ಜ. ೨೧: ಪಟ್ಟಣದ ವಿವಿಧ ಅಭಿವೃದ್ಧಿ ಕೆಲಸಗಳಿಗೆ ಎರಡು ಕೋಟಿ ಇಪ್ಪತ್ತು ಲಕ್ಷ ಹಣ ಅನುದಾನ ಬಂದಿದ್ದು ಹಂತ ಹಂತವಾಗಿ ಕಾವiಗಾರಿಗಳನ್ನು ಕೈಗೊಳ್ಳಲಾಗುವುದು ಎಂದು ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಹೇಳಿದರು.

ಮಳೆಹಾನಿ, ನಗರೋತ್ಥಾನ ೧೪ನೇ ಹಣಕಾಸು ಯೋಜನೆಯ ಒಟ್ಟು ರೂ. ೫೫ ಲಕ್ಷ ವೆಚ್ಚದಲ್ಲಿ ಪಶುವೈದ್ಯ ಶಾಲೆ ರಸ್ತೆ, ಕಿತ್ತೂರು ರಾಣಿ ಚೆನ್ನಮ್ಮ ರಸ್ತೆ, ಮಠದ ಗದ್ದೆ ರಸ್ತೆ, ಗಾಂಧಿನಗರ ರಸ್ತೆ ಡಾಂಬರಿಕರಣ ಕಾಮಗಾರಿಯನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಬೋಪಯ್ಯ ಅವರು, ಮುಂದಿನ ದಿನಗಳಲ್ಲಿ ಮನೆಮನೆಗೆ ನಿರಂತರ ನಲ್ಲಿ ನೀರನ್ನು ಒದಗಿಸಲು ಯೋಜನೆ ಹಾಕಿಕೊಂಡಿದ್ದು ಪೈಪ್ ಇತರ ಎಲ್ಲ ಯಂತ್ರಗಳ ಅಳವಡಿಕೆಗಾಗಿ ರಾಜ್ಯ ಹಾಗೂ ಕೇಂದ್ರ ಸರಕಾರದಿಂದ ಒಟ್ಟು ರೂ. ೬೩ ಕೋಟಿ ಅನುದಾನ ಬರಲಿದೆ ಎಂದು ಹೇಳಿದರು.ಪ.ಪಂ. ಮುಖ್ಯಾಧಿಕಾರಿ ಶ್ರೀಧರ್ ಮಾತನಾಡಿ, ಪಂಚಾಯಿತಿ ವ್ಯಾಪ್ತಿಯಲ್ಲಿ ರೂ. ೪ ಕೋಟಿ ವೆಚ್ಚದಲ್ಲಿ ಸರ್ವಋತು ರಸ್ತೆಗಳ ಕಾಮಗಾರಿ ಮುಗಿಸಲಾಗಿದೆ. ಇದರಲ್ಲಿ ಗಾಂಧಿನಗರ ಹಾಗೂ ಶಿವಕೇರಿ ರಸ್ತೆಯ ಸಮಗ್ರ ಅಭಿವೃದ್ಧಿ ಹಾಗೂ ಮುಖ್ಯವಾಗಿ ಕಿತ್ತೂರು ರಾಣಿ ಚೆನ್ನಮ್ಮ ರಸ್ತೆ, ಪಶುವೈದ್ಯ ಶಾಲೆ ಸೇರಿದೆ. ಇನ್ನು ರೂ. ೪ ಕೋಟಿ ಅನುದಾನ ದೊರೆತರೆ ಪಟ್ಟಣದ ರಸ್ತೆಯ ಸಮಗ್ರ ಅಭಿವೃದ್ಧಿ ಆಗಲಿದೆ. ಇನ್ನು ದಖನ್ನಿ ಮೋಹಲ್ಲ, ಮಲೆತಿರಿಕೆ ಬೆಟ್ಟದ ರಸ್ತೆ ಕಾಮಗಾರಿ ನಡೆಯಲಿದೆ. ಮೊಗರಗಲ್ಲಿಯ ನೆಹರು ನಗರದ ಬೆಟ್ಟದ ಭಾಗದಲ್ಲಿ ಭೂ ಕುಸಿತಕ್ಕೆ ತಡೆಗೋಡೆ ಕಾಮಗಾರಿ ಆರಂಭವಾಗಿದೆ. ಶಾಸಕರು ಈಗಾಗಲೇ ರೂ. ೬೩ ಕೋಟಿ ವೆಚ್ಚದ ನೀರಿನ ಉನ್ನತ್ತಿಕರಣ ಯೋಜನೆಗೆ ರೂ. ೬೩ ಕೋಟಿ ಒದಗಿಸುವ ಭರವಸೆ ನೀಡಿದ್ದು, ಅದು ದೊರೆತರೆ ಪಟ್ಟಣದಲ್ಲಿ ೨೪ ಗಂಟೆ ನೀರು ಸರಬರಾಜಿನೊಂದಿಗೆ ನೀರಿನ ಸಮಸ್ಯೆ ನೀಗುತ್ತದೆ ಎಂದು ಹೇಳಿದರು.

ತಹಶೀಲ್ದಾರ್ ಯೋಗಾನಂದ, ಪ.ಪಂ. ಅಧ್ಯಕ್ಷೆ ಸುಶ್ಮೀತಾ, ಉಪಾಧ್ಯಕ್ಷ ಹರ್ಷವರ್ಧನ, ಅಭಿಯಂತರ ಎನ್.ಎಂ. ಹೇಮಾಕುಮಾರ್ ಸದಸ್ಯರಾದ ಸುನೀತ (ಜೂನ), ಎಂ.ಕೆ. ದೇಚಮ್ಮ, ಮಹಾದೇವ, ತಬಸ್ಸಂ, ಯಶೋಧ ಅಗಸ್ಟಿನ್ ಬೆನ್ನಿ, ರಜನಿಕಾಂತ್, ಮತೀನ್, ರಾಜೇಶ್, ಮಹ್ಮದ್ ರಾಫಿ, ಅನಿತಾ ಹಾಗೂ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಸದಸ್ಯ ರಘು ನಾಣಯ್ಯ ಮುಂತಾದವರು ಇದ್ದರು.