಒಟ್ಟು ರೂ.೫೪೮೪.೭೯ ಲಕ್ಷಗಳಿಗೆ ಕ್ರಿಯಾಯೋಜನೆ ಅನುಮೋದನೆಗೊಂಡಿರುತ್ತದೆ.

ಪ್ರಸಕ್ತ ಸಾಲಿನಲ್ಲಿ ಒಟ್ಟು ೧೧,೬೭೦ ಮನೆಗಳಿಗೆ ಹೊಸದಾಗಿ ನೀರು ಸಂಪರ್ಕ ಒದಗಿಸಲು ಹಾಗೂ ಹಾಲಿ ಇರುವ ಒಟ್ಟು ೧೭೧೮೭ ಹೌಸ್ ಟ್ಯಾಪ್ ಸಂಪರ್ಕಗಳಿಗೆ ನೀರಿನ ಮೀಟರ್ ಅಳವಡಿಸಲು ಗುರಿ ಹೊಂದಲಾಗಿದೆ. ಪ್ರಸಕ್ತ ಸಾಲಿಗೆ ಕೇಂದ್ರ ಅನುದಾನ ರೂ.೨೪೨೩.೯೯ ಲಕ್ಷಗಳು, ರಾಜ್ಯ ಅನುದಾನ ರೂ.೨೪೨೩.೯೯ ಲಕ್ಷಗಳು, ಸಮುದಾಯ ವಂತಿಕೆ ಅನುದಾನ ರೂ. ೨೩೭.೭೩ ಲಕ್ಷಗಳು ಹಾಗೂ ಗ್ರಾಮ ಪಂಚಾಯಿತಿಯ ೧೫ನೇ ಹಣಕಾಸು ಅನುದಾನ ರೂ.೩೯೯.೦೭ ಲಕ್ಷಗಳನ್ನು ಹೊಂದಿದೆ.

ವೀರಾಜಪೇಟೆ ತಾಲೂಕಿನಲ್ಲಿ ೨೦೨೦-೨೧ನೇ ಸಾಲಿಗೆ ಒಟ್ಟು ೩೧ ಗ್ರಾಮೀಣ ಜನವಸತಿಗಳಿಗೆ ನೀರು ಸಂಪರ್ಕ ಒದಗಿಸಲು ಒಟ್ಟು ರೂ. ೨೫೮೨.೬೭ ಲಕ್ಷಗಳಿಗೆ ಕ್ರಿಯಾಯೋಜನೆ ಅನುಮೋದನೆಗೊಂಡಿದೆ. ಪ್ರಸಕ್ತ ಸಾಲಿನಲ್ಲಿ ಒಟ್ಟು ೭೭೧೩ ಮನೆಗಳಿಗೆ ಹೊಸದಾಗಿ ನೀರು ಸಂಪರ್ಕ ಒದಗಿಸಲು ಹಾಗೂ ಹಾಲಿ ಇರುವ ಒಟ್ಟು ೩೮೭೯ ಹೌಸ್ ಟ್ಯಾಪ್ ಸಂಪರ್ಕಗಳಿಗೆ ನೀರಿನ ಮೀಟರ್ ಅಳವಡಿಸಲು ಗುರಿ ಹೊಂದಲಾಗಿದೆ.

ಪ್ರಸಕ್ತ ಸಾಲಿಗೆ ಕೇಂದ್ರ ಅನುದಾನ ರೂ. ೧೧೩೫.೩೪ ಲಕ್ಷಗಳು, ರಾಜ್ಯ ಅನುದಾನ ರೂ. ೧೧೩೫.೩೪ ಲಕ್ಷಗಳು, ಸಮುದಾಯ ವಂತಿಕೆ ಅನುದಾನ ರೂ.೧೧೪.೧೩ ಲಕ್ಷಗಳು ಹಾಗೂ ಗ್ರಾಮ ಪಂಚಾಯಿತಿಯ ೧೫ನೇ ಹಣಕಾಸು ಅನುದಾನ ರೂ. ೧೯೭.೮೬ ಲಕ್ಷಗಳನ್ನು ಹೊಂದಿರುತ್ತದೆ.