ಕುಶಾಲನಗರ, ಜ. ೨೨: ಬೈಲುಕೊಪ್ಪ ಟಿಬೇಟಿಯನ್ ನಿರಾಶ್ರಿತರ ಶಿಬಿರದ ಯುವತಿಯೊಬ್ಬಳ ಮೇಲೆ ಅಸಭ್ಯವಾಗಿ ವರ್ತಿಸಿ ಹಲ್ಲೆ ನಡೆಸಿದ ಪ್ರಕರಣ ಇದೀಗ ತಿರುವು ಪಡೆಯುತ್ತಿದ್ದು ಯುವತಿ ತನ್ನ ರಕ್ಷಣೆಗಾಗಿ ಹಿರಿಯ ಪೊಲೀಸ್ ಅಧಿಕಾರಿಗಳ ಮೊರೆ ಹೋಗುವುದರೊಂದಿಗೆ ತನ್ನ ಮನೆ ಬದಲಾಯಿಸಿರುವ ಘಟನೆ ವರದಿಯಾಗಿದೆ.

ಜನವರಿ ೭ ರಂದು ಕುಶಾಲನಗರ ಮಡಿಕೇರಿ ರಸ್ತೆಯ ಹೊಟೇಲ್ ಒಂದರ ಮುಂಭಾಗ ಕೆಲವು ಯುವಕರು ಬೈಲುಕೊಪ್ಪೆಯ ಟಿಬೇಟಿಯನ್ ನಿರಾಶ್ರಿತರ ಶಿಬಿರದ ೭ನೇ ಕ್ಯಾಂಪ್‌ನ ದೇಚನ್ ಯಾಂಗ್ಜಮ್ (೨೫) ಎಂಬಾಕೆಯ ಮೇಲೆ ಹಲ್ಲೆ ನಡೆಸಿದ ಬಗ್ಗೆ ಕುಶಾಲನಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಪ್ರಕರಣಕ್ಕೆ ಸಂಬAಧಿಸಿದAತೆ ಓರ್ವನನ್ನು ಬಂಧಿಸಲಾಗಿತ್ತು. ಇದೀಗ ಹೊರಬಂದಿರುವ ಆರೋಪಿ ಮತ್ತು ಆತನ ಸಹಚರರು ಆಕೆಗೆ ಜೀವಬೆದರಿಕೆ ಒಡ್ಡಿರುವ ಬಗ್ಗೆ ದೂರಿದ್ದಾಳೆ. ಪ್ರಕರಣ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಗಮನಕ್ಕೂ ಬಂದಿದ್ದು ಸ್ಥಳೀಯ ಪೊಲೀಸರಿಂದ ತನಗೆ ನ್ಯಾಯ ದೊರಕಿಲ್ಲ ಎಂದು ಆರೋಪಿಸಿರುವ ಯುವತಿ, ಆರೋಪಿಗಳು ತನ್ನ ಬೈಲುಕೊಪ್ಪೆ ಶಿಬಿರದ ಮನೆಗೆ ಬಂದು ಬೆದರಿಕೆ ಒಡ್ಡುತ್ತಿದ್ದಾರೆ. ತಾನು ರಕ್ಷಣೆ ಬಯಸಿ ಮನೆ ಬದಲಾಯಿಸಿದ್ದು ತಾನು ಮತ್ತು ತನ್ನ ೫ ವರ್ಷದ ಹೆಣ್ಣುಮಗಳೊಂದಿಗೆ ದಿನನಿತ್ಯ ಜೀವಭಯದಿಂದ ಇರುವಂತಾಗಿದೆ. ತಕ್ಷಣ ಆರೋಪಿಗಳ ಮೇಲೆ ಸೂಕ್ತ ಕಾನೂನು ಕ್ರಮಕೈಗೊಳ್ಳುವುದರೊಂದಿಗೆ ತನಗೆ ಮತ್ತು ಕುಟುಂಬಕ್ಕೆ ರಕ್ಷಣೆ ಒದಗಿಸಬೇಕೆಂದು ದಕ್ಷಿಣ ವಲಯ ಪೊಲೀಸ್ ಮಹಾ ನಿರೀಕ್ಷಕರಿಗೆ ದೂರು ನೀಡುವುದಾಗಿ ಶಕ್ತಿಯೊಂದಿಗೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.