ಶ್ರೀಮಂಗಲ, ಜ. ೨೨: ತೂಚಮಕೇರಿ ಕೋಟೂರು ಗ್ರಾಮದ ಗದ್ದೆಯಲ್ಲಿ ಮನುಷ್ಯನ ತಲೆ ಬುರುಡೆ ಪತ್ತೆಯಾಗಿದೆ.
ಶ್ರೀಮಂಗಲ ಪೊಲೀಸ್ ಉಪ ನಿರೀಕ್ಷಕ ರವಿಶಂಕರ್ ನೇತೃತ್ವದಲ್ಲಿ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಮಹಜರು ಮಾಡಿ, ತಲೆ ಬುರುಡೆಯನ್ನು ವಶಕ್ಕೆ ಪಡೆದು ವಿಧಿ ವಿಜ್ಞಾನ ಪರೀಕ್ಷೆಗಾಗಿ ಕಳುಹಿಸಲಾಗುವುದು ಎಂದು ತಿಳಿಸಿದ್ದಾರೆ.
೨೦೨೦ನೇ ಸೆಪ್ಟೆಂಬರ್‌ನಲ್ಲಿ ಗ್ರಾಮದ ೭೬ ವರ್ಷದ ಪೆಮ್ಮಂಡ ಅಚ್ಚಯ್ಯ ಎಂಬವರು ಕಾಣೆಯಾಗಿದ್ದರು. ಬುರುಡೆ ಸಿಕ್ಕಿದ ಕೆಲವು ಅಡಿ ದೂರದಲ್ಲಿ ಕಳೆದ ತಿಂಗಳು ಬುರುಡೆ ಇಲ್ಲದ ಮನುಷ್ಯನ ಅಸ್ಥಿಪಂಜರ ಪತ್ತೆಯಾಗಿತ್ತು.
ಈಗ ಪತ್ತೆಯಾಗಿರುವ ತಲೆ ಬುರುಡೆ ಕಾಣೆಯಾಗಿದ್ದ ಅಚ್ಚಯ್ಯ ಅವರಿಗೆ ಸೇರಿದ್ದಾಗಿರಬಹುದೆಂದು ಶಂಕಿಸಲಾಗಿದ್ದು, ಖಚಿತಪಡಿಸಿಕೊಳ್ಳಲು ವಿಧಿ ವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗುವುದೆಂದು ಎಸ್.ಐ. ರವಿಶಂಕರ್ ಮಾಹಿತಿ ನೀಡಿದ್ದಾರೆ.