ಕುಶಾಲನಗರ, ಜ. ೫: ಕುಶಾಲನಗರ ತಾಲೂಕು ಅಧಿಕೃತ ಘೋಷಣೆಯಾಗುವಲ್ಲಿ ಮಡಿಕೇರಿ ಕ್ಷೇತ್ರ ಶಾಸಕ ಎಂ.ಪಿ ಅಪ್ಪಚ್ಚು ರಂಜನ್ ಅವರ ಪ್ರಯತ್ನ ಪ್ರಮುಖದ್ದಾಗಿದೆ ಎಂದು ಬಿಜೆಪಿ ಸೋಮವಾರಪೇಟೆ ತಾಲೂಕು ವಕ್ತಾರ ಕೆ.ಜಿ. ಮನು ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕುಶಾಲನಗರ ನೂತನ ತಾಲೂಕು ಅಧಿಕೃತ ಘೋಷಣೆ ಹೊರಬಿದ್ದ ಬೆನ್ನಲ್ಲೇ ಕಾಂಗ್ರೆಸ್‌ನ ವಿ.ಪಿ. ಶಶಿಧರ್ ಮತ್ತು ಜಿಲ್ಲಾ ಪಂಚಾಯಿತಿ ಸದಸ್ಯೆ ಕೆ.ಪಿ. ಚಂದ್ರಕಲಾ ತಮ್ಮ ಹೋರಾಟದಿಂದ ಇದು ಸಾಧ್ಯವಾಯಿತು ಎಂದು ಬಿಂಬಿಸಿ ಕೊಳ್ಳುತ್ತಿರುವುದು ಇತ್ತೀಚಿನ ದಿನಗಳಲ್ಲಿ ಕಂಡುಬರುತ್ತಿದ್ದು, ತಾಲೂಕು ರಚನೆಗೆ ಹಿಂದಿನ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಮತ್ತು ಪ್ರಸಕ್ತ ಬಿಜೆಪಿ ಸರ್ಕಾರ ಪ್ರಮುಖ ಕಾರಣ ಎಂದು ತಿಳಿಸಿದರು.

ಕಳೆದ ೩ ದಶಕಗಳಿಂದ ನೂತನ ತಾಲೂಕು ಹೋರಾಟಕ್ಕಾಗಿ ಹಲವು ಸಂಘಟನೆಗಳು ಸೇರಿ ಹೋರಾಟ ನಡೆಸಿದ್ದು ಇದೀಗ ಪ್ರತಿಫಲ ಸಂದಿದೆ ಎಂದರು. ಈ ಸಂದರ್ಭ ಮಾತನಾಡಿದ ಕೂಡಾ ಅಧ್ಯಕ್ಷ ಎಂ.ಎA. ಚರಣ್, ಮುಖ್ಯಮಂತ್ರಿಯಾಗಿದ್ದ ಆರ್. ಗುಂಡೂರಾಯರ ನಂತರ ಕ್ಷೇತ್ರಕ್ಕೆ ಯೋಜನೆಗಳನ್ನು ತಂದಿರುವ ಕ್ಷೇತ್ರ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರ ಕೊಡುಗೆ ಅಪಾರವಾಗಿದೆ ಎಂದು ವಿವರ ನೀಡಿದರು.

ಉಸ್ತುವಾರಿ ಸಚಿವರಾಗಿದ್ದ ದಿನೇಶ್ ಗುಂಡೂರಾವ್ ಯಾವುದೇ ರೀತಿಯ ಸ್ಪಂದನ ನೀಡಿಲ್ಲ ಕಾಂಗ್ರೆಸ್ ಸರ್ಕಾರ ಕೂಡಾ ಹೋರಾಟವನ್ನು ಪರಿಗಣಿಸದೇ ನಿರ್ಲಕ್ಷö್ಯ ತಾಳಿತು ಎಂದರು. ನಗರ ಬಿಜೆಪಿ ಅಧ್ಯಕ್ಷ ಉಮಾಶಂಕರ್ ಮಾತನಾಡಿ, ನಿಜವಾದ ಮಾಹಿತಿಗಳನ್ನು ಮರೆಮಾಚಿ ಸಾಧನೆಗಳನ್ನು ತಮ್ಮದೆಂದು ಬಿಂಬಿಸಿಕೊಳ್ಳುವುದು ಸರಿಯಲ್ಲ.

ಕಾಂಗ್ರೆಸ್ ಸರ್ಕಾರ ಇದ್ದ ಸಂದರ್ಭ ಉಸ್ತುವಾರಿ ಸಚಿವರಿಗೆ ಮಾಹಿತಿ ಇಲ್ಲದಿರುವ ಹಿನ್ನೆಲೆ ತಾಲೂಕು ರಚನೆ ವಿಳಂಬಕ್ಕೆ ಕಾರಣವಾಯಿತು ಎಂದರು. ಪಟ್ಟಣ ಪಂಚಾಯಿತಿ ಅಧ್ಯಕ್ಷ ಜಯವರ್ಧನ್, ಬಿಜೆಪಿ ಪ್ರಮುಖರಾದ ಎಂ.ಡಿ. ಕೃಷ್ಣಪ್ಪ, ಪ್ರವೀಣ್ ಮತ್ತಿತರರು ಗೋಷ್ಠಿಯಲ್ಲಿದ್ದರು.