ಮಡಿಕೇರಿ, ಜ. ೧೭ : ಹಾಸನ ತಾಲೂಕಿನ ಹೂವಿನಳ್ಳಿ ಕಾವಲು ಬಳಿ ಸೆಸ್ಕ್ ಕಿರಿಯ ಸಹಾಯಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂತೋಷ್ (೩೫) ಎಂಬವರನ್ನು ತಾ.೧೫ ರಂದು ಗುಂಡಿಕ್ಕಿ ಹತ್ಯೆಗೈದಿದ್ದ ಪ್ರಕರಣಕ್ಕೆ ಸಂಬAಧಿಸಿ ದಂತೆ ಕೊಡಗು ಮೂಲದ ಮೂವರು ಸೇರಿದಂತೆ ನಾಲ್ವರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಜಿಲ್ಲೆಯ ಮಕ್ಕಂದೂರು ಗ್ರಾಮದ ಅನುಕುಲ, ರಾಜ, ಸತೀಶ ಹಾಗೂ ಹಾಸನ ಜಿಲ್ಲೆಯ ಆದರ್ಶ್ ಎಂಬುವ ವರನ್ನು ಹಾಸನ ಜಿಲ್ಲಾ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಘಟನೆ ಹಿನ್ನೆಲೆ ಮೂಲತಃ ಹಾಸನ ಜಿಲ್ಲೆಯ ಅರೇಕಲ್ಲು ಗ್ರಾಮದ, ಪ್ರಸ್ತುತ ಹಾಸನದ ವಿಶ್ವೇಶ್ವರ ಬಡಾವಣೆಯಲ್ಲಿ ನೆಲೆಸಿದ್ದ ಹತ್ಯೆಗೀಡಾದ ಸಂತೋಷ್ ತಾ.೧೫ ರಂದು ಕೆಲಸಕ್ಕೆ ತೆರಳದೆ, ನೆಂಟರು ಬಂದಿದ್ದಾರೆ ಎಂದು ಮನೆಯವರಿಗೆ ಹೇಳಿ ಮದ್ಯಾಹ್ನ ೩ ಗಂಟೆಗೆ ಪಾರ್ಟಿಗೆಂದು ಮನೆಯಿಂದ ತೆರಳಿದ್ದಾರೆೆ ಎನ್ನಲಾಗಿದೆ. ತಡರಾತ್ರಿಯಾದರು ಸಂತೋಷ್ ಮನೆಗೆ ಬಾರದ ಹಿನ್ನೆಲೆ ಗಾಬರಿಗೊಂಡ ಪತ್ನಿ ಜಯಶ್ರೀ ಫೋನ್ ಮಾಡಿದ್ದಾರೆ. ಸಂತೋಷ್ ಫೋನ್ ಸ್ವೀಕರಿಸದ ಹಿನ್ನೆಲೆ ಹುಡುಕಾಟ ನಡೆಸಿದಾಗ ತಾ.೧೬ ರಂದು ಹಾಸನ ಜಿಲ್ಲೆಯ ಹೂವಿನಹಳ್ಳಿ ಕಾವಲು ಬಳಿ ಮೃತದೇಹ ಪತ್ತೆಯಾಗಿದೆ. ಹತ್ಯೆಯಾದ ಜಾಗದಲ್ಲಿ ಆಹಾರದ ಪೊಟ್ಟಣ, ಮದ್ಯದ ಬಾಟಲ್ ದೊರೆತಿತ್ತು. ಪಾರ್ಟಿ ನಡೆದ ನಂತರ ಶೂಟೌಟ್ ಆಗಿರಬಹುದು ಎಂದು ಶಂಕಿಸಿ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದರು. ತನಿಖೆ ನಡೆಸಿದ ಪೊಲೀಸರು ಜಿಲ್ಲೆಯ ಮಕ್ಕಂದೂರು ಗ್ರಾಮದ ಅನುಕುಲ, ರಾಜ ಹಾಗೂ ಸತೀಶ್‌ರನ್ನು ನಿನ್ನೆ ತಡರಾತ್ರಿ ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಅಪ್ಪ ಸಣ್ಣೇಗೌಡ ಮೃತಪಟ್ಟ ಬಳಿಕ ಅವರ ಕೆಲಸವನ್ನು ಮೃತ ಸಂತೋಷ್ ಪಡೆದುಕೊಂಡಿದ್ದರು. ಆದರೆ, ೨ ವರ್ಷದಿಂದ ಕರ್ತವ್ಯಕ್ಕೆ ಗೈರಾಗುತ್ತಿದ್ದ ಹಿನ್ನೆಲೆ ಸಂತೋಷ್ ವಿರುದ್ಧ ನೋಟಿಸ್ ಜಾರಿಯಾಗಿತ್ತು ಎನ್ನಲಾಗಿದೆ.

ವ್ಯವಸ್ಥಿತ ಕೊಲೆ

ಸಂತೋಷ್ ತನ್ನ ಕೌಟುಂಬಿಕ ವೈಮನಸ್ಸು ಬಗೆಹರಿಸಲು ತನ್ನ ಸಂಬAಧಿ ಅನುಕುಲನನ್ನು ಪಾರ್ಟಿಗೆ ಕರೆಸಿಕೊಂಡಿದ್ದರು ಎನ್ನಲಾಗಿದೆ. ಆದರೆ, ಈ ಆಹ್ವಾನವೇ ಅವರಿಗೆ ಮುಳುವಾಯಿತು. ರಿವಾಲ್ವರ್‌ನಿಂದ ಐದಾರು ಸುತ್ತು ಗುಂಡು ಹಾರಿಸಿ ಕೊಲೆ ಮಾಡಿರುವ ಕುರಿತು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಅನುಕುಲ ಹಾಗೂ ಆದರ್ಶ್ ಈ ಕೊಲೆ ಪ್ರಕರಣದ ಮುಖ್ಯ ರೂವಾರಿಗಳಾಗಿದ್ದಾರೆ ಎಂದು ಆರಂಭಿಕ ತನಿಖೆಯಿಂದ ತಿಳಿದುಬಂದಿರುವುದಾಗಿ ಹಾಸನ ಪೊಲೀಸ್ ಮೂಲಗಳಿಂದ ಗೊತ್ತಾಗಿದೆ. ಪ್ರಕರಣದ ಬಗ್ಗೆ ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್‌ಗೌಡ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಐದಾರು ದಿನಗಳಿಂದ ಸಂಚು ರೂಪಿಸಿ ವ್ಯವಸ್ಥಿತವಾಗಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಇನ್ನೂ ಹತ್ಯೆಯ ಪ್ರಮುಖ ಆರೋಪಿ ಆದರ್ಶ್ ಮೃತ ಸಂತೋಷ್‌ನ ಬಾವನಾಗಿದ್ದು, ಮತ್ತೋರ್ವ ಪ್ರಮುಖ ಆರೋಪಿ ಅನುಕುಲ ಆದರ್ಶ್ನ ಚಿಕ್ಕಪ್ಪನ ಮಗನಾಗಿದ್ದಾನೆ. ಇತರ ಆರೋಪಿಗಳು ಅನುಕುಲನ ಸ್ನೇಹಿತರು ಎಂದು ತಿಳಿದು ಬಂದಿದೆ. ಹಾಸನ ಗ್ರಾಮಾಂತರ ಸಿಪಿಐ ಸುರೇಶ್ ಅವರು ಪ್ರಕರಣದ ವಿವರ ತನಿಖೆಯನ್ನು ಮುಂದುವರೆಸಿದ್ದಾರೆ.