ಮಡಿಕೇರಿ, ಜ. ೨೨ : ತೆರಿಗೆ ಹಾಗೂ ದಿನಬಳಕೆ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಕೊಡಗು ಜಿಲ್ಲಾ ಜಾತ್ಯತೀತ ಜನತಾದಳದ ವತಿಯಿಂದ ನಗರದಲ್ಲಿ ಪಾದಯಾತ್ರೆ ನಡೆಸಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು. ತೆರಿಗೆ ಹಾಗೂ ದಿನಬಳಕೆ ವಸ್ತುಗಳ ದರ ಇಳಿಕೆ ಮಾಡದಿದ್ದರೆ ಬೆಂಗಳೂರು ಚಲೋ ಕಾರ್ಯಕ್ರಮ ಹಮ್ಮಿಕೊಂಡು ವಿಧಾನಸೌಧಕ್ಕೆ ಮುತ್ತಿಗೆ ಹಾಕಬೇಕಾಗುತ್ತದೆ ಎಂದು ಪ್ರತಿಭಟನಾನಿರತರು ಎಚ್ಚರಿಸಿದರು. ನಗರದ ಇಂದಿರಾಗಾAಧಿ ವೃತ್ತದಿಂದ ಪಾದಯಾತ್ರೆ ನಡೆಸಿದ ಕಾರ್ಯಕರ್ತರು, ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಅಪರ ಜಿಲ್ಲಾಧಿಕಾರಿ ರೂಪ ಅವರಿಗೆ ಮನವಿ ಸಲ್ಲಿಸಿದರು. ಜಿಲ್ಲಾಧ್ಯಕ್ಷ ಕೆ.ಎಂ.ಬಿ ಗಣೇಶ್ ಮಾತನಾಡಿ, ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆ ವ್ಯಾಪ್ತಿಯ ಆಸ್ತಿ ತೆರಿಗೆಯನ್ನು ಗಣನೀಯ ಪ್ರಮಾಣದಲ್ಲಿ ಏರಿಕೆ ಮಾಡಿರುವ ಕ್ರಮ ಸರಿಯಲ್ಲ. ಸಾವಿರ ಚದರ ಅಡಿಗಿಂತ ಹೆಚ್ಚಿರುವ ಖಾಲಿ ನಿವೇಶನಗಳ ಆಸ್ತಿ ತೆರಿಗೆಯನ್ನು ಶೇ. ೦.೨ ರಿಂದ ೦.೫ಕ್ಕೆ, ಮನೆ ತೆರಿಗೆಯನ್ನು ಶೇ ೧ ರಿಂದ ೧.೫, ಸ್ವಯಂ ಘೋಷಿತ ಆಸ್ತಿ ತೆರಿಗೆಯನ್ನು ಶೇ. ೦.೨೫ ರಷ್ಟು ಹೆಚ್ಚಳ ಮಾಡಿರು ವುದನ್ನು ಕೈಬಿಡಬೇಕು. ಮೊದಲಿದ್ದ ತೆರಿಗೆಯನ್ನು ನಿಗಧಿ ಮಾಡಬೇಕೆಂದು ಒತ್ತಾಯಿಸಿದರು.

ದಿನಬಳಕೆ ವಸ್ತು, ಪೆಟ್ರೋಲ್, ಡಿಸೇಲ್, ಅಡುಗೆ ಅನಿಲದ ಬೆಲೆ ಏರಿಕೆ ಮಾಡಿ ಗಾಯದ ಮೇಲೆ ಬರೆ ಎಳೆಯುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಜನಪರವಾಗಿರಬೇಕಾದ ಸರ್ಕಾರ ತೆರಿಗೆ ಹೆಚ್ಚಿಸಿ ಬೊಕ್ಕಸ ತುಂಬಿಸಿಕೊಳ್ಳುತ್ತಿದೆ ಎಂದು ಆರೋಪಿಸಿದ ಅವರು ಲಾಕ್‌ಡೌನ್, ಕೊರೊನಾ ಪರಿಸ್ಥಿತಿಯಿಂದ ಜನರ ಆರ್ಥಿಕ ಸ್ಥಿತಿ ಹದಗೆಟ್ಟಿದೆ. ಜನರ ಬದುಕನ್ನು ಸಹಜ ಸ್ಥಿತಿಗೆ ತರಬೇಕಾದ ಸರ್ಕಾರ ಮತ್ತಷ್ಟು ಹೊರೆ ನೀಡುತ್ತಿವೆ. ಬಿಜೆಪಿ ನಾಯಕರು ಬೆಲೆ ಏರಿಕೆ ಬಗ್ಗೆ ಮಾತನಾಡದಿರಲು ಕಾರಣವೇನೆಂದು ಪ್ರಶ್ನಿಸಿದರು.

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನಿರಂತರವಾಗಿ ಬೆಲೆ ಏರಿಕೆಯಾಗುತ್ತಿದೆ.

