ಸಿದ್ದಾಪುರ, ಫೆ. ೫: ಅಮ್ಮತ್ತಿ ಹೋಬಳಿಯ ನಾಡ ಕಚೇರಿಯ ವ್ಯಾಪ್ತಿಗೆ ಒಳಪಡುವ ಗ್ರಾಮದ ಪಿಂಚಣಿ ಅದಾಲತ್ ಕಾರ್ಯಕ್ರಮವು ಅಮ್ಮತ್ತಿಯ ನಾಡಕಚೇರಿಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ವೀರಾಜಪೇಟೆಯ ಉಪತಹಶೀಲ್ದಾರ್ ಶ್ರೀನಾಥ್ ಪಿಂಚಣಿ ಯೋಜನೆಯ ಮಂಜೂರಾತಿ ಆದೇಶ ಪ್ರತಿಯನ್ನು ಪಿಂಚಣಿದಾರರಿಗೆ ವಿತರಿಸಿದರು. ಈ ಸಂದರ್ಭ ಮಾತನಾಡಿದ ಅವರು ಈಗಾಗಲೇ ಸರ್ಕಾರವು ಅರ್ಹ ಪಿಂಚಣಿದಾರರನ್ನು ಗುರುತಿಸಿ ಪಿಂಚಣಿ ನೀಡಲು ಸೂಚಿಸಿದೆ. ಈ ನಿಟ್ಟಿನಲ್ಲಿ ಕಂದಾಯ ಇಲಾಖೆಯ ವತಿಯಿಂದ ಮುಂದಿನ ದಿನಗಳಲ್ಲಿ ಅರ್ಹ ಪಿಂಚಣಿದಾರರನ್ನು ಗುರುತಿಸಿ ಕಾರ್ಯವನ್ನು ಮುಂದುವರೆಸುವುದಾಗಿ ತಿಳಿಸಿದರು.

ಅಮ್ಮತ್ತಿ ಹೋಬಳಿ ಕಂದಾಯ ಪರಿವೀಕ್ಷಕ ಎಂ.ಎಲ್ ಹರೀಶ್ ಮಾತನಾಡಿ ಈಗಾಗಲೇ ಹೋಬಳಿ ವ್ಯಾಪ್ತಿಯ ಹಾಡಿಗಳಿಗೆ ಕಂದಾಯ ಇಲಾಖಾಧಿಕಾರಿಗಳು ತೆರಳಿ ಅಗತ್ಯ ದಾಖಲಾತಿಗಳು ಇಲ್ಲದ ಕುಟುಂಬಗಳನ್ನು ಗುರುತಿಸಿ ದಾಖಲಾತಿಗಳನ್ನು ಸರಿಪಡಿಸಿ ಕೊಡುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಅರ್ಹ ಫಲಾನುಭವಿಗಳಿಗೆ ಪಿಂಚಣಿ ಸೌಲಭ್ಯ ಒದಗಿಸಿಕೊಡಲಾಗುವುದೆಂದರು. ಈ ಸಂದರ್ಭ ಗ್ರಾಮ ಲೆಕ್ಕಿಗರು ಸಿಬ್ಬಂದಿಗಳು ಹಾಜರಿದ್ದರು. ಇದೇ ಸಂದರ್ಭ ೨೨ ಮಂದಿಗೆ ಪಿಂಚಣಿ ಮಂಜೂರಾತಿ ಆದೇಶ ಪ್ರತಿ ನೀಡಲಾಯಿತು. ೫ ಮಂದಿಯ ಹೊಸ ಅರ್ಜಿಯನ್ನು ಸ್ವೀಕರಿಸಲಾಯಿತು.