ವೀರಾಜಪೇಟೆ, ಫೆ. ೧೧: ವೀರಾಜಪೇಟೆ ಸಮೀಪದ ಕೆದಮುಳ್ಳೂರು ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಸದಸ್ಯೆ ಎನ್. ಶೀಲ ಮೇದಪ್ಪ ಅವರು ಅಧ್ಯಕ್ಷೆಯಾಗಿ ಹಾಗೂ ಉಪಾಧ್ಯಕ್ಷರಾಗಿ ಮೀನಾಕ್ಷಿ ಆಯ್ಕೆ ಯಾಗಿದ್ದಾರೆ.
ಕೆದಮುಳ್ಳೂರು ಗ್ರಾಮ ಪಂಚಾಯಿತಿಯ ಸಭಾಂಗಣದಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆಯಿತು. ಕೆದಮು ಳ್ಳೂರು ಗ್ರಾಮ ಪಂಚಾಯಿತಿಗೆ ನಡೆದ ಚುನಾವಣೆಯಲ್ಲಿ ಒಟ್ಟು ೧೩ ಸ್ಥಾನಗಳ ಪೈಕಿ ೭ ಮಂದಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಆಯ್ಕೆಗೊಂಡಿದ್ದರು. ಇದರಿಂದ ಇದೇ ಮೊದಲ ಬಾರಿಗೆ ಕೆದಮುಳ್ಳೂರು ಗ್ರಾಮ ಪಂಚಾಯಿತಿಯ ಅಧಿಕಾರವು ಬಿಜೆಪಿಯ ಪಾಲಾಗಿದೆ. ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯ ಸಂದರ್ಭ ವೀರಾಜಪೇಟೆ ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿ ಎ.ಎಂ. ಶ್ರೀಧರ್ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು.
ಇದೇ ಸಂದರ್ಭದಲ್ಲಿ ಪಂಚಾಯಿತಿಯ ನೂತನ ಅಧ್ಯಕ್ಷೆ ಎನ್. ಶೀಲ ಮೇದಪ್ಪ ಮಾತನಾಡಿ, ಸರಕಾರದಿಂದ ಬರುವ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ಗ್ರಾಮದ ಅಭಿವೃದ್ಧಿಗೆ ಶ್ರಮಿಸುವುದಾಗಿ ಹೇಳಿದರು. ಉಪಾಧ್ಯಕ್ಷೆ ಮೀನಾಕ್ಷಿ ಅವರು ಮಾತನಾಡಿ, ಸರಕಾರದ ಅನುದಾನವನ್ನು ಗ್ರಾಮದ ಎಲ್ಲಾ ಭಾಗಕ್ಕೂ ಸಮಾನವಾಗಿ ಹಂಚಿ ಅಭಿವೃದ್ಧಿಗೊಳಿಸಲಾಗುವುದು ಎಂದರು.
ಈ ಸಂದರ್ಭ ಜಿಲ್ಲಾ ಪಂಚಾಯಿತಿ ಸದಸ್ಯ ಮಹೇಶ್ ಗಣಪತಿ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ಕಿರಣ್, ರಮೇಶ್ ಪೊನ್ನಣ್ಣ, ಸೇರಿದಂತೆ ಗ್ರಾಮ ಪಂಚಾಯಿತಿಯ ನೂತನ ಸದಸ್ಯರು ಹಾಗೂ ಮತ್ತಿತರರು ಇದ್ದರು.