ಬಾಳೆಲೆ, ಜ. ೧೭: ದ.ಕೊಡಗಿನಲ್ಲಿ ನಿರಂತರ ಕಾಡಾನೆ, ಹುಲಿ ದಾಳಿಯಿಂದ ತತ್ತರಿಸಿರುವ ಜನರು ಇದೀಗ ಕರಡಿ ದಾಳಿಯನ್ನು ಎದುರಿಸ ಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇಂದು ಮುಂಜಾನೆಯ ವೇಳೆ ಬಾಳೆಲೆ ಸಮೀಪದ ನಿಟ್ಟೂರು ಗ್ರಾಮದ ಜಾಗಲೆಯ ನಿವಾಸಿ ಜೇನುಕುರುಬರ ರಾಜು (೩೫) ಎಂಬ ಕಾರ್ಮಿಕ ಸಮೀಪದ ಕಾಫಿ ತೋಟಕ್ಕೆ ಕೆಲಸಕ್ಕೆ ತೆರಳುತ್ತಿದ್ದ ವೇಳೆ ಜಾಗಲೆ ಮುಖ್ಯ ರಸ್ತೆಯಲ್ಲಿ ಸಮೀಪದ ತೋಟದಿಂದ ಎರಡು ಕರಡಿಗಳು ದಿಢೀರನೆ ಎದುರಾಗಿದೆ.ಕರಡಿ ಕಂಡ ಕಾರ್ಮಿಕ ತಪ್ಪಿಸಿಕೊಳ್ಳಲು ಓಡಿದರು. ಬೆನ್ನಟ್ಟಿದ ಕರಡಿಗಳು ರಾಜುವಿನ ಮೇಲೆ ದಾಳಿ ನಡೆಸಿವೆ. ದಾಳಿ ಪರಿಣಾಮ ಕೈ, ಬೆನ್ನಿನ ಭಾಗಕ್ಕೆ ಗಂಭೀರ ಸ್ವರೂಪದ ಗಾಯಗಳಾಗಿವೆ.ನಂತರ ಕರಡಿಗಳು ಸಮೀಪದ ಕಾಫಿ ತೋಟದಲ್ಲಿ ಮರೆಯಾಗಿವೆ. ನಿಟ್ಟೂರು ಪಂಚಾಯತಿ ಸದಸ್ಯ ಚೆಕ್ಕೆರ ಸೂರ್ಯ ಅಯ್ಯಪ್ಪ ಘಟನಾ ಸ್ಥಳಕ್ಕೆ ತೆರಳಿ ಗಾಯಗೊಂಡ ವ್ಯಕ್ತಿಯನ್ನು ಬಾಳೆಲೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದರು. ಬಳಿಕ ಹೆಚ್ಚಿನ ಚಿಕಿತ್ಸೆಗೆ (ಮೊದಲ ಪುಟದಿಂದ) ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು.
ಕ್ರಮಕ್ಕೆ ಒತ್ತಾಯ: ನಿಟ್ಟೂರು ಭಾಗದಲ್ಲಿ ಕರಡಿಗಳ ಹಾವಳಿ ಹೆಚ್ಚಾಗಿದ್ದು, ಕೆಲವು ಕರಡಿಗಳು ತೋಟಗಳಲ್ಲೇ ಬೀಡುಬಿಟ್ಟಿದ್ದು, ಇವುಗಳನ್ನು ಅರಣ್ಯ ಇಲಾಖೆ ಕಾಡಿಗಟ್ಟಬೇಕು. ಕರಡಿಗಳು ಕಾಫಿ ತೊಟಗಳಲ್ಲಿ ಹಣ್ಣು ಹಂಪಲು ಗಿಡಗಳ ಕೊಂಬೆಗಳನ್ನು ಮುರಿದು ತಿನ್ನುವುದಲ್ಲದೆ ಈ ಸಂದರ್ಭದಲ್ಲಿ ಕಾಫಿಗಿಡಗಳ ರೆಂಬೆಗಳು ಮುರಿದು ಬೆಳೆಗಾರರಿಗೆ ಅಪಾರ ಪ್ರಮಾಣದ ನಷ್ಟವಾಗುತ್ತಿದ್ದು, ಅರಣ್ಯ ಇಲಾಖೆ ಸೂಕ್ತ ಪರಿಹಾರ ನೀಡಬೇಕು.
ಕರಡಿಯೊಂದು ಕಾಫಿತೋಟದಲ್ಲಿ ಮರಿ ಹಾಕಿದ್ದು ತಾಯಿ ಕರಡಿ ಹತ್ತಿರ ಹೋದವರ ಮೇಲೆ ದಾಳಿ ಮಾಡುವ ಸಾಧ್ಯತೆ ಇದ್ದು, ಅರಣ್ಯ ಇಲಾಖೆ ತೀವ್ರ ನಿಗಾ ವಹಿಸುವಂತೆ ಗ್ರಾಮ ಪಂಚಾಯಿತಿ ಸದಸ್ಯರಾದ ಕಾಟಿಮಾಡ ಶರೀನ್ ಮುತ್ತಣ್ಣ, ಪಡಿಞರಂಡ ಕವಿತಾ ಮತ್ತು ಅಮ್ಮಣಿ ಆಗ್ರಹಿಸಿದ್ದಾರೆ.
-ಹೆಚ್.ಕೆ. ಜಗದೀಶ್, ಎನ್.ಎನ್. ದಿನೇಶ್, ಪ್ರಭು