(ಮೊದಲ ಪುಟದಿಂದ) ಪ್ರಧಾನಿ ಮೋದಿ ಅವರ ‘ಅಚ್ಛೇ ದಿನ್ ಆಯೇಗಾ’ ಇದೇನಾ ಎಂದು ಗಣೇಶ್ ಟೀಕಿಸಿದರು. ನ್ಯಾಯಬೆಲೆ ಅಂಗಡಿಯಲ್ಲಿ ೭ ಕೆ.ಜಿ. ಅಕ್ಕಿ ಬದಲಿಗೆ ೫ ಕೆ.ಜಿ. ಅಕ್ಕಿಯನ್ನು ಮಾತ್ರ ನೀಡಲಾಗುತ್ತಿದೆ. ತೊಗರಿಬೇಳೆ ಸೇರಿದಂತೆ ಇತರ ದಾನ್ಯಗಳನ್ನೂ ಸ್ಥಗಿತಗೊಳಿಸಲಾಗಿದೆ. ಜನರು ಇನ್ನಾದರೂ ಎಚ್ಚೆತ್ತುಕೊಳ್ಳಬೇಕೆಂದರು.

ಜೆಡಿಎಸ್ ಯುವ ಘಟಕದ ಜಿಲ್ಲಾಧ್ಯಕ್ಷ ವಿಶ್ವ ಮಾತನಾಡಿ, ಯುಪಿಎ ಸರ್ಕಾರ ಅವಧಿಯಲ್ಲಿ ರೂ ೫೦ ಪೈಸೆ ತೈಲ ಬೆಲೆ ಏರಿಕೆಯಾದರೆ, ಬಿಜೆಪಿ ಟೀಕಿಸುತಿತ್ತು. ಇದೀಗ ಬಿಜೆಪಿ ಸರ್ಕಾರವೇ ತೈಲ ಬೆಲೆ ದುಪ್ಪಟ್ಟು ಮಾಡಿದೆ. ಇದರ ವಿರುದ್ಧ ಧ್ವನಿ ಎತ್ತಿದರೆ ಐಟಿ, ಇಡಿ ದಾಳಿ ಮಾಡುವ ಮೂಲಕ ಬ್ಲಾö್ಯಕ್‌ಮೇಲ್ ತಂತ್ರವನ್ನು ಬಿಜೆಪಿ ಅನುಸರಿಸುತ್ತ್ತದೆ. ಅದಲ್ಲದೆ ನೂತನ ಕಾಯ್ದೆ ಜಾರಿ ಮಾಡುವ ಮೂಲಕ ರೈತರ ಮೇಲೆ ಸರ್ಕಾರ ಮರಣಶಾಸನ ಬರೆಯುತ್ತಿದೆ. ರಾಮಮಂದಿರ ಬಿಜೆಪಿ ಮಂದಿರವಾಗದೆ, ಎಲ್ಲರ ಮಂದಿರವಾಗಬೇಕು ಎಂದು ಹೇಳಿದರು.

ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಇಸಾಕ್ ಖಾನ್ ಮಾತನಾಡಿ, ಬಿಜೆಪಿ ದಬ್ಬಾಳಿಕೆ ರಾಜಕಾರಣ ಮಾಡುತ್ತಿದೆ. ಜನವಿರೋಧಿ ನೀತಿಗೆ ಜನರೇ ತಕ್ಕಪಾಠ ಕಲಿಸಲಿದ್ದಾರೆ. ಬಿಜೆಪಿ ರೈತ ವಿರೋಧಿ ನಡೆಯನ್ನು ಅನುಸರಿಸುತ್ತಿದೆ ಎಂದು ದೂರಿದರು.

ಮಡಿಕೇರಿ ತಾಲೂಕು ಅಧ್ಯಕ್ಷ ಬಲ್ಲಚಂಡ ಗೌತಮ್, ವೀರಾಜಪೇಟೆ ನಗರಾಧ್ಯಕ್ಷ ಮಂಜುನಾಥ್, ಯುವ ಘಟಕದ ಪ್ರಧಾನ ಕಾರ್ಯದರ್ಶಿ ಜಾಸೀರ್, ನಗರಾಧ್ಯಕ್ಷ ಮೋನಿಷ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ರುಬೀನಾ, ಪ್ರಧಾನ ಕಾರ್ಯದರ್ಶಿ ಲೀಲಾ ಶೇಷಮ್ಮ, ನಗರಾಧ್ಯಕ್ಷೆ ಸುನಂದ, ಸಾಮಾಜಿಕ ಜಾಲತಾಣ ಘಟಕದ ಅಧ್ಯಕ್ಷ ಕೊಟ್ಟಕೇರಿಯನ ಅಜಿತ್ ಸೇರಿದಂತೆ ಇನ್ನಿತರರು ಇದ್ದರು.