ಸುಂಟಿಕೊಪ್ಪ, ಜ. ೮: ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಡಾನೆ ಹಾವಳಿಯಿಂದ ಕೃಷಿ ಫಸಲು ನಾಶವಾಗಿದೆ.
ಐಗೂರಿನ ಮಲ್ಲಚೀರ ಕುಟುಂಬಸ್ಥರ ಡಿ.ಡಿ. ಬೆಳ್ಯಪ್ಪ ಅವರ ಕಾಫಿ ತೋಟಕ್ಕೆ ಕಾಡಾನೆಗಳು ಆಹಾರ ಅರಸಿ ಬಂದಿದ್ದು, ಕಾರ್ಗಿಲ್ ಯುದ್ಧದಲ್ಲಿ ಮಡಿದ ಸಿಂಗೂರು ಮೇದಪ್ಪ ಅವರ ತೋಟದ ಬೇಲಿಯನ್ನು ತುಳಿದು ಮುರಿದಿದ್ದು ಹಲಸಿನಕಾಯಿ, ಬಾಳೆಗಿಡ, ತೆಂಗಿನ ಗಿಡಗಳನ್ನು ತಿಂದು ಹಾಕಿದೆ ಅಡ್ಡಾದಿಡ್ಡಿಯಾಗಿ ರಾತ್ರಿ ತೋಟದೊಳಗೆ ನುಗ್ಗಿದ್ದರಿಂದ ಈ ವಿಭಾಗದ ಬೆಳೆಗಾರರಿಗೆ ಸಂಕಷ್ಟ ಉಂಟಾಗಿದೆ. ಟಾಟಾ ಕಿಬ್ರಿ ತೋಟ ಸಂಪಿಗೆಕೊಲ್ಲಿ, ಮಲ್ಲಪ್ಪ ತೋಟಕ್ಕೆ ಆಹಾರ ಅರಸಿ ಬರುತ್ತಿದ್ದ ಕಾಡಾನೆಗಳು ದಿಢೀರನೆ ಐಗೂರಿನ ಹೃದಯಭಾಗದ ರೈತರ ತೋಟಕ್ಕೆ ನುಗ್ಗಿ ಕೃಷಿ ಫಸಲು ನಾಶಪಡಿಸಿದ್ದು ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಈ ವ್ಯಾಪ್ತಿಯಲ್ಲಿ ರಾತ್ರಿವೇಳೆ ವಾಹನದಲ್ಲಿ ಸಂಚರಿಸಲು ಗ್ರಾಮಸ್ಥರು ಹಿಂದೇಟು ಹಾಕುತ್ತಿದ್ದಾರೆ.
ರಾತ್ರಿ ವೇಳೆ ಎಲ್ಲೆಂದರಲ್ಲಿ ಆಹಾರ ಅರಸಿ ಬರುವ ಕಾಡಾನೆಗಳಿಂದ ಬೆಳಗ್ಗಿನ ಜಾವ ವಾಕಿಂಗ್ ತೆರಳುವ ವೃದ್ಧರು, ಪುರುಷರು, ಮಹಿಳೆಯರು ‘ವಾಕಿಂಗ್’ ಮಾಡುವುದಕ್ಕೆ ಭಯಪಡುತ್ತಿದ್ದಾರೆ.