ಮಡಿಕೇರಿ, ಜ. ೧೮: ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ವತಿಯಿಂದ ಭೂಹೀನ ಬಡವರ ಹಾಗೂ ಕೊಡಗಿನ ವಿವಿಧ ಸಮಸ್ಯೆ ಮುಂದಿಟ್ಟು ತಾ.೨೫ ರಂದು ಮಡಿಕೇರಿಯಲ್ಲಿ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ಅಧ್ಯಕ್ಷ ಅಮೀನ್ ಮೊಹಿಸಿನ್ ತಿಳಿಸಿದರು.

ಅಂದು ಬೆಳಿಗ್ಗೆ ೧೧ ಗಂಟೆಗೆ ನಗರದ ಎವಿ ಶಾಲೆಯಿಂದ ಜಾಥಾ ಆರಂಭಗೊAಡು, ಮಹದೇವಪೇಟೆ ರಸ್ತೆಯಲ್ಲಿ ಸಾಗಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಸಮಾಪ್ತಿಗೊಳ್ಳಲಿದೆ. ನಂತರ ಸಮಾವೇಶಗೊಂಡು ಜಿಲ್ಲೆಯ ಜ್ವಲಂತ ಸಮಸ್ಯೆಗಳನ್ನು ಉದ್ದೇಶಿಸಿ ರಾಜ್ಯ ಹಾಗೂ ಜಿಲ್ಲಾ ನಾಯಕರು ಮಾತನಾಡಲಿದ್ದಾರೆ. ಈ ಸಂದರ್ಭ ನಮ್ಮ ಬೇಡಿಕೆಗೆ ಸ್ಪಂದಿಸಲು ಜಿಲ್ಲಾಡಳಿಕ್ಕೆ ಫೆಬ್ರವರಿ ಅಂತ್ಯದವರೆಗೆ ಕಾಲಾವಕಾಶ ನೀಡಲಾಗುವುದು. ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಮಾರ್ಚ್ ತಿಂಗಳಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯ ಮುಂಭಾಗ ದಿಲ್ಲಿ ಮಾದರಿಯ ಹೋರಾಟವನ್ನು ರೂಪಿಸಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದರು.

೨೦೧೬ರಿಂದ ಆರಂಭಗೊAಡ ಸಮಿತಿ ಜಿಲ್ಲೆಯ ಭೂಮಿ ಮತ್ತು ವಸತಿ ಹಕ್ಕು ವಂಚಿತರಿಗಾಗಿ ಹೋರಾಟ ನಡೆಸುತ್ತಾ ಬರುತ್ತಿದೆ. ಮುಂದೆಯೂ ಹೋರಾಟದ ಮೂಲಕವೇ ನಮ್ಮ ಹಕ್ಕನ್ನು ಪಡೆದುಕೊಳ್ಳುತ್ತೇವೆ ಎಂದ ಅವರು, ಪಾಲೇಮಾಡಿನಲ್ಲಿ ಬುಡಕಟ್ಟು ಜನರಿಗಾಗಿ ಗುರುತಿಸಲಾಗಿದ್ದ ಸ್ಮಶಾನ ಜಾಗದಲ್ಲಿ ಇಂದು ಕ್ರಿಕೆಟ್ ಸ್ಟೇಡಿಯಂ ಕಟ್ಟಲು ನೀಡಲಾಗಿದೆ, ಇದು ಖಂಡನೀಯ. ಚೆರಿಯಪರಂಬುವಿನಲ್ಲಿ ಮೂಲಭೂತ ಸೌಲಭ್ಯವಿಲ್ಲದೇ ಜನರು ಪರದಾಡುತ್ತಿದ್ದಾರೆ. ಆದರೂ ಜಿಲ್ಲಾಡಳಿತ ಕಣ್ಮುಚ್ಚಿ ಕುಳಿತಿದೆ. ಅಂದಾನಿಪುರದ ಜಾಗವನ್ನು ಪೊಲೀಸ್ ಮೈದಾನಕ್ಕೆ ಬಿಟ್ಟುಕೊಡಲಾಗಿದೆ. ಇವೆಲ್ಲವನ್ನು ಖಂಡಿಸಿ, ದಿಡ್ಡಳ್ಳಿ ಹೋರಾಟದ ಮಾದರಿಯಲ್ಲಿ ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಹೋರಾಟ ರೂಪಿಸಲಾಗುವುದು ಎಂದರು.

ರಾಜ್ಯ ಸಮಿತಿ ಸದಸ್ಯ ಡಿ.ಎಸ್.ನಿರ್ವಾಣಪ್ಪ, ಸಮಿತಿ ಕಾರ್ಯದರ್ಶಿ ಕೆ.ಮೊಣ್ಣಪ್ಪ, ಸದಸ್ಯೆ ಪಿ.ಎ.ಕುಸುಮ, ಪ್ರಮುಖರಾದ ಹೇಮಂತ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ಇದ್ದರು.