ಕುಶಾಲನಗರ, ಜ. ೨೧: ಕೇಂದ್ರ ಸರಕಾರದ ಹಣಕಾಸು ಸಚಿವಾಲಯಕ್ಕೆ ಉನ್ನತ ಅಧಿಕಾರಿಯಾಗಿ ನಿಯೋಜನೆಗೊಂಡ ಕುಶಾಲನಗರದ ಎಸ್.ಎಸ್.ನಕುಲ್ ಅವರನ್ನು ರೋಟರಿ ಕುಶಾಲನಗರ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಕುಶಾಲನಗರ ರೋಟರಿ ಸಭಾಂಗಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ನಕುಲ್, ರಾಜ್ಯದಲ್ಲಿ ಹಲವೆಡೆ ತಾನು ಜಿಲ್ಲಾಧಿಕಾರಿಯಾಗಿ ಕೆಲಸ ನಿರ್ವಹಿಸಿದ್ದು ಉತ್ತಮ ಸೇವೆ ಕಲ್ಪಿಸಲು ಅವಕಾಶ ಲಭಿಸಿದೆ. ಇದೀಗ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಂ ಸಚಿವಾಲಯಕ್ಕೆ ನಿಯೋಜನೆಯಾಗಿದ್ದು ಈ ಸಂದರ್ಭ ತಮ್ಮ ತಾಯ್ನಾಡಿಗೆ ಅವಶ್ಯವಿರುವ ಯೋಜನೆಗಳ ಬಗ್ಗೆ ಮನವಿ ಬಂದಲ್ಲಿ ಕೈಲಾದಷ್ಟು ಮಟ್ಟಿಗೆ ತಾನು ಸಹಕರಿಸುವುದಾಗಿ ಭರವಸೆ ವ್ಯಕ್ತಪಡಿಸಿದರು. ವಿಶೇಷವಾಗಿ ಕುಶಾಲನಗರ ಕೈಗಾರಿಕಾ ಬಡಾವಣೆಗೆ ರೈಲ್ವೇ ಯೋಜನೆ ವಿಸ್ತರಣೆ, ಸಬರಮತಿ ನದಿ ಅಭಿವೃದ್ಧಿ ಮಾದರಿಯಲ್ಲಿ ಕಾವೇರಿ ನದಿ ಯೋಜನೆ ಹಾಗೂ ಕುಶಾಲನಗರ ಪಟ್ಟಣದ ೨೪x೭ ಕುಡಿಯುವ ನೀರಿನ ಯೋಜನೆಗೆ ಈಗಾಗಲೆ ಸ್ಥಳೀಯರು ತಮ್ಮೊಂದಿಗೆ ಚರ್ಚಿಸಿದ್ದು ಈ ಬಗ್ಗೆ ಗಮನಹರಿಸುವುದಾಗಿ ತಿಳಿಸಿದ ನಕುಲ್ ತನ್ನ ಬಾಲ್ಯದ ದಿನಗಳನ್ನು ನೆನಪಿಸಿಕೊಂಡರು.

ಇದೇ ಸಂದರ್ಭ ರೋಟರಿ ಮೂಲಕ ವಿಶೇಷಚೇತನ ಬಾಲಕಿಗೆ ವೀಲ್‌ಚೇರ್ ವಿತರಣೆ ಹಾಗೂ ಉನ್ನತ ವ್ಯಾಸಂಗ ಮಾಡುತ್ತಿರುವ ಬಡ ವಿದ್ಯಾರ್ಥಿಗಳಿಬ್ಬರಿಗೆ ಲ್ಯಾಪ್‌ಟಾಪ್ ನೀಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ರೋಟರಿ ಕುಶಾಲನಗರ ಅಧ್ಯಕ್ಷ ಕೆ.ಪಿ.ಚಂದ್ರಶೇಖರ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಉಲ್ಲಾಸ್, ಹಿರಿಯ ಸದಸ್ಯರಾದ ಎಸ್.ಕೆ.ಸತೀಶ್, ಶೋಭಾ ಸತೀಶ್, ಡಾ.ಹರಿ ಎ ಶೆಟ್ಟಿ, ಎ.ಎ.ಚಂಗಪ್ಪ, ಮಹೇಶ್, ಜೇಕಬ್ ಮತ್ತಿತರರು ಇದ್ದರು.