ಮಡಿಕೇರಿ, ಫೆ. ೧೩: ಕೇಂದ್ರ ಸರ್ಕಾರದ ಮಹತ್ವಾ ಕಾಂಕ್ಷಿ ಜಲ್ ಜೀವನ್ ಮಿಷನ್ ಯೋಜನೆಯಡಿ ಗ್ರಾಮೀಣ ಪ್ರದೇಶದ ಮನೆಗಳಿಗೆ ಅಗತ್ಯವಾಗಿರುವ ಕುಡಿಯುವ ನೀರಿನ ಸಂಪರ್ಕವನ್ನು ಒದಗಿಸಲು ಕ್ರಿಯಾಯೋಜನೆ ತಯಾರಾಗಿದೆ ಎಂದು ಕೊಡಗು - ಮೈಸೂರು ಸಂಸದ ಪ್ರತಾಪ್ ಸಿಂಹ ‘ಶಕ್ತಿ’ಗೆ ತಿಳಿಸಿದ್ದಾರೆ. ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಶ್ರೀಯುತರು ಜಿಲ್ಲೆಯ ಮೂರೂ ತಾಲೂಕುಗಳನ್ನು ಈ ಯೋಜನೆಗೆ ಒಳಪಡಿಸಿದ್ದು, ಕೇಂದ್ರ - ರಾಜ್ಯ ಹಾಗೂ ಇತರ ಆರ್ಥಿಕ ಮೂಲಗಳನ್ನು ಬಳಸಿ ಜನತೆಗೆ ಕುಡಿಯುವ ನೀರಿಗಾಗಿ ನಲ್ಲಿ ಸಂಪರ್ಕ ಒದಗಿಸಲಾಗುವುದೆಂದು ವಿವರಿಸಿದ್ದಾರೆ.

ಜಲ್ ಜೀವನ್ ಮಿಷನ್ ಯೋಜನೆ ಕೇಂದ್ರ ಪುರಸ್ಕೃತ ಯೋಜನೆಯಾಗಿದ್ದು, ೨೦೨೪ರ ಇಸವಿಯೊಳಗೆ ಗ್ರಾಮೀಣ ಪ್ರದೇಶದ ಎಲ್ಲಾ ಜನವಸತಿಯಲ್ಲಿನ ಮನೆಗಳಿಗೆ ನಲ್ಲಿ ನೀರು ಸಂಪರ್ಕ ಕಲ್ಪಿಸಲು ಉದ್ದೇಶಿಸಲಾಗಿದೆ.

ಕೊಡಗು ಜಿಲ್ಲೆಯಲ್ಲಿ ಒಟ್ಟು ೫೯೭ ಜನವಸತಿಗಳಿದ್ದು ಒಟ್ಟು ೧,೩೨,೭೫೨ ಮನೆಗಳಿರುತ್ತವೆ. ಇದರಲ್ಲಿ ಮಾರ್ಚ್-೨೦೨೦ರ ಅಂತ್ಯಕ್ಕೆ ಒಟ್ಟು ೪೦,೮೦೧ ಗ್ರಾಮೀಣ ಮನೆಗಳು ನಲ್ಲಿ ನೀರು ಸಂಪರ್ಕ ಹೊಂದಿದ್ದು, ಉಳಿದ ೯೧,೯೫೧ ಮನೆಗಳಿಗೆ ಹೊಸದಾಗಿ ನಲ್ಲಿ ನೀರು ಸಂಪರ್ಕವನ್ನು ಒದಗಿಸ ಲಾಗುತ್ತದೆ.

೨೦೨೦-೨೧ನೇ ಸಾಲಿಗೆ ಜಲ ಜೀವನ್ ಮಿಷನ್ ಯೋಜನೆಯಡಿ ಯಲ್ಲಿ ಒಟ್ಟು ೧೯೧ ಗ್ರಾಮೀಣ ಜನವಸತಿಗಳಿಗೆ ನಲ್ಲಿ ನೀರು ಸಂಪರ್ಕ ಒದಗಿಸಲು ಒಟ್ಟು ರೂ.೧೧,೦೯೯.೯೧ ಲಕ್ಷಗಳಿಗೆ ಕ್ರಿಯಾಯೋಜನೆ ಅನುಮೋದನೆಗೊಂಡಿದೆ.

ಪ್ರಸಕ್ತ ಸಾಲಿನಲ್ಲಿ ಒಟ್ಟು ೨೮,೭೪೬ ಮನೆಗಳಿಗೆ ಹೊಸದಾಗಿ ನಲ್ಲಿ ನೀರು ಸಂಪರ್ಕ ಒದಗಿಸಲು ಹಾಗೂ ಹಾಲಿ ಇರುವ ಒಟ್ಟು ೨೫,೪೭೦ ಸಂಪರ್ಕ ಗಳಿಗೆ ನೀರಿನ ಮೀಟರ್ ಅಳವಡಿಸಲು ಗುರಿ ಹೊಂದಲಾಗಿದೆ.