ಗೋಣಿಕೊಪ್ಪಲು, ಫೆ. ೯: ಗೋಣಿಕೊಪ್ಪಲು ಸಮೀಪದ ಅರ್ವತೋಕ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಟ್ಟು ದೇವಕಾಲೋನಿ ಹಾಡಿಯಲ್ಲಿ ಭೂಮಿ ಮತ್ತು ವಸತಿಗಾಗಿ ನಡೆಯುತ್ತಿರುವ ಹೋರಾಟ ೩ ವರ್ಷ ಪೂರೈಸಿದ ಹಿನ್ನೆಲೆ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಆಶ್ರಯದಲ್ಲಿ ಹೋರಾಟದ ಭಾಗವಾಗಿ ೩ನೇ ವರ್ಷದ ಗಣರಾಜ್ಯೋತ್ವವನ್ನು ಆಚರಿಸಲಾಯಿತು. ಹಳ್ಳಿಗಟ್ಟು ಹಾಡಿಯ ತಾಯಮ್ಮ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಗಿಡಕ್ಕೆ ನೀರು ಹರಿಸುವ ಮೂಲಕ ಚಾಲನೆ ನೀಡಲಾಯಿತು.

ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳು: ಅರ್ವತೋಕ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಟ್ಟು ದೇವಕಾಲೋನಿಯ ೬೦ ಗಿರಿಜನ ಕುಟುಂಬಗಳಿಗೆ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಕೂಡಲೇ ಒದಗಿಸಬೇಕು. ಸದರಿ ಜಾಗದಲ್ಲಿ ಕಸವಿಲೇವಾರಿ ಘಟಕ ಸ್ಥಾಪಿಸುವ ಗ್ರಾಮ ಪಂಚಾಯಿತಿಯ ತೀರ್ಮಾನವನ್ನೂ ಕೂಡಲೇ ಕೈಬಿಡಬೇಕು. ಕಸವಿಲೇವಾರಿ ಆದೇಶವನ್ನು ಜಿಲ್ಲಾಧಿಕಾರಿಯವರು ಕೂಡಲೇ ಹಿಂಪಡೆಯಬೇಕು. ತಾ. ೫ ರಂದು ವೀರಾಜಪೇಟೆ ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ದೇವಕಾಲೋನಿಯ ಪ್ರದೇಶ ವಾಸಕ್ಕೆ ಯೋಗ್ಯವಲ್ಲ ಎಂದು ತಾಲೂಕು ಕಾರ್ಯನಿರ್ವಹಣಾಧಿಕಾರಿ ಸಭೆಗೆ ತಿಳಿಸಿರುವುದು ಖಂಡನೀಯ. ಕೂಡಲೇ ಯೋಗ್ಯವಲ್ಲ ಎಂಬ ಪದವನ್ನು ಕಡತದಿಂದ ತೆಗೆದು ಹಾಕಬೇಕು ಹಾಗೂ ಹಕ್ಕು ಪತ್ರವನ್ನು ಕೂಡಲೇ ದೇವಕಾಲೋನಿಯ ಗಿರಿಜನ ಜನರಿಗೆ ಹಂಚಬೇಕು. ೬೦ ಕುಟುಂಬಕ್ಕೆ ಮನೆ ನಿರ್ಮಾಣಕ್ಕಾಗಿ ತಲಾ ರೂ. ೩.೫೦ ಲಕ್ಷ ಐ.ಟಿ.ಡಿ.ಪಿ. ಇಲಾಖೆಯಿಂದ ಮಂಜೂರು ಮಾಡಬೇಕು.

ಈ ಸಂದರ್ಭ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಅಧ್ಯಕ್ಷ ಅಮೀನ್ ಮೊಹಿಸಿನ್, ತಾಲೂಕು ಪಂಚಾಯತಿ ಸದಸ್ಯೆ ಆಶಾ, ಪ್ರಮುಖರಾದ ಮೊಣ್ಣಪ್ಪ ಪಾಲೇಮಾಡು, ಕುಸುಮಾ, ನಿರಾಶ್ರಿತರ ಹೋರಾಟ ಸಮಿತಿಯ ರೆಜಿತ್ ಕುಮಾರ್ ಗುಹ್ಯ, ನಮ್ಮ ಕೊಡಗು ತಂಡದ ನೌಶಾದ್ ಜನ್ನತ್, ಕೆ.ಎ. ಷರೀಫಾ, ಹೇಮಂತ್, ಶೋಭಾ, ಸರಸು, ಲಕ್ಷಮೀ, ದಿಲೀಶ್ ಸೇರಿದಂತೆ ಮತ್ತಿತರರು ಇದ್ದರು.