ಮಡಿಕೇರಿ, ಜ.೫: ಇದೇ ಮೊದಲ ಬಾರಿಗೆ ಎಂಬAತೆ ಹಳ್ಳಿಗಟ್ಟು ಮೂಕಳೇರ ಕುಟುಂಬದ ಯುವ ಸಂಘಟನೆಯ ಸಂತೋಷ ಕೂಟ ಇತ್ತೀಚೆಗೆ ಹಳ್ಳಿಗಟ್ಟುವಿನ ಮೂಕಳೇರ ಐನ್‌ಮನೆಯಲ್ಲಿ ಮೂಕಳೇರ ಧನು ಅಪ್ಪಣ್ಣ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಂದರ್ಭ ಪುತ್ತರಿ ಕೋಲಾಟ್, ಪುತ್ತರಿ ಪಾಟ್, ಉಮ್ಮತಾಟ್, ಕೊಡವ ನೃತ್ಯ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಗಮನ ಸೆಳೆಯಿತು.ಯುವ ಸಮುದಾಯವೇ ಸೇರಿ ಅವರ ಪರಿಕಲ್ಪನೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕುಟುಂಬದ ಹಿರಿಯರ ನಡುವೆ ಅವರಿಗೆ ತಿಳಿದು ತಿಳಿಯದಂತೆ ಏನಾದರೂ ಅಹಿತಕರ ಘಟನೆ ನಡೆದು ಕುಟುಂಬ ನಡುವಿನ ಮನಸ್ತಾಪ ಉಂಟಾಗಿದ್ದರೆ ಅದನ್ನು ಕಿರಿಯರು ಸರಿಪಡಿಸಿಕೊಂಡು ಅನ್ಯೋನ್ಯತೆಯಿಂದ ಇರಲು ಪಣತೊಡಲಾಯಿತು ಮಾತ್ರವಲ್ಲ ಕೊಡವಾಮೆಗೆ ಹೆಚ್ಚಿನ ಆದ್ಯತೆ ನೀಡಲು ನಿರ್ಣಯ ಕೈಗೊಳ್ಳಲಾ ಯಿತು.
ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಕುಟುಂಬದ ಪಟ್ಟೆದಾರ ಮೂಕಳೇರ ಎಸ್ ಕುಶಾಲಪ್ಪ ಯುವ ಜನಾಂಗ ಮುಂದೆ ಬಂದಿರುವುದು ಸ್ವಾಗತಾರ್ಹ ಈ ದೇಶದ ಆಸ್ತಿಯಾಗಿರುವ ಯುವ ಜನಾಂಗ ಕುಟುಂಬದ ಒಗ್ಗೂಡುವಿಕೆಗೆ ಸಹಕಾರಿಯಾಗಬೇಕು ಎಂದರು.
ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ ಮೂಕಳೇರ ಯುವ ಸಂಘಟನೆಯ ಅಧ್ಯಕ್ಷ ಧನು ಅಪ್ಪಣ್ಣ ಮಾತನಾಡಿ ಇದು ಪ್ರಾಯೋಗಿಕ ಕಾರ್ಯಕ್ರಮ ವಾಗಿದ್ದು ಮುಂದಿನ ದಿನಗಳಲ್ಲಿ ಅತಿಥಿಗಳನ್ನು ಕರೆಸಿ ಕಾರ್ಯಕ್ರಮ ಮಾಡಲಾಗುತ್ತದೆ ಎಂದರು.
ವೇದಿಕೆಯಲ್ಲಿ ಕುಟುಂಬದ ಅಧ್ಯಕ್ಷ ಮೂಕಳೇರ ನಾಣಿ, ಕಾರ್ಯದರ್ಶಿ ಮೂಕಳೇರ ನಟರಾಜ್ ಉಪಸ್ಥಿತರಿದ್ದರು. ದೇಚಮ್ಮ ಪ್ರಾರ್ಥಿಸಿ, ತುಳಸಿ ತಂಗಮ್ಮ ಸ್ವಾಗತಿಸಿದರು. ಮೂಕಳೇರ ಧನು ಅಪ್ಪಣ್ಣ ವಂದಿಸಿ, ಭೂಮಿಕ ನಿರೂಪಿಸಿದರು.
ಮೂಕಳೇರ ಯುವ ಸಂಘಟನೆಯ ಸಂತೋಷ ಕೂಟಕ್ಕೆ ಅಖಿಲ ಕೊಡವ ಸಮಾಜ ಯೂತ್ ವಿಂಗ್ ಮೆಚ್ಚುಗೆ ವ್ಯಕ್ತಪಡಿಸಿದೆ. ಯೂತ್ ವಿಂಗ್ ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ ಕುಟುಂಬದ ಯುವಕರು ನೂತನವಾಗಿ ಯುವ ಸಂಘಟನೆ ರಚಿಸಿ ಕಾರ್ಯಕ್ರಮ ಹಮ್ಮಿಕೊಂಡಿದ್ದು ಒಳ್ಳೆಯ ಬೆಳವಣಿಗೆ. ಈಗಾಗಲೇ ಯುವ ಜನಾಂಗ ಅಖಿಲ ಕೊಡವ ಸಮಾಜ ಯೂತ್ ವಿಂಗ್'ಗೆ ಬೆಂಬಲ ವ್ಯಕ್ತಪಡಿಸಿದ್ದು, ಮೂಕಳೇರ ಕುಟುಂಬದ ಯುವಕರು ಈ ಹಿಂದೆಯೇ ಯೂತ್ ವಿಂಗ್ ರಚಿಸುವ ಪ್ರಸ್ತಾವನೆಯನ್ನು ಮುಂದೆ ಇಟ್ಟಿದ್ದರು. ಇವರಿಗೆ ನಮ್ಮ ಸಂಪೂರ್ಣ ಬೆಂಬಲವಿದೆ. ಆದರೆ ಸಣ್ಣ ಸಣ್ಣ ಕುಟುಂಬಗಳಿಗೆ ಯೂತ್ ವಿಂಗ್ ರಚಿಸಲು ಕಷ್ಟಸಾಧ್ಯವಾಗಿರುವ ಕಾರಣ ಮುಂದಿನ ದಿನಗಳಲ್ಲಿ ಊರೂರಿನಲ್ಲಿ ಯೂತ್ ವಿಂಗ್ ರಚಿಸುವ ಯೋಜನೆ ಇದೆ ಎಂದಿದ್ದಾರೆ.