ಕುಶಾಲನಗರ, ಜ. ೨೨: ಶಿವಮೊಗ್ಗ ಬಳಿ ನಿನ್ನೆ ನಡೆದ ಜಿಲೆಟಿನ್ ಸ್ಫೋಟದ ಬೆನ್ನಲ್ಲೇ ಕೊಡಗು ಜಿಲ್ಲೆಯ ಕುಶಾಲನಗರ ಮತ್ತು ಹೈದರಾಬಾದ್ ಹೆಸರುಗಳು ಮತ್ತೆ ಕೇಳಿಬರತೊಡಗಿದೆ. ಗುರುವಾರ ರಾತ್ರಿ ಶಿವಮೊಗ್ಗದ ಹುಣಸೇಗೋಡು ಕಲ್ಲುಕ್ವಾರಿಯಲ್ಲಿ ಭಾರೀ ಪ್ರಮಾಣದ ಜಿಲೆಟಿನ್ ಸ್ಫೋಟಗೊಂಡು ಹಲವು ಕಾರ್ಮಿಕರ ದುರ್ಮರಣ ಹಾಗೂ ಉಂಟಾದ ಭಾರೀ ಅನಾಹುತದ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಯುತ್ತಿದ್ದು ಕುಶಾಲನಗರದ ಮೂಲಕ ಸ್ಫೋಟಕ ವಸ್ತುಗಳು ಸಾಗಾಟವಾಗಿರುವ ಬಗ್ಗೆ ಶಿವಮೊಗ್ಗದ ಶಾಸಕರೊಬ್ಬರ ಹೇಳಿಕೆ ಇದೀಗ ಕುಶಾಲನಗರ ಭಾಗದಲ್ಲಿ ಆತಂಕ ಮೂಡಿಸಿದೆ. ಕುಶಾಲನಗರ ಮತ್ತು ಶಿವಮೊಗ್ಗ ಸ್ಫೋಟಕ ವಸ್ತುಗಳ ದಾಸ್ತಾನುದಾರರಿಗೆ ಸಂಪರ್ಕ ಇರುವ ಬಗ್ಗೆ ತನಿಖೆ ನಡೆಯುತ್ತಿದ್ದು ಸಾರ್ವಜನಿಕ ವಲಯದಲ್ಲಿ ಅನುಮಾನಕ್ಕೆ ಎಡೆಮಾಡಿದೆ. ಈ ಹಿಂದೆ ಸಮೀಪದ ಬೆಟ್ಟದಪುರ ವ್ಯಾಪ್ತಿಯಲ್ಲಿ ಅಕ್ರಮ ಜಿಲೆಟಿನ್ ದಾಸ್ತಾನು ಇರಿಸಿದ ಹಿನ್ನೆಲೆ ಹಲವರ ಬಂಧನ ಆಗಿರುವುದನ್ನು ಇಲ್ಲಿ ಸ್ಮರಿಸಬಹುದು. ಪುಲ್ವಾಮ ಸ್ಫೋಟ ಸಂದರ್ಭ ಕೂಡ

(ಮೊದಲ ಪುಟದಿಂದ) ರಾಜ್ಯ, ಕೇಂದ್ರದ ಗುಪ್ತಚರ ತಂಡಗಳು ಕೂಡ ಈ ಭಾಗಕ್ಕೆ ಭೇಟಿ ನೀಡಿ ಮಾಹಿತಿ ಕಲೆಹಾಕಿರುವುದನ್ನು ಗಮನಿಸಬಹುದು. ಕುಶಾಲನಗರ ಸೇರಿದಂತೆ ನೆರೆಯ ಜಿಲ್ಲೆಗಳಲ್ಲಿ ಅಧಿಕೃತ ‘ಮ್ಯಾಗಜಿನ್’ ರೂಂಗಳು ಇರುವ ಬಗ್ಗೆಯೂ ಮಾಹಿತಿಗಳು ಹೊರಬಿದ್ದಿದೆ.