ಸೋಮವಾರಪೇಟೆ, ಫೆ. ೫: ಕಳೆದ ೨ ದಶಕದಿಂದ ಸುಣ್ಣ ಬಣ್ಣ ಕಾಣದೆ ಶಿಥಿಲಾವಸ್ಥೆಗೆ ತಲುಪುತ್ತಿದ್ದ ಸೋಮವಾರಪೇಟೆ ತಾಲೂಕು ಕಚೇರಿ ಕಟ್ಟಡದ ನವೀಕರಣ ಕಾಮಗಾರಿ ಬಿರುಸಿನಿಂದ ನಡೆಯುತ್ತಿದೆ. ಕಳೆದೆರಡು ದಶಕಗಳಿಂದಲೂ ತಾಲೂಕು ಕಚೇರಿಯ ದುರಸ್ತಿಗೆ ಅನುದಾನ ಕೊರತೆಯ ಗ್ರಹಣ ಹಿಡಿದಿತ್ತು. ಮಳೆಗಾಲದಲ್ಲಿ ಕಟ್ಟಡ ಸೋರುತ್ತಿದ್ದುದರಿಂದ ಕಡತ, ಕಂಪ್ಯೂಟರ್‌ಗಳ ರಕ್ಷಣೆಯೊಂದಿಗೆ ಸಿಬ್ಬಂದಿಗಳು ಕಚೇರಿಯೊಳಗೆ ಕೆಲಸ ಮಾಡಲು ಸಮಸ್ಯೆಯಾಗಿತ್ತು. ಇದರೊಂದಿಗೆ ಸಾರ್ವಜನಿಕರೂ ಸಹ ಕಚೇರಿಯೊಳಗೆ ಓಡಾಡಲು ಅನಾನುಕೂಲವಾಗಿತ್ತು. ಇದೀಗ ಮಳೆಹಾನಿ ಪರಿಹಾರ ನಿಧಿಯಡಿ ರೂ. ೧.೪೦ ಕೋಟಿ ಅನುದಾನ ಬಿಡುಗಡೆಯಾಗಿದ್ದು, ಕಾಮಗಾರಿಗೆ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ಕಳೆದ ತಾ. ೨ ರಂದು ಚಾಲನೆ ನೀಡಿದ್ದಾರೆ. ಕೊಡಗಿನ ವಾತಾವರಣದ ಮಟ್ಟಿಗೆ ಅವೈಜ್ಞಾನಿಕವಾಗಿ ನಿರ್ಮಾಣಗೊಂಡಿದ್ದ ತಾಲೂಕು ಕಚೇರಿ ಕಟ್ಟಡವನ್ನು ಸರಿಪಡಿಸುವ ಕಾಮಗಾರಿ ಭರದಿಂದ ಸಾಗಿದೆ. ಕಟ್ಟಡದ ಎಡಭಾಗದ ಗೋಡೆಗಳ ಪ್ಲಾಸ್ಟರಿಂಗ್‌ನ್ನು ತೆಗೆದು ನೂತನವಾಗಿ ಪ್ಲಾಸ್ಟರಿಂಗ್ ಮಾಡಲು ಸಿದ್ದತೆ ನಡೆದಿದೆ. ಮೇಲ್ಭಾಗದಲ್ಲಿ ಸಭಾಂಗಣ ಹಾಗೂ ಕೊಠಡಿಗಳಿಗೆ ಪಿಲ್ಲರ್ ನಿರ್ಮಿಸುವ ಕಾರ್ಯ ಪ್ರಗತಿಯಲ್ಲಿದೆ. ಇದರೊಂದಿಗೆ ಕಿಟಕಿಗಳ ದುರಸ್ತಿ, ಸುಣ್ಣ ಬಣ್ಣ ಬಳಿಯುವದೂ ಸೇರಿದಂತೆ ಇನ್ನಿತರ ಕೆಲಸಗಳು ಬಾಕಿಯಿದ್ದು, ಶೀಘ್ರದಲ್ಲೇ ಕಾಮಗಾರಿ ಪೂರ್ಣಗೊಳಿಸುವದಾಗಿ ಗುತ್ತಿಗೆದಾರರು ತಿಳಿಸಿದ್ದಾರೆ.