ವೀರಾಜಪೇಟೆ, ಜ. ೫: ಕೋವಿಡ್ ಹಿನ್ನೆಲೆ ನಗರದ ಮಲೆತಿರಿಕೆ ಬೆಟ್ಟದ ಶ್ರೀ ಅಯ್ಯಪ್ಪ ಸ್ವಾಮಿಯ ವಾರ್ಷಿಕ ಪೂಜೆಗಳು ಆಡಂಬರವಿಲ್ಲದೆ ನಡೆಯಿತು. ನಗರಕ್ಕೆ ಕಲಶಪ್ರಾಯದಂತಿರುವ ಮಲೆತಿರಿಕೆ ಬೆಟ್ಟದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ವಾರ್ಷಿಕ ಪೂಜಾ ಮಹೋತ್ಸವ ವ್ರತ ಮಾಲದಾರಿಗಳು ಇಲ್ಲದೆ ಸರಳವಾಗಿ ನೆರವೇರಿತು.ಡಿ. ೩೦ ರಿಂದ ಆರಂಭವಾದ ಪೂಜಾ ಉತ್ಸವ ಸಂಜೆ ಗುಳಿಗನ ಆರಾಧನೆ, ಕೊಡಿಮರ ನಿಲ್ಲಿಸುವುದು, ಉತ್ಸವದ ಆರಾಧನೆಗಳು ನಡೆದು ಜ. ೧ ರ ಪ್ರಾಥ:ಕಾಲ ಗಣಪತಿ ಹೋಮ, ಲಕ್ಷ್ಮೀ ಪೂಜೆ ಮತ್ತು ಶ್ರೀ ಅಯ್ಯಪ್ಪ ಸ್ವಾಮಿಗೆ ಮಹಾಪೂಜೆ ಸಲ್ಲಿಸಲಾಯಿತು.

ಕೋವಿಡ್ ಸಂಭAದಿಸಿದAತೆ ಪ್ರಸ್ತುತ ವರ್ಷದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿಯ ವ್ರತದಾರಿಗಳಿಂದ ಸಲ್ಲುವ ಲಕ್ಷಾರ್ಚನೆ ದೇಗುಲ ಪುರೋಹಿತ ವರ್ಗದಿಂದ ಸಲ್ಲಿಸಲಾಯಿತು. ಯಾವುದೇ ಆಡಂಬರವಿಲ್ಲದೆ ಶ್ರೀ ಸ್ವಾಮಿಗೆ ವಾರ್ಷಿಕ ಪೂಜಾ ಕೈಂಕರ್ಯಗಳು ನಡೆದವು. ದೇಗುಲದಲ್ಲಿ ಭಕ್ತಾದಿಗಳ ಸಂಖ್ಯೆ ವಿರಳವಾಗಿತ್ತು.

ಪೂಜಾ ಕಾರ್ಯಕ್ರಮದಲ್ಲಿ ದೇವಾಲಯದ ಆಡಳಿತ ಮಂಡಳಿಯ ಅಧ್ಯಕ್ಷ ಎಂ.ಕೆ. ಪೂವಯ್ಯ, ಕಾರ್ಯದರ್ಶಿಗಳಾದ ಎನ್.ಎಸ್. ಶ್ಯಾಮ್ ಕುಮಾರ್, ಖಜಾಂಚಿಗಳಾದ ಎಂ.ಕೆ. ಪ್ರದ್ಯುಮ್ನ ಎ.ಆರ್. ಯೋಗಾನಂದ ರಾವ್, ಚಿತ್ರಭಾನು, ಡಿ.ಎಂ. ರಾಜ್ ಕುಮಾರ್, ದಶರಥ ಆಚಾರ್. ವಿ.ಕೆ. ಚಂದ್ರನ್ ಹಾಗೂ ಇತರರು ಹಾಜರಿದ್ದರು.