ಮಡಿಕೇರಿ, ಜ. ೨೧: ಎರಡು ದಿನದ ಹಿಂದೆ ಸರ್ಕಾರಿ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ಮರಣ ಹೊಂದಿರುವ ಬಗ್ಗೆ ಮಡಿಕೇರಿ ಸತ್ಯ ಇವರಿಂದ ಮಾಹಿತಿ ತಿಳಿದ ಕೂಡಲೇ ಎರಡು ಅನಾಥ ಶವಗಳಿಗೆ ವಾರಸುದಾರರು ಇಲ್ಲದ ಕಾರಣ ಮಡಿಕೇರಿಯ ಚೈನ್ ಗೇಟ್ ಬಳಿ ಇರುವ ಹಿಂದೂ ರುದ್ರಭೂಮಿಯಲ್ಲಿ ಮಡಿಕೇರಿಯ ಸಮಾಜ ಸೇವಕರಾದ ಉಮೇಶ್‌ಗೌಡ, ವಿನು, ಸಮೀರ್ ಹಾಗೂ ಸುಂಟಿಕೊಪ್ಪದ ವಿಕಾಸ್ ಜನಸೇವಾ ಟ್ರಸ್ಟ್ನ ಅಧ್ಯಕ್ಷ ರಮೇಶ್ ಇವರುಗಳನ್ನೊಳಗೊಂಡ ತಂಡದ ವತಿಯಿಂದ ಸಂಪ್ರದಾಯದAತೆ ಅನಾಥ ಶವಗಳಿಗೆ ಶವಸಂಸ್ಕಾರ ನೆರವೇರಿಸಲಾಯಿತು.

ಹುಟ್ಟು - ಸಾವು ಜೀವನದ ಎರಡು ಮುಖಗಳು... "ಜನನ ಹೇಳಿ ಬರುವುದಾದರೆ ಹೇಳದೆ ಬರುವಂಥದು ಮರಣ" ವಿಧಿಯ ಆಟವನ್ನು ಬಲ್ಲರ‍್ಯಾರು..? ಅನಿವಾರ್ಯವಾಗಿಯೋ ಪರಿಸ್ಥಿತಿಯ ಕೈಗೊಂಬೆಯಾಗಿಯೋ, ಕೌಟುಂಬಿಕ ಸಮಸ್ಯೆಗಳಿಂದಾಗಿಯೋ, ಹುಟ್ಟಿನಿಂದಲೊ ಅನಾಥರಾಗುವವರು ಜೀವನದುದ್ದಕ್ಕೂ ಎಲ್ಲಾ ಕಷ್ಟ, ನೋವು, ಸಮಸ್ಯೆಗಳನ್ನು ನುಂಗಿ ಸಹಿಸಿ, ಬಾಳಿ ಬದುಕಿ ಕೊನೆಗೆ ಕಾಲನ ಕರೆಗೆ ಓಗೊಟ್ಟು ಜೀವನದ ಅಂತ್ಯ ಕಂಡಾಗ ಶವ ಸಂಸ್ಕಾರ ಮಾಡಲು ಕೂಡ ನನ್ನವರು, ತನ್ನವರು, ಬಂಧು ಬಳಗ ಎಂದು ಯಾರೂ ಇಲ್ಲದಿದ್ದಾಗ ಇವರ ಆತ್ಮಕ್ಕೆ ಸದ್ಗತಿ ದೊರೆಯುವುದಾದರೂ ಹೇಗೆ....?

ಮನುಷ್ಯನ ಅಂತ:ಕರಣದಲ್ಲಿರುವ ಮಾನವೀಯತೆಯೇ ಇಂಥವರ ಪಾಲಿನ ಆಶಾಕಿರಣ. ಪ್ರತಿಯೊಬ್ಬರೂ ಸ್ವಾರ್ಥ ಬಿಟ್ಟು ಮಾನವೀಯತೆಯನ್ನು ಮೈಗೂಡಿಸಿಕೊಂಡು ತಮ್ಮ ಕೈಯಲ್ಲಿ ಆದಷ್ಟು ಇಂಥವರ ಸೇವೆಗೆ ತಮ್ಮ ಜೀವನವನ್ನು ಮುಡಿಪಾಗಿಡಬೇಕೆಂಬುದಷ್ಟೆ ನಮ್ಮ ಆಶಯ. ಪ್ರಪಂಚದಲ್ಲಿ ಮನುಷ್ಯ ಎಂಬ ಜೀವಿ ೧ ಅಗಾದವಾದ ವಿಸ್ಮಯಕರವಾದ ಸಂಗತಿ. ಸ್ವಾರ್ಥ, ಹಣಬಲ, ದುರಹಂಕಾರ, ಜಾತಿ ಭೂತ, ರಾಜಕೀಯ, ಸ್ವಪ್ರತಿಷ್ಠೆ ಮುಂತಾದವುಗಳೇ ತುಂಬಿರುವ ಇಂದಿನ ಕಾಲಘಟ್ಟದಲ್ಲಿ ಮಾನವೀಯತೆ ಸತ್ತಿಲ್ಲ ಎಂಬುದು ಈ ಘಟನೆಯಿಂದ ಸ್ಪಷ್ಟವಾಗುತ್ತದೆ.

"ಜನ ಸೇವೆಯೇ ಜನಾರ್ಧನ ಸೇವೆ" ಎಂಬ ಧ್ಯೇಯದೊಂದಿಗೆ ಪ್ರತಿಯೊಬ್ಬರೂ ಕೂಡ ತಮ್ಮ ಜೀವನದಲ್ಲಿ ಮಾನವೀಯತೆಯೊಂದಿಗೆ ತಮ್ಮ ಕೈಯಲ್ಲಿ ಸಾಧ್ಯವಾಗುವಷ್ಟು ಅಳಿಲು ಸೇವೆಯ ಮೂಲಕ ಸಮಾಜ ಸೇವೆ ಮಾಡಲು ಕೈಜೋಡಿಸಿ ಎಂದು ಮನವಿ ಮಾಡಿಕೊಳ್ಳುತ್ತೇವೆ.

- ಉಮೇಶ್ ಗೌಡ, ದೇಚೂರು.