ನಾಪೋಕ್ಲು, ಜ. ೧೯: ಭ್ರಷ್ಟಾಚಾರಕ್ಕೆ ಅವಕಾಶ ನೀಡದೆ ಪ್ರಾಮಾಣಿಕತೆ ಹಾಗೂ ಸನ್ನಡತೆಯಿಂದ ಚುನಾಯಿತಿ ಪ್ರತಿನಿಧಿಗಳು ಗ್ರಾಮ ಪಂಚಾಯಿತಿ ಮಟ್ಟದಿಂದಲೇ ಕಾರ್ಯಪ್ರವೃತ್ತರಾಗ ಬೇಕು ಹಾಗೂ ಪ್ರಧಾನಮಂತ್ರಿ ನರೇಂದ್ರಮೋದಿಯವರ ರಾಮರಾಜ್ಯದ ಕನಸನ್ನು ಸಾಕಾರಗೊಳಿಸಬೇಕು ಎಂದು ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಕರೆ ನೀಡಿದರು.
ಪಾರಾಣೆ-ಕೊಣಂಜಗೇರಿ ಗ್ರಾ.ಪಂ. ಶಕ್ತಿ ಕೇಂದ್ರದ ವತಿಯಿಂದ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿದ್ದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಅಭ್ಯರ್ಥಿಗಳ ವಿಜಯೋತ್ಸವ ಹಾಗೂ ಅಭಿನಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಕೋವಿಡ್-೧೯ ಪರಿಸ್ಥಿತಿ ಹಾಗೂ ಅತಿವೃಷ್ಟಿಯಿಂದ ಅಭಿವೃದ್ಧಿಗೆ ವ್ಯತಿರಿಕ್ತ ಪರಿಣಾಮ ಉಂಟಾಗಿದೆ. ಮುಂದಿನ ಬಜೆಟ್‌ನಲ್ಲಿ ೨೫ ರಿಂದ ೩೦ ಸಾವಿರ ಕೋಟಿ ರೂ. ಕಡಿತಗೊಳಿಸುವಂತಾಗಿದೆ. ಕೇಂದ್ರದಿAದ ರಾಜ್ಯಕ್ಕೆ ರೂ. ೬೫ ಸಾವಿರ ಕೋಟಿ ಜಿಎಸ್‌ಟಿ ಹಣ ಬರಬೇಕಾಗಿದ್ದರೂ ಎಲ್ಲದರ ಸಮತೋಲನದಿಂದ ಅಭಿವೃದ್ಧಿ ಕಾರ್ಯ ಮುಂದುವರಿದಿದೆ ಎಂದರು.
ಕರ್ನಾಟಕ ಪಶ್ಚಿಮ ಘಟ್ಟ ಸಂರಕ್ಷಣಾ ಕಾರ್ಯ ಪಡೆಯ ಅಧ್ಯಕ್ಷ ಶಾಂತೆಯAಡ ರವಿಕುಶಾಲಪ್ಪ ಮಾತನಾಡಿ, ಪಶ್ಚಿಮ ಘಟ್ಟ ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರದು ಅದೇ ರೀತಿ ಅರಣ್ಯದ ಆಸುಪಾಸಿನಲ್ಲಿ ವಾಸಿಸುವ ನಿವಾಸಿಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸಬೇಕಿದೆ. ಈ ನಿಟ್ಟಿನಲ್ಲಿ ಮಂಜಾಟಾ ಕಾಲೋನಿ ಮತ್ತು ಚೇಲಾವರದ ಕಬ್ಬೆ ವ್ಯಾಪ್ತಿಗೆ ಭೇಟಿ ನೀಡಿ ಪರಿಶೀಲಿಸಲಾಗಿದೆ. ಕಸ್ತೂರಿ ರಂಗನ್ ವರದಿಯ ಮರುಪರಿಶೀಲನೆ ಆಗಬೇಕಾಗಿದ್ದು ರಾಜ್ಯದಿಂದ ಕೇಂದ್ರಸರ್ಕಾರಕ್ಕೆ ಮರುಪರೀಶೀಲನೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ನೆನೆಗುದಿಯಲ್ಲಿರುವ ಕೂಟಿಯಾಲ, ಸುಬ್ರಹ್ಮಣ್ಯ, ಕಡಮಕಲ್ಲು, ಚೆಂಬು, ದಬ್ಬಡ್ಕ, ರಸ್ತೆ ಅಭಿವೃದ್ಧಿ ಸಾರ್ವಜನಿಕರಿಗೆ ಉಪಯೋಗವಾಗಿ ರುವುದರಿಂದ ಸರಕಾರದ ಪ್ರಯತ್ನ ಮುಂದುವರಿಸಲಾಗಿದೆ ಎಂದು ತಿಳಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ ಮಾತನಾಡಿ, ಪಾರಾಣೆ ಗ್ರಾ.ಪಂ. ಎಲ್ಲಾ ೯ ಸ್ಥಾನಗಳಿಗೆ ಬಿಜೆಪಿ ಅಭ್ಯರ್ಥಿಗಳು ಆಯ್ಕೆಯಾಗಿ ಕಾಂಗ್ರೆಸ್ ರಹಿತ ಆಡಳಿತಕ್ಕೆ ನಾಂದಿ ಹಾಡಿದೆ. ಜಿಲ್ಲೆಯ ೭೪ ಗ್ರಾ.ಪಂ.ಗಳಲ್ಲಿ ಬಿಜೆಪಿ ನಿಚ್ಚಳ ಬಹುಮತ ಸಾಧಿಸಿದೆ. ಉತ್ತಮ ಆಡಳಿತ ನೀಡಿ ಪಕ್ಷದ ಏಳಿಗೆಗೆ ಶ್ರಮವಹಿಸಿ ಎಂದು ಕರೆ ನೀಡಿದರು.
ಬಿಜೆಪಿ ರಾಜ್ಯ ಕಾರ್ಯದರ್ಶಿ ಮನು ಮುತ್ತಪ್ಪ ಮಾತನಾಡಿದರು. ಪಾರಾಣೆ ಶಕ್ತಿ ಕೇಂದ್ರದ ಅಧ್ಯಕ್ಷ ಅಪ್ಪನೆರವಂಡ ರಾಜಾ ಪೂವಯ್ಯ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ತಾ.ಪಂ. ಸದಸ್ಯೆ ಉಮಾಪ್ರಭು, ಜಿ.ಪಂ. ಮಾಜಿ ಉಪಾಧ್ಯಕ್ಷೆ ಬಿದ್ದಂಡ ಉಷಾದೇವಮ್ಮ, ನೂತನವಾಗಿ ಆಯ್ಕೆಗೊಂಡ ಗ್ರಾ.ಪಂ. ಸದಸ್ಯರಾದ ಕಾದಿರ ಉಮೇಶ್ ಪಳಂಗಪ್ಪ, ಬೊಳ್ಳಚೆಟ್ಟೀರ ಪ್ರಕಾಶ್ ಕಾಳಪ್ಪ, ಪಾಡೆಯಂಡ ಕಟ್ಟಿಕುಶಾಲಪ್ಪ, ನೆರೆಯಡಂಮ್ಮAಡ ಬೊಳ್ಯಿಮಯ್ಯ, ಎಳ್ತಂಡ ದಮಯಂತಿ, ಮುಕ್ಕಾಟಿರ ದಾಕ್ಷಾಯಿಣಿ, ಹೆಚ್.ಹೇಮಾವತಿ, ಮೇದರ ವಾಣಿ, ಪಿ.ಎಸ್. ಸುಮತಿ ಇದ್ದರು.
ಇದಕ್ಕೂ ಮೊದಲು ಮುಖ್ಯರಸ್ತೆಯಲ್ಲಿ ಗೆಲುವು ಸಾಧಿಸಿದ ಬಿಜೆಪಿ ಅಭ್ಯರ್ಥಿಗಳ ವಿಜಯೋತ್ಸವ ಮೆರವಣಿಗೆ, ಪಟಾಕಿ ಸಿಡಿಸಿ ಆಚರಿಸಿದರು.