ಗೋಣಿಕೊಪ್ಪ ವರದಿ, ಜ. ೨೩: ಕಾಫಿಗೆ ಕನಿಷ್ಟ ಬೆಂಬಲ ಬೆಲೆ ನಿಗದಿಪಡಿಸುವಂತೆ ಒತ್ತಾಯಿಸಿ ನಡೆಯಲಿರುವ ಹೋರಾಟಕ್ಕೆ ಕೊಡಗು ಜಿಲ್ಲಾ ಕಾಂಗ್ರೆಸ್ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಕೆಪಿಸಿಸಿ ವಕ್ತಾರ ಎ.ಎಸ್. ಪೊನ್ನಣ್ಣ ಹೇಳಿದರು.
ಕೊಡಗು ರೈತ ಸಂಘ, ಹಸಿರು ಸೇನೆ ವತಿಯಿಂದ ತಾ. ೨೫ ರಂದು ಕುಟ್ಟದಿಂದ ಬೆಂಗಳೂರಿಗೆ ಆಯೋಜಿಸಿರುವ ವಾಹನ ಜಾಥಾ ಹಾಗೂ ತಾ. ೨೬ ರಂದು ಫ್ರೀಡಂ ಪಾರ್ಕ್ ಆವರಣದಲ್ಲಿ ನಡೆಯಲಿರುವ ಪ್ರತಿಭಟನೆಗೆ ಬೆಂಬಲಿಸಿ ಪಾಲ್ಗೊಳ್ಳುವುದಾಗಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕೇರಳ ಮಾದರಿಯಲ್ಲಿ ಕಾಫಿಗೆ ಕನಿಷ್ಟ ಬೆಂಬಲ ಬೆಲೆ ನಿಗದಿಪಡಿಸಲು ಬೆಂಗಳೂರಿನಲ್ಲಿ ನಡೆಯಲಿರುವ ಪ್ರತಿಭಟನೆಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಮನ್ನಣೆ ನೀಡದಿದ್ದಲ್ಲಿ ಉಗ್ರ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ ಎಂದರು.
ಪ್ರತಿಭಟನೆಗಳಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಸ್ವಲ್ಪ ಪ್ರಮಾಣದಲ್ಲಿ ಪ್ರತಿಕ್ರಿಯೆ ನೀಡುತ್ತಿವೆ. ಆದರೆ ಕೊಡಗಿನ ಜನಪ್ರತಿನಿಧಿಗಳು ಮಾತ್ರ ಜಾಣ ಮೌನಕ್ಕೆ ಶರಣಾಗಿದ್ದಾರೆ ಎಂದÀÄ ದೂರಿದರು.
ಬೆಳೆಗಾರರ ಸಮಸ್ಯೆಗಳನ್ನು ಬಗೆಹರಿಸುವ ಜವಾಬ್ದಾರಿಗಳನ್ನು ಸರ್ಕಾರಗಳು ನಿಭಾಯಿಸಲು ಎಡವಿದೆ. ರೈತರಿಗೆ ಬೆಂಬಲ ನೀಡುವಂತಹ ನೀತಿಗಳನ್ನು ರೂಪಿಸಲು ವಿಫಲವಾಗಿದೆ. ರೈತರ ಸಮಸ್ಯೆಗಳಿಗೆ ಸ್ಪಂದಿಸಲು ಜಿಲ್ಲಾಧಿಕಾರಿಗಳ ನಿಧಿಯಿಂದ ಯಾವುದೇ ಹಣ ಬಳಕೆಯಾಗುತ್ತಿಲ್ಲ. ಜಿಲ್ಲೆಯ ಶಾಸಕರು ಹಾಗೂ ಸಂಸದ ರೈತರ ಸಮಸ್ಯೆಗಳ ಕೂಗನ್ನು ಸರ್ಕಾರಕ್ಕೆ ತಲುಪಿಸುವಲ್ಲಿ ವಿಫಲವಾಗಿದ್ದಾರೆ ಎಂದು ಆರೋಪಿಸಿದರು.
ರೈತರಿಗೆ ವಿತರಿಸಲಾಗಿರುವ ಬೆಳೆ ಸಾಲಗಳನ್ನು ಮರುಪಾವತಿಸುವ ಸಮಯ ಹತ್ತಿರವಾಗುತ್ತಿದೆ. ಜಿಲ್ಲೆಯಲ್ಲಿ ಕಾಫಿ ಕೊಯ್ಲು ಸಂದರ್ಭ ಉಂಟಾಗಿರುವ ಹವಾಮಾನದ ಏರುಪೇರಿನಿಂದ ನಷ್ಟವಾಗಿರುವ ಕಾರಣ ಸಾಲ ಮರುಪಾವತಿಗೆ ತೊಂದರೆ ಉಂಟಾಗಲಿದೆ. ಇದಕ್ಕೆ ಸರ್ಕಾರ ಏನು ಪರಿಹಾರ ಕಂಡುಹಿಡಿಯಲಿದೆ ಎಂದು ಜನತೆಯ ಮುಂದಿಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಬೆಳೆ ಸಾಲ ವಸೂಲಿಗೆ ಬ್ಯಾಂಕ್ ಕಡೆಯಿಂದ ರೈತರನ್ನು ಶೋಷಿಸುವುದು ಕಂಡುಬAದರೆ ಕಾಂಗ್ರಸ್ ವತಿಯಿಂದ ಕಾನೂನಾತ್ಮಕವಾಗಿ ಸಹಕಾರ ನೀಡಲಾಗುವುದು. ಬೆಳೆಗಾರರ ಬೆಂಬಲಕ್ಕೆ ಪಕ್ಷವು ಸಿದ್ಧವಿದೆ ಎಂದು ಹೇಳಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ್ ಮಾಚಯ್ಯ ಮಾತನಾಡಿ, ಕರ್ನಾಟಕ ರಾಜ್ಯ ದೇಶದಲ್ಲಿಯೇ ಅತಿ ಹೆಚ್ಚು ರೊಬಸ್ಟಾ ಕಾಫಿ ಉತ್ಪಾದಿಸಿ ಸರ್ಕಾರಕ್ಕೆ ತೆರಿಗೆ ರೂಪದಲ್ಲಿ ಉತ್ತಮ ಆದಾಯ ನೀಡುತ್ತಿದೆ. ಆದರೆ ಬೆಳೆಗಾರರ ಸಮಸ್ಯೆಗಳನ್ನು ಮಾತ್ರ ಸರ್ಕಾರಗಳು ಸರಿಪಡಿಸಲು ಆಸಕ್ತಿ ವಹಿಸಿಲ್ಲ ಎಂದರು.
ಕಾಫಿ ಬೆಳೆಗಾರರ ಪ್ರತಿಯೊಂದು ಸಮಸ್ಯೆಗಳಿಗೂ ರಾಜ್ಯ ಸರ್ಕಾರ ಕೇಂದ್ರ ಸರ್ಕಾರವನ್ನು ಬೊಟ್ಟು ಮಾಡಿ ಜವಾಬ್ದಾರಿಯಿಂದ ನುಣುಚಿ ಕೊಳ್ಳುತ್ತಿದೆ. ಜಿಎಸ್ಟಿ ರೂಪದಲ್ಲಿ ಕಾಫಿ ಬೆಳೆಗಾರರಿಂದ ಸರ್ಕಾರಕ್ಕೆ ಉತ್ತಮ ಆದಾಯವಿದೆ. ಆದರೆ ಬೆಳೆಗಾರರ ಅಭಿವೃದ್ದಿ ಬಗ್ಗೆ ಚಿಂತನೆ ಕಾಣುತ್ತಿಲ್ಲ ಎಂದರು.
ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಶಿವು ಮಾದಪ್ಪ ಮಾತನಾಡಿ, ಜಿಲ್ಲೆಯ ಸಂಪೂರ್ಣ ವ್ಯಾಪಾರ ವಹಿವಾಟು ಗಳು ಕಾಫಿ ಬೆಳೆಯನ್ನು ಅವಲಂಭಿತವಾಗಿದೆ. ಕಾಫಿಯೊಂದಿಗೆ ಕಾಳುಮೆಣಸು ಬೆಳೆಗೂ ಕೂಡ ಕನಿಷ್ಟ ಬೆಂಬಲ ಬೆಲೆ ಘೋಷಣೆಯಾಗಬೇಕು. ಪ್ರತಿಯೊಂದು ವಿಚಾರಕ್ಕೂ ಕೋವಿಡ್ ನೆಪ ನೀಡಿ ಜನತೆಯ ಸಮಸ್ಯೆಗಳಿಗೆ ಸ್ಪಂದಿಸಲು ಸರ್ಕಾರಗಳು ವಿಫಲವಾಗಿವೆ. ಸಂಸದರು ಜಿಲ್ಲೆಯ ಯಾವುದೇ ಸಮಸ್ಯೆಗಳ ವಿಚಾರದಲ್ಲಿ ಪ್ರತಿಕ್ರಿಯೆ ನೀಡುತ್ತಿಲ್ಲ ಎಂದರು.
ಪೊನ್ನAಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀದೇರಿರ ನವೀನ್, ಮಾಜಿ ಅಧ್ಯಕ್ಷ ತೀತೀರ ಧರ್ಮಜ, ಜಿ.ಪಂ. ಸದಸ್ಯರಾದ ಬಾನಂಡ ಪ್ರಥ್ಯು, ಪಂಕಜ, ವಕ್ತಾರ ಆಪಟ್ಟೀರ ಟಾಟು ಮೊಣ್ಣಪ್ಪ ಇದ್ದರು